ಗುಡ್ಡದಮಲ್ಲಾಪುರದ ಕಿರಿಯ ಶ್ರೀ ಲಿಂಗೈಕ್ಯ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜು. 29
ತಾಲೂಕಿನ ಸುಕ್ಷೇತ್ರ ಗುಡ್ಡದಮಲ್ಲಾಪುರ ಮೂಕಪ್ಪ ಶಿವಯೋಗಿ ದಾಸೋಹಮಠದ ಕಿರಿಯ ಶ್ರೀಗಳು (ವೃಷಭ ರೂಪಿ) ಸೋಮವಾರ ಬೆಳಗ್ಗೆ 11ಕ್ಕೆ ಶ್ರೀಮಠದಲ್ಲಿ ಲಿಂಗೈಕ್ಯರಾದರು.
ಎಂದಿನಂತೆ ಮೂಕಪ್ಪಶ್ರೀಗಳು ಲಿಂಗಪೂಜೆ ಬಳಿಕ ಧ್ಯಾನದಲ್ಲಿ ತೊಡಗಿರುವ ಸಂದರ್ಭದಲ್ಲಿ ಕೊನೆಯುಸಿರೆಳೆದರು. ಕಳೆದ ಕೆಲ ದಿನಗಳಿಂದ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದರಿಂದ 8 ದಿನಗಳಿಂದ ಮಠದಲ್ಲಿಯೇ ವಿಶ್ರಾಂತಿ ಪಡೆದಿದ್ದರು.
2004ರಲ್ಲಿ ಹಾನಗಲ್ ತಾಲೂಕು ಕರೇಕ್ಯಾತನಹಳ್ಳಿ ಗ್ರಾಮದ ವೃಷಭವೊಂದರ ಗರ್ಭದಲ್ಲಿ ಜನಿಸಿದ್ದ ಮೂಕಪ್ಪಶ್ರೀಗಳಿಗೆ ಶ್ರೀಶೈಲ ಪೀಠದ ಶಾಖಾಮಠ ಹೊನ್ನಾಳಿ ಹಿರೇಕಲ್ಮಠದ ಚಂದ್ರಶೇಖರ ಶ್ರೀಗಳು ಪಟ್ಟಾಧಿಕಾರ ವಹಿಸಿದ್ದರು.
ಕಣ್ಣೀರಿಟ್ಟ ಭಕ್ತರು: ಸುದ್ದಿ ತಿಳಿಯುತ್ತಿದ್ದಂತೆ ಅಂತಿಮ ದರ್ಶನ ಪಡೆಯಲು ಮಠಕ್ಕೆ ಧಾವಿಸಿದ ಭಕ್ತ ಸಮೂಹ ಕಣ್ಣೀರಿಟ್ಟರು. ಅಂತ್ಯ ಸಂಸ್ಕಾರವು ಶ್ರೀಮಠದ ಆವರಣದಲ್ಲಿ ಜು. 30ರ ಬೆಳಗ್ಗೆ 10ಕ್ಕೆ ಸಕಲ ವಿಧಿವಿಧಾನಗಳೊಂದಿಗೆ ನೆರವೇರಲಿದೆ ಎಂದು ಧರ್ಮಾಧಿಕಾರಿ ವೇ. ಮೃತ್ಯುಂಜಯ ಶ್ರೀಗಳು ತಿಳಿಸಿದ್ದಾರೆ.
ಅಂತಿಮ ದರ್ಶನ: ಕರ್ನಾಟಕ ಸೇರಿದಂತೆ ಸಮೀಪದ ಗೋವಾ, ಮಹಾರಾಷ್ಟ್ರ, ಆಂಧ್ರ, ಕೇರಳ ಇನ್ನಿತರ ರಾಜ್ಯದಿಂದ ಲಕ್ಷಗಟ್ಟಲೆ ಭಕ್ತರು ಸೇರುವ ನಿರೀಕ್ಷೆಯಿದ್ದು, ಮಠದಲ್ಲಿ ಅಂತಿಮ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಕಣ್ವಕುಪ್ಪಿ ನಾಲ್ವಡಿಶಾಂತವೀರಶ್ರೀ, ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗಶ್ರೀ, ಗೊಗ್ಗಿಹಳ್ಳಿ ನಿಜಗುಣ ಶಿವಯೋಗಿಶ್ರೀ, ಜಡೆಮಠದ ಮಹಾಂತಶ್ರೀ, ಮೂಡಿ ಸದಾಶಿವಶ್ರೀ, ಮಡ್ಲೂರ ಮುರುಘರಾಜೇಂದ್ರಶ್ರೀ, ತೊಗರ್ಸಿಮಳೇಮಠದ ಮಹಾಂತಶ್ರೀ, ಕ್ಯಾಸನೂರಿನ ಗುರುಬಸವಶ್ರೀ, ನಂದಿಪುರದ ನಂದೀಶ್ವರಶ್ರೀ, ಕೂಡಲದ ಗುರು ನಂಜೇಶ್ವರಶ್ರೀ ಸೇರಿದಂತೆ ಹರಗುರು ಚರಮೂರ್ತಿಗಳು ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದರು.
ಸಂತಾಪ: ಶ್ರೀಗಳ ನಿಧನಕ್ಕೆ, ಸಚಿವ ಶಾಮನೂರ ಶಿವಶಂಕರಪ್ಪ, ಮಾಜಿ ಸಚಿವ ಸಿ.ಎಂ. ಉದಾಸಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಬಸವರಾಜ ಶಿವಣ್ಣನವರ, ಬಸವರಾಜ ಬೊಮ್ಮಾಯಿ, ಮನೋಹರ ತಹಸೀಲ್ದಾರ್, ರುದ್ರಪ್ಪ ಲಮಾಣಿ, ಕೆ.ಬಿ. ಕೋಳಿವಾಡ, ಯು.ಬಿ. ಬಣಕಾರ, ಮಾಜಿ ಶಾಸಕರಾದ ಸುರೇಶಗೌಡ, ರಾಜಶೇಖರ ಸಿಂಧೂರ, ಬಿ.ಸಿ. ಪಾಟೀಲ, ನೆಹರು ಓಲೇಕಾರ, ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನ, ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ, ಸದಸ್ಯರಾದ ವಿರೂಪಾಕ್ಷಪ್ಪ ಬಳ್ಳಾರಿ, ಗದಿಗೆಮ್ಮ ಬಸನಗೌಡ್ರ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಆರ್. ಪಾಟೀಲ, ಸದಸ್ಯ ಮುರಿಗೆಪ್ಪ ಶೆಟ್ಟರ ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

