ಕುಡಿವ ನೀರಿಗಾಗಿ ಕಾರ್ಯಾಲಯಕ್ಕೆ ಮುತ್ತಿಗೆ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಜೂ. 4
ಕಳೆದ ಆರು ತಿಂಗಳಿಂದ ಗ್ರಾಮದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದಿದ್ದರೂ ನಿರ್ಲಕ್ಷ್ಯ ಮನೋಭಾವನೆ ತೋರುತ್ತಿರುವ ಅಧಿಕಾರಿಗಳ ವಿರುದ್ಧ ತಾಲೂಕಿನ ಬೆಳಕೇರಿಯ ನೂರಾರು ಗ್ರಾಮಸ್ಥರು ಜಿಪಂ ಎಂಜಿನಿಯರಿಂಗ್ ಕಾರ್ಯಾಲಯದ ಎದುರು ಕೆಲಕಾಲ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ರಮೇಶ ಹೆಡಿಯಾಲ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದ್ದರೂ ಸಂಬಂಧಿಸಿದ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ಉಪ ವಿಭಾಗಾಧಿಕಾರಿಗಳು ಗಮನಹರಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಹೀಗಾಗಿ ಗ್ರಾಮದ ಜನರು ಕುಡಿಯುವ ನೀರಿಗಾಗಿ ಖಾಸಗಿ ಜನರ ಬೋರ್ವೆಲ್ನಲ್ಲಿ ನೀರು ತುಂಬಬೇಕಾಗಿದೆ ಎಂದರು.
ಶಿವಾನಂದಪ್ಪ ಪೂಜಾರ ಮಾತನಾಡಿ, ಗ್ರಾಮದಲ್ಲಿ ಪರಿಶಿಷ್ಟರು ಮತ್ತು ಅಲ್ಪಸಂಖ್ಯಾತರು ವಾಸವಾಗಿರುವ ಪ್ರದೇಶಗಳಲ್ಲಿ ಹಲವಾರು ತಿಂಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ.
ಕುಡಿಯುವ ನೀರಿಗಾಗಿ ಕೀಲೋಮೀಟರ್ ಗಟ್ಟಲೇ ಕ್ರಮಿಸಬೇಕಾಗಿದೆ. ಇದರಿಂದ ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದರು.
ಶಿದ್ದಪ್ಪ ತೆವರಿ ಮಾತನಾಡಿ, ನೀರು ಪೂರೈಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮದ ಕೆಲವು ಭಾಗಗಳಲ್ಲಿ ನೀರು ಒದಗಿಸುವ ಅಧಿಕಾರಿಗಳು ಹಿಂದುಳಿದ ಜನರು ವಾಸಿಸುವ ಕಾಲೋನಿಗಳಿಗೆ ಪೂರೈಸದೇ ತಾರತಮ್ಯವೆಸಗಿದ್ದಾರೆ ಎಂದು ಆರೋಪಿಸಿದ ಅವರು, ಅಧಿಕಾರಿಗಳ ವರ್ತನೆ ಗ್ರಾಮಸ್ಥರಲ್ಲಿ ಹಲವು ಸಂಶಯಗಳಿಗೆ ಎಡೆಮಾಡಿಕೊಡುತ್ತಿದೆ ಎಂದರು.
ಹೊನ್ನೂರ್ ಸಾಬ್ ನದಾಫ್ ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಬೆಳಕೇರಿ ಗ್ರಾಮ ಆಯ್ಕೆಯಾಗಿದ್ದು, ಗುತ್ತಿಗೆದಾರರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆ ತಿರಸ್ಕೃತಗೊಂಡಿದ್ದು, ಗ್ರಾಮವು ಶಾಶ್ವತ ಕುಡಿಯುವ ನೀರಿನ ಯೋಜನೆಯಿಂದ ವಂಚಿತರಾಗುವಂತಾಗಿದೆ ಎಂದರು.
ಸಹಾಯಕ ಅಭಿಯಂತರ ಸುರೇಶ ಬೇಡರ ಮಾತನಾಡಿ, ಗ್ರಾಮದಲ್ಲಿ ಅಳವಡಿಸಿರುವ ಕೆಲ ಬೋರ್ವೆಲ್ಗಳು ದುರಸ್ತಿಯಿದ್ದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಶೀಘ್ರದಲ್ಲೇ ದುರಸ್ತಿ ಕಾರ್ಯ ನಡೆಸಿ ನೀರು ಪೂರೈಸುವ ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆ ಸರಿದರು.
ಪ್ರತಿಭಟನೆಯಲ್ಲಿ ಹನುಮಂತಪ್ಪ ಮಡಿವಾಳರ, ಗಾಳೆಪ್ಪ ಉಚ್ಚಂಗಿ, ಹೊನ್ನಪ್ಪ ಮಡಿವಾಳರ, ಬಿ.ಸಿ. ಅಂಬ್ಲಿ, ಸಿದ್ದಪ್ಪ ಕದರಮಂಡಲಗಿ, ರಾಮಪ್ಪ ತೆವರಿ, ಅಶೋಕ ಕದರಮಂಡಲಗಿ, ರವಿ ತೆವರಿ, ದಿನೇಶ ಅಂಬ್ಲಿ, ಅನಿಲ ತೆವರಿ, ಪ್ರವೀಣ ಆಲದಗೇರಿ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

