ಹಾವೇರಿ

ಗೆಳೆಯರ ಸ್ವಾಗತಕ್ಕೆ ಸಿಂಗರಿಸಿದ ಎತ್ತಿನ ಗಾಡಿ

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಜೂ. 1
ಸುಂದರವಾಗಿ ಸಿಂಗರಿಸಿದ ಎತ್ತುಗಳ ಗಾಡಿ ಕಟ್ಟಿ ಎಲ್ಲ ಗೆಳೆಯರನ್ನು ಶಾಲೆಗೆ ಕರೆಯಲು ಅದರಲ್ಲಿ ಹೊರಟ ವಿದ್ಯಾರ್ಥಿಗಳು, ಪಾಲಕರು ಹೊಸ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಲು ಪ್ರೇರಣೆ ನೀಡುತ್ತಿದ್ದ ಶಿಕ್ಷಕರು ಶಾಲಾ ಪ್ರಾರಂಭೋತ್ಸವಕ್ಕೆ ಹೊಸತನ ನೀಡಿದರು.
ಹಾನಗಲ್ಲ ತಾಲೂಕಿನ ಗಡೇಗುಂಡಿಯಲ್ಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯ ಪ್ರಾರಂಭೋತ್ಸವ ಮದುವೆಯ ಮೆರವಣಿಗೆ ರೀತಿಯಲ್ಲಿ ವೈಶಿಷ್ಟ್ಯಪೂರ್ಣವಾಗಿ ನಡೆಯಿತು.
ಶಾಲೆಗೆ ತಳಿರು ತೋರಣಗಳನ್ನು ಕಟ್ಟಿ ಅಲಂಕರಿಸಲಾಗಿತ್ತು. ಜೂಲ, ಕೊಂಬಣಸು, ಗೆಜ್ಜೆ ಸರಗಳಿಂದ ಶೃಂಗಾರಗೊಳಿಸಿದ ಎತ್ತುಗಳ ಗಾಡಿಯಲ್ಲಿ ಬಗೆ ಬಗೆಯ ವೇಷಧಾರಿಗಳಾದ ಮಕ್ಕಳು 'ನಾವೆಲ್ಲ ಇಂದಿನಿಂದಲೇ ಶಾಲೆಗೆ ಹೊರಟಿದ್ದೇವೆ ನೀವೂ ಬನ್ನಿ' ಎಂದು ಕೂಗುತ್ತಾ ಹೊರಟಿದ್ದ ದೃಶ್ಯ ಮದುವೆ ಮೆರವಣಿಗೆಯನ್ನು ನೆನಪಿಸುವಂತ್ತಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಈ ಶೋಭಾಯಾತ್ರೆಯುದ್ದಕ್ಕೂ ಎಲ್ಲ ಮನೆಗಳ ಮುಂದಿನ ಅಂಗಳದಲ್ಲಿ ಹಾಕಿದ್ದ ರಂಗೋಲಿಯ ಚಿತ್ತಾರ ಕಣ್ಮನ ಸೆಳೆಯುತ್ತಿತ್ತು.
ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸುವುದು, ಶಾಲಾ ಸೌಂದರ್ಯ ಕಾಪಾಡುವುದು, ಗಿಡ-ಮರಗಳನ್ನು ಬೆಳೆಸುವುದರಿಂದಾಗುವ ಪ್ರಯೋಜನ, ಶಾಲಾ ಮಕ್ಕಳಿಗಾಗಿ ಸರ್ಕಾರ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ಶಿಕ್ಷಣ ಇಲಾಖೆಯ ಬಿಆರ್‌ಪಿ ಹಾಗೂ ಸಿಆರ್‌ಪಿ ಅಧಿಕಾರಿಗಳು ಮಾತನಾಡಿದರು. ಇದೇ ದಿನ ಎಲ್ಲ ಮಕ್ಕಳಿಗೂ ಸರ್ಕಾರದಿಂದ ಪೂರೈಕೆಯಾದ ಉಚಿತ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು.
ಈ ಸಂದರ್ಭ ಶಾಲೆಯ ಎಸ್‌ಡಿಎಮ್‌ಸಿ ಪದಾಧಿಕಾರಿಗಳು, ಗ್ರಾಮದ ಪ್ರಮುಖರು, ಮಹಿಳೆಯರು ಪಾಲ್ಗೊಂಡಿದ್ದರು. ಮುಖ್ಯೋಪಾಧ್ಯಾಯ ಜಗದೀಶ ಗೂಳಿಯವರ ಸ್ವಾಗತಿಸಿದರು. ಇದೇ ಸಂದರ್ಭ ಗ್ರಾಮಸ್ಥರು ಮನೆಗೊಂದು ಮರನೆಟ್ಟು ಬೆಳೆಸುವ ಪ್ರತಿಜ್ಞೆ ಕೈಗೊಂಡರು. ಶಾಲಾ ಪ್ರಾರಂಭೋತ್ಸವದ ನಿಮಿತ್ತ ವಿದ್ಯಾರ್ಥಿಗಳಿಗೆ ಸಿಹಿ ಊಟ ಉಣಬಡಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.