ಹಾವೇರಿ

ಎರಡು ಮಕ್ಕಳಿಗೆ ಶಂಕಿತ ಡೆಂಘೀ ಪತ್ತೆ

Published On :

ಬ್ಯಾಡಗಿ: ಸಮೀಪದ ಮೊಟೆಬೆನ್ನೂರಿನ ಎರಡು ಮಕ್ಕಳಿಗೆ ಶಂಕಿತ ಡೆಂಘೀ ಜ್ವರ ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ದಾವಣಗೆರೆಯ ಎಸ್.ಎಸ್.ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದ ಶಿಲ್ಪಾ ಆಂಜನೆಪ್ಪ ಹಳೇಮನಿ(9) ಹಾಗೂ ಫಕ್ಕೀರೇಶ ನಿಂಗಪ್ಪ ಮುದ್ದೇರ(10) ಎಂಬುವರಿಗೆ 3 ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಪಾಲಕರು ಮಕ್ಕಳನ್ನು ಈ ಮೊದಲು ಗ್ರಾಮದಲ್ಲಿರುವ ಖಾಸಗಿ ವೈದ್ಯರ ಬಳಿ ತೋರಿಸಿದ್ದರು. ಆದರೆ, ಗುಣಮುಖವಾಗದ ಹಿನ್ನೆಲೆಯಲ್ಲಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದ್ದರು. ರಕ್ತ ಪರೀಕ್ಷೆ ನಡೆಸಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಶಂಕಿತ ಡೆಂಘೀ ಎಂಬುದನ್ನು ದೃಢಪಡಿಸಿದ್ದು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡೂ ಮಕ್ಕಳ ರಕ್ತದ ಮಾದರಿಯನ್ನು ಪರೀಕ್ಷಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಲಾರ್ವಾ ಸರ್ವೇ: ಶಂಕಿತ ಡೆಂಘೀ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಆರ್. ಲಮಾಣಿ ಮಾರ್ಗದರ್ಶನದಲ್ಲಿ ವೈದ್ಯಾಧಿಕಾರಿಗಳ ತಂಡವು ಗ್ರಾಮದಲ್ಲಿ ಲಾರ್ವಾ ಸರ್ವೇ ಕಾರ್ಯ ನಡೆಸಿದ್ದು, ಗ್ರಾಮಸ್ಥರಿಗೆ ಡೆಂಘೀ ಜ್ವರದ ಕುರಿತು ಸಮಗ್ರ ಮಾಹಿತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ನೀಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಆರೋಗ್ಯ ಸಹಾಯಕಿಯರನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಸ್ವಚ್ಛತೆಗೆ ಸೂಚನೆ: ಇಬ್ಬರು ಮಕ್ಕಳಲ್ಲಿ ಶಂಕಿತ ಡೆಂಘೀ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿ ಫಾಗಿಂಗ್ ಮಾಡಿಸುವಂತೆ ವೈದ್ಯರು ಪಿಡಿಓಗಳಿಗೆ ಸೂಚಿಸಿದ್ದಾರೆ. ಮನೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಕನಿಷ್ಠ 2 ದಿನಗಳಿಗೊಮ್ಮೆ ಸ್ವಚ್ಛಗೊಳಿಸಬೇಕು.
ಹಗಲುವೇಳೆಯಲ್ಲಿಯೂ ಸೊಳ್ಳೆಪರದೆ ಇಲ್ಲದೇ ಮಲಗಬಾರದು, ಒಡೆದ ಬಾಟಲಿ, ಬಲ್ಪು, ಚಿಪ್ಪು, ಟೈರ್‌ಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು ಮತ್ತು ನೀರು ತುಂಬಿಟ್ಟ ಪಾತ್ರೆಗಳನ್ನು ಕಡ್ಡಾಯವಾಗಿ ಮುಚ್ಚಿಡುವಂತೆ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಎರಡು ತಿಂಗಳಲ್ಲಿ 15 ಶಂಕಿತ ಡೆಂಘೀ ಜ್ವರದ ಪ್ರಕರಣಗಳು ಪತ್ತೆಯಾಗಿದ್ದು, 6 ಮಕ್ಕಳಿಗೆ ಡೆಂಘೀ ಇರುವುದು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮೂಲಗಳು ದೃಢಪಡಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.