ಸಾಗುವಳಿ ಭೂಮಿ ಸಮಸ್ಯೆ ಪರಿಹರಿಸುವೆ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜೂ. 8
ತಾಲೂಕಿನ ಅರಣ್ಯ ಸಾಗುವಳಿ ಮಾಡುತ್ತಿರುವ ರೈತರಿಗೆ ಪರಿಹಾರ ಕಲ್ಪಿಸಿಕೊಡುವಲ್ಲಿ ಶ್ರಮಿಸುವುದಾಗಿ ಶಾಸಕ ಯು.ಬಿ. ಬಣಕಾರ ಅರಣ್ಯಭೂಮಿ ಸಾಗುವಳಿ ರೈತರಿಗೆ ಭರವಸೆ ನೀಡಿದರು.
ಅವರು ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಅರಣ್ಯಭೂಮಿ ಸಾಗುವಳಿದಾರ ರೈತರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರ ಒಪ್ಪಿಕೊಂಡಿದೆ: ಸಾಗುವಳಿ ಮಾಡುತ್ತಿರುವ ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸುವಂತೆ ಹೋರಾಟಗಳು ನಡೆದಿವೆ. ಈ ನಿಟ್ಟಿನಲ್ಲಿ ರೈತರ ಹಿತ ಕಾಪಾಡಲು ಬದ್ಧನಾಗಿದ್ದೇನೆ. ವಿಧಾನಸಭೆ ಮೊದಲ ಅಧಿವೇಶನದಲ್ಲಿಯೇ ಅರಣ್ಯಭೂಮಿ ಸಾಗುವಳಿ ಬಗ್ಗೆ ಚರ್ಚೆ ನಡೆದ ಪರಿಣಾಮ ಅರಣ್ಯಭೂಮಿ ಸಾಗುವಳಿ ಕ್ಷೇತ್ರಗಳ ಶಾಸಕರ ಸಭೆ ಕರೆದು ಪರಿಹಾರ ಕಂಡು ಹಿಡಿಯಲು ಸರ್ಕಾರ ಒಪ್ಪಿಕೊಂಡಿದೆ ಎಂದು ತಿಳಿಸಿದರು.
ಸಮಸ್ಯೆ ಉಲ್ಬಣ: ಅಧಿಕಾರಿಗಳೇ ಹೊಣೆ
ತಾಲೂಕಿನ ಸುಮಾರು 40 ಗ್ರಾಮಗಳ ಬಳಿ ಇರುವ ಅರಣ್ಯಭೂಮಿ, ಅರಣ್ಯ ಪ್ರದೇಶದ ಸುಮಾರು 3 ಸಾವಿರಕ್ಕೂ ಹೆಚ್ಚು ಎಕರೆ ಕ್ಷೇತ್ರವನ್ನು ಕಳೆದ 40 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರನ್ನು ಸುಪ್ರಿಂಕೋರ್ಟ್ ಆದೇಶ ಎಂದು ಹೇಳಿಕೊಂಡು ಅರಣ್ಯಾಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಇದಾಗಿದೆ. ಆದ್ದರಿಂದ ಸರ್ಕಾರ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಗುವಳಿದಾರರ ತೆರವು ಕಾರ್ಯಾಚರಣೆ ಮಾಡಬಾರದು. ಅಂಥ ಯತ್ನ ನಡೆಸಿದರೆ ಗಂಭಿರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರಕ್ಕೆ ಸೂಚನೆ: ಅರಣ್ಯ ಭೂಮಿಯಿಂದ ರೈತರನ್ನು ಒಕ್ಕಲೆಬ್ಬಿಸಿದರೆ ಅವರ ಬದುಕು ಬೀದಿಗೆ ಬೀಳಲಿದೆ. ಇದರ ಬಗ್ಗೆ ಸಾಕಷ್ಟು ಅರಿವು ಹೊಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೋವಿಂದ ಕಾರಜೋಳ ಹಾಗೂ ಅರಣ್ಯ ಪ್ರದೇಶ ಸಾಗುವಳಿ ವ್ಯಾಪ್ತಿಯ ಶಾಸಕರು ಸದನದಲ್ಲಿ ವಿವರವಾಗಿ ಚರ್ಚೆ ನಡೆಸಿದ ಪರಿಣಾಮ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸಂಬಂಧಪಟ್ಟ ಕ್ಷೇತ್ರಗಳ ಶಾಸಕರ ಸಭೆ ಕರೆದು ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡು ಹಿಡಿಯಲು ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ಸಭೆಯಲ್ಲಿ ಚರ್ಚೆ: ತಾಲೂಕಿನ ಅರಣ್ಯಭೂಮಿ ಸಾಗುವಳಿದಾರರ ಸಭೆ ಏರ್ಪಡಿಸಿ ಅವರೊಂದಿಗೆ ಚರ್ಚಿಸಿ ಮಾಹಿತಿ ಸಂಗ್ರಹಿಸಿದರು. ಈ ಕುರಿತು ಬೆಂಗಳೂರಿನಲ್ಲಿ ಜರುಗುವ ಸಭೆಯಲ್ಲಿ ಚರ್ಚಿಸುತ್ತೇನೆ ಎಂದು ಶಾಸಕರು ತಿಳಿಸಿದರು.
ಕೆಜೆಪಿ ತಾಲೂಕಾಧ್ಯಕ್ಷ ಮಹೇಶ ಗುಬ್ಬಿ, ಮಹೇಂದ್ರ ಬಡಳ್ಳಿ, ಪ್ರಕಾಶಗೌಡ ಗೌಡರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ಪಪಂ ಸದಸ್ಯರಾದ ರವಿ ಪುಟ್ಟಪ್ಪಗೌಡ್ರ. ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಜಿಪಂ ಮಾಜಿ ಸದಸ್ಯ ಶಿವರಾಜ ಹರಿಜನ, ತಾಪಂ ಸದಸ್ಯ ಶಿವಣ್ಣ ಗಡಿಯಣ್ಣನವರ, ರಘು ಮಾಳಮ್ಮನವರ, ಮಹಾದೇವ ಮಾಳಮ್ಮನವರ, ಶಿವ್ಯಾನಾಯ್ಕ ಲಮಾಣಿ, ರಟ್ಟೀಹಳ್ಳಿ ಗ್ರಾಪಂ ಅಧ್ಯಕ್ಷ ಶಂಕ್ರಗೌಡ ಚನ್ನಗೌಡ್ರ, ಮಾಜಿ ಅಧ್ಯಕ್ಷ ಎಸ್.ಬಿ. ಪಾಟೀಲ, ಶಂಕ್ರ್ಯಾನಾಯ್ಕ ಲಮಾಣಿ, ದತ್ತಾತ್ರೇಯ ರಾಯ್ಕರ, ಸಿದ್ದನಗೌಡ ನರೇಗೌಡ್ರ, ಹಸನಸಾಬ ಕುಲುಮಿ, ಸಿ.ಎನ್. ಬಣಕಾರ, ಸಿ.ಎಸ್. ಪೇತಕ್ಕನವರ, ರಾಮು ಚಿಗಮರದ, ನಿಂಗಪ್ಪ ದಂಡಿಗೀಹಳ್ಳಿ ಹಾಗೂ ಅರಣ್ಯಭೂಮಿ ಸಾಗುವಳಿಯ ನೂರಾರು ರೈತರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

