ಮುಂದುವರಿದ ಹಂದಿ ಹಿಡಿಯುವ ಕಾರ್ಯಾಚರಣೆ
ಹಾವೇರಿ: ಹಾವೇರಿ ನಗರ ವ್ಯಾಪ್ತಿಯಲ್ಲಿ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆಯು ಮಂಗಳವಾರ ಮುಂದುವರಿದಿದೆ. ನಗರಸಭೆಯ ಸಿಬ್ಬಂದಿಯು ದೇಸಾಯಿಗಲ್ಲಿ, ಸೂಲಮಟ್ಟಿ, ಅಶ್ವಿನಿನಗರ, ವಿದ್ಯಾನಗರ(ಪೂರ್ವ), ಶಿವಾಜಿನಗರ, ಮಂಜುನಾಥನಗರ, ಕೊರಗರ ಓಣಿ ಮುಂತಾದ ಭಾಗಗಳಲ್ಲಿ ಭಾನುವಾರ ಮತ್ತು ಸೋಮವಾರ ಒಟ್ಟು 47 ಹಂದಿಗಳನ್ನು ಹಿಡಿದು ಸಾಗಿಸಲಾಗಿದೆ. ಈಗ ಹಂದಿ ಮಾಲೀಕರೂ ತಮ್ಮ ಹಂದಿಗಳನ್ನು ಹಿಡಿದು ಸಾಗಿಸುತ್ತಿದ್ದು ಸೋಮವಾರದವರೆಗೆ ಒಟ್ಟು 4 ವಾಹನಗಳಲ್ಲಿ ಅಂದಾಜು 400 ಹಂದಿಗಳನ್ನು ಸಾಗಿಸಿರುತ್ತಾರೆ. ನಗರಸಭೆಯ ಪರಿಸರ ಅಭಿಯಂತರ ಚಂದ್ರಕಾಂತ ಗುಡ್ನವರ, ಆರೋಗ್ಯ ನಿರೀಕ್ಷಕ ವೆಂಕಟೇಶ ನಾರಾಯಣಿ, ಸಿ.ಕೆ. ಮಾರೇಗೌಡ ಮತ್ತು ರಮೇಶ ಮುಂಜೋಜಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು, ಕಾರ್ಯಾಚರಣೆ ಮುಂದುವರಿಸಲಾಗುವುದು.
ಮೂಕಪ್ಪ ಶ್ರೀ ನಿಧನ: ಸದಾಶಿವ ಶ್ರೀ ಸಂತಾಪ
ಬ್ಯಾಡಗಿ: ಕೇವಲ ಆಶೀರ್ವಾದಿಂದಲೇ ಸಮಾಜವನ್ನು ಧಾರ್ಮಿಕ ಸಂಕೋಲೆಯಲ್ಲಿ ಹಿಡಿದಿಡುವ ಶಕ್ತಿ ಹೊಂದಿದ್ದ ಮೂಕಪ್ಪ ಶಿವಯೋಗಿಗಳು (ವೃಷಭರೂಪಿ) ಸಾಧನೆಗೆ ಶ್ರವಣ, ವಾಚನ, ಸಮ್ಮೋಹನ ಶಕ್ತಿಗಳು ಬೇಕೆಂಬುದಿಲ್ಲ ಎಂಬುದನ್ನು ಪವಾಡ ಸದೃಶ ರೀತಿಯಲ್ಲಿ ಮಾಡಿ ತೋರಿಸಿದ್ದು, ಶ್ರೀಗಳ ದೇಹಾಂತ್ಯದಿಂದ ಭಕ್ತ ಸಮೂಹಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಾವೇರಿ ಹುಕ್ಕೇರಿಮಠದ ಸದಾಶಿವ ಶ್ರೀಗಳು ಹೇಳಿದರು. ಸಮಾಜದ ಒಳಿತಿಗಾಗಿ ಶರಣರ ಬದುಕು ಮೀಸಲಿಟ್ಟರೆ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಬದುಕು ನೀರಿನಲ್ಲಿ ಹುಟ್ಟಿ ಅಲ್ಲಿಯೇ ಕರಗಿ ಹೋಗುವ ಉಪ್ಪಿನಂತಾಗದೆ, ಕರಗದೆ ಹೊಳೆಯುವ ಮಣಿಗಳಂತಾಗಲಿ. ಅಧ್ಯಾತ್ಮದಲ್ಲಿ ನಂಬಿಕೆಯನ್ನಿಟ್ಟು ಧರ್ಮದ ತಳಹದಿಯಲ್ಲಿ ಸಮಾಜೋದ್ಧಾರ ಕಾರ್ಯದಲ್ಲಿ ತೊಡಗಿದ ಮೂಕಪ್ಪ ಶಿವಯೋಗಿಗಳ ಬದುಕು ಶರಣ ಸಮಾಜಕ್ಕೆ ಮಾರ್ಗದರ್ಶಿಯಾಗಿದೆ ಎಂದರು. ಭಕ್ತಿ ಮತ್ತು ಧಾರ್ಮಿಕ ಮನೋಭಾವನೆಗಳನ್ನು ಜನರಲ್ಲಿ ಬೆಳೆಸುವ ಮೂಲಕ ನಾಡಿನುದ್ದಗಲಕ್ಕೂ ಗುಡ್ಡದ ಮಲ್ಲಾಪುರ ಕ್ಷೇತ್ರದ ಹೆಸರನ್ನು ಪರಿಚಯಿಸಿದ ಕೀರ್ತಿ ಮೂಕಪ್ಪ ಶಿವಯೋಗಿಗಳಿಗೆ ಸಲ್ಲುತ್ತದೆ. ಅವರ ಅಗಲಿಕೆ ಸದ್ಭಕ್ತರಿಗೆ ನೋವನ್ನುಂಟು ಮಾಡಿದೆ. ಅವರ ಆದರ್ಶಗಳು ಸಮಾಜದಲ್ಲಿ ಜೀವಂತವಾಗಿರಲಿ ಎಂದರು.
ಅಪರಿಚಿತ ಶವ ಪತ್ತೆ
ಬ್ಯಾಡಗಿ: ಅಪರಿಚಿತ ವ್ಯಕ್ತಿಯೊಬ್ಬನ ಶವ ತಾಲೂಕಿನ ಛತ್ರ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಪತ್ತೆಯಾಗಿದೆ. ಮೃತನ ವಯಸ್ಸು ಅಂದಾಜು 30 ವರ್ಷ ಎನ್ನಲಾಗುತ್ತಿದೆ. ಆತನ ಕಾಲು ಹಾಗೂ ತಲೆಯ ಭಾಗಕ್ಕೆ ತೀವ್ರತರದ ಗಾಯಗಳಾಗಿವೆ. ಹಣೆ ಜಜ್ಜಿದಂತೆ ಕಾಣುತ್ತಿದ್ದು, ಮುಖ ಗುರುತಿಸಲು ಅಸಾಧ್ಯವಾಗಿದೆ. ಯಾವುದೋ ವಾಹನ ಈ ವ್ಯಕ್ತಿಯ ದೇಹದ ಮೇಲೆ ಹಾದುಹೋಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಈತ ಹಸಿರು ಬಣ್ಣದ ಟೀಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದು, ಶವದ ಬಳಿ ಕಪ್ಪು ಬಣ್ಣದ ಬ್ಯಾಗ್ ಸಿಕ್ಕಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಬ್ಯಾಡಗಿ ಪೊಲೀಸರು, ಮೃತದೇಹವನ್ನು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದ್ದು, ಶವಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದರು. ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

