ಚುರುಕುಗೊಂಡ ಬಿತ್ತನೆ ಕಾರ್ಯ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜೂ. 4
ಮುಂಗಾರು ಅರಂಭಗೊಳ್ಳುವ ಮೊದಲೇ ಉತ್ತಮ ಮಳೆಯಾದ ಕಾರಣ ತಾಲೂಕಾದ್ಯಂತ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ರೈತರು ತಮ್ಮ ಜಮೀನುಗಳಲ್ಲಿ ಎಲ್ಲೆಂದರಲ್ಲಿ ಎತ್ತಿನ ಬೇಸಾಯ ಹಾಗೂ ಬೀಜ ಹಾಕುವವರು ಕಾಣುವ ಮೂಲಕ ಕೃಷಿ ಚಟುವಟಿಕೆಗಳು ಸಹಜವಾಗಿ ಸಾಗಿವೆ. ಹದವಾದ ಮಳೆಯಾದ ಕಾರಣ ರೈತರು ಸಂತಸದಿಂದ ಬಿತ್ತನೆ ಕಾರ್ಯದಲ್ಲಿ ತಲ್ಲೀನಾಗಿದ್ದಾರೆ.
ರೈತರ ಮೊಗದಲ್ಲಿ ಮಂದಹಾಸ: ಮೇ ಕೊನೆ ವಾರದಲ್ಲಿ ರೋಹಿಣಿ ಮಳೆ ಎಲ್ಲೆಡೆ ಬೀಳುವ ಮೂಲಕ ರೈತರಲ್ಲಿ ಮಂದಹಾಸ ಮೂಡಿಸಿತು. ಆ ಸಂದರ್ಭದಲ್ಲಿ ರೈತರ ತಮ್ಮ ಜಮೀನುಗಳಲ್ಲಿ ಮುಖ್ಯ ವಾಣಿಜ್ಯ ಬೆಳೆಯಾದ ಬಿಟಿ ಹತ್ತಿ ಬೀಜಗಳನ್ನು ಬಿತ್ತನೆ ಮಾಡಿದರು. ಜೂನ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಎರಡನೇ ಮುಖ್ಯ ಬೆಳೆಯಾದ ಗೋವಿನಜೋಳದ ಬಿತ್ತನೆ ಕಾರ್ಯ ಬಿರುಸಿನಿಂದ ಸಾಗಿದೆ. ಬಿತ್ತನೆ ಸಮಯಕ್ಕೆ ಸರಿಯಾಗಿ ಮಳೆರಾಯ ಕರುಣೆ ತೋರಿದ್ದಾನೆ ಎಂದು ರೈತರು ತಮ್ಮ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಬಿತ್ತನೆ ಕ್ಷೇತ್ರ: ತಾಲೂಕಿನಲ್ಲಿ ಒಟ್ಟು 57,110 ಹೆಕ್ಟೇರ್ ಕ್ಷೇತ್ರ ಸಾಗುವಳಿಗೆ ಅನುಕೂಲವಿದೆ. ಅದರಲ್ಲಿ 35,000 ಹೆಕ್ಟೇರ್ ಗೋವಿನಜೋಳ, 19,000 ಹೆಕ್ಟೇರ್ ಬಿಟಿ ಹತ್ತಿ ಬಿತ್ತನೆ, 600 ಹೆಕ್ಟೇರ್ ಹೈಬ್ರೀಡ್ಜೋಳ, 2,000 ಹೆಕ್ಟೇರ್ ದ್ವಿದಳ ದಾನ್ಯ, 500 ಹೆಕ್ಟೇರ್ ಎಣ್ಣೆಕಾಳು ಬೀಜಗಳನ್ನು ಬಿತ್ತನೆ ಮಾಡಲಾಗುವುದು ಎಂದು ಅಂದಾಜಿಸಲಾಗಿದೆ.
ಬಿತ್ತನೆ ಬೀಜ: ಕೃಷಿ ಇಲಾಖೆಯು ಸಹ ಮೇ ಕೊನೆಯ ವಾರದಲ್ಲಿ ಬಿತ್ತನೆ ಬೀಜ ಗೋವಿನ ಜೋಳಗಳನ್ನು ತಾಲೂಕಿನ ಮೂರು ಹೋಬಳಿಗಳಾದ ಹಿರೇಕೆರೂರು, ರಟ್ಟಿಹಳ್ಳಿ ಹಾಗೂ ಹಂಸಬಾವಿ ದೊಡ್ಡ ಗ್ರಾಮಗಳಾದ ಹಳ್ಳೂರು, ಕೋಡದಲ್ಲಿ ಮಳಿಗೆಗಳನ್ನು ತೆರೆದು ಬೀಜ ವಿತರಣೆ ಮಾಡಿದ್ದರಿಂದ ಸರಳವಾಗಿ ಎಲ್ಲ ರೈತರಿಗೂ ಗದ್ದಲ ಗಲಾಟೆಯಿಲ್ಲದೆ ಬೀಜ ದೊರೆತಿರುವುದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಸರಳವಾಗಿ ದೊರೆತ ಬೀಜ, ಗೊಬ್ಬರ: ತಾಲೂಕಿನ ರಟ್ಟಿಹಳ್ಳಿ, ಹಂಸಬಾವಿ ಭಾನುವಾರವು ಸಹ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಮಾರಾಟ ಮಾಡಿದ್ದರಿಂದ ರೈತರಿಗೆ ಅನುಕೂಲವಾಗಿದೆ.
ಅದರಂತೆ ಪಟ್ಟಣದ ಟಿಎಪಿಸಿಎಂಎಸ್ ವತಿಯಿಂದ ಮಾಸೂರು, ರಟ್ಟಿಹಳ್ಳಿ, ಕೋಡ, ಹಂಸಬಾವಿ, ಹಿರೇಕೆರೂರು ಕೇಂದ್ರ ಕಚೇರಿ ಹಾಗೂ ಮಾಸೂರು ರಸ್ತೆಯ ಮಳಿಗೆ ಹಾಗೂ ಚಿಕ್ಕೇರೂರು ಈ ಶಾಖೆಗಳಲ್ಲಿ ನಿರಂತರವಾಗಿ ಗೊಬ್ಬರ ಮಾರಾಟ ಮಾಡಿರುವುದರಿಂದ ಗೊಬ್ಬರಕ್ಕಾಗಿ ಸರದಿಯಲ್ಲಿ ನಿಲ್ಲುವುದು ತಪ್ಪಿದಂತಾಗಿದೆ. ಈ ಬಾರಿ ಬಿತ್ತನೆ ಬೀಜ ಹಾಗೂ ಗೊಬ್ಬರ ಸರಳವಾಗಿ ರೈತರಿಗೆ ದೊರತಂತಾಗಿದೆ.
ಹಗಲಿರುಳು ಕಾದಿದ್ದರು: ಕಳೆದ ವರ್ಷ ಕನಕ ಹತ್ತಿ ಬಿತ್ತನೆ ಬೀಜ ಹಾಗೂ ಡಿಎಂಪಿ ಗೊಬ್ಬರ ಪಡೆಯಲು ಹರಸಾಹಸ ಪಟ್ಟಿದ್ದಲ್ಲದೆ, ಶಾಲಾ ಮಕ್ಕಳು ಸಹ ಹಗಲು ರಾತ್ರಿಯೆನ್ನದೆ ಸರದಿಯಲ್ಲಿ ನಿಂತು ಗೊಬ್ಬರ ಪಡೆಯುವಂತಾಗಿತ್ತು. ಈ ಬಾರಿ ಅಂತಹ ಗೊಂದಲವಿಲ್ಲದೆ ಬೀಜ ಗೊಬ್ಬರ ದೊರೆತಿದೆ ಎನ್ನುತ್ತಾರೆ ಗುಂಡಗಟ್ಟಿ ಗ್ರಾಮದ ಪ್ರಗತಿಪರ ರೈತ ಶಿವನಗೌಡ ಪುಟ್ಟಪ್ಪಗೌಡ್ರ,
ಮುಂಗಾರು ಆರಂಭವಾಗುವ ಮುನ್ನವೆ ಬಿತ್ತನೆ ಮಾಡಿದರೆ ಹುಲುಸಾಗಿ ಬೆಳೆ ಬರಬಲ್ಲದು ಎನ್ನುವುದು ಈ ಭಾಗದ ರೈತರ ಅನಿಸಿಕೆಯಾಗಿದೆ.
ಗೋವಿನ ಜೋಳ ಬಿತ್ತನೆ ಮಾಡಿ ಒಂದರೆಡು ಸಲ ಎಡಕುಂಟೆ ಮಾಡಿದರೆ ಕಳೆ ನಾಶವಾಗಿ ಬೇರುಗಳು ಕತ್ತರಿಸಿ ಹೊಸ ಬೇರು ಉತ್ಪತ್ತಿಯಾಗುವುದರಿಂದ ಬೆಳೆ ಉತ್ತಮ ಇಳುವರಿ ಬರುತ್ತದೆ. ಇದರಿಂದಾಗಿ ಜಿಟಿ ಜಿಟಿ ಮಳೆ ಬರುವುದರೊಳಗಾಗಿ ಬಿತ್ತನೆ ಮುಗಿಸಬೇಕು ಎನ್ನುತ್ತಾರೆ ರೈತ ಸಮುದಾಯ.
ಗಂಗಾಧರ ಎಸ್. ಹಲಗೇರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

