ಕೃಷಿ ಯೋಜನೆ, ಬೆಳೆವಿಮೆ ಮಾಹಿತಿ ನೀಡಿ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಜೂ. 15
ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಹಾಗೂ ಹವಾಮಾನ ವೈಪರಿತ್ಯದ ಆಧಾರದ ಮೇಲೆ ಬೆಳೆವಿಮೆ ಪಡೆಯಲು ರೈತರು ಅನುಸರಿಸಬೇಕಾದ ನಿಯಮಗಳ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುಂದಾಗಬೇಕೆಂದು ಶಾಸಕ ಕೆ.ಬಿ. ಕೋಳಿವಾಡ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಶನಿವಾರ ಕರೆದಿದ್ದ ಕೃಷಿ ಇಲಾಖೆ, ರಾಷ್ಟ್ರೀಕೃತ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರಿ ಸಂಘ ಮತ್ತು ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಳ್ಳಿಗೆ ತೆರಳಿ ಮಾಹಿತಿ ನೀಡಿ: ರಾಜ್ಯದ ರೈತರು ಬೆಳೆಯುತ್ತಿರುವ ಹಿಂಗಾರಿ ಮತ್ತು ಮುಂಗಾರಿ ಬೆಳೆಗಳಿಗೆ ಕೇಂದ್ರ ಕೃಷಿ ವಿಮಾ ಯೋಜನೆ ಅಡಿಯಲ್ಲಿ ಹಾಗೂ ಹವಾಮಾನ ವೈಪರ್ಯತ್ಯದಿಂದ ಉಂಟಾಗುವ ಹಾನಿಗಳನ್ನಾಧರಿಸಿ ಹಾಗೂ ಬೆಳೆ ವಿಮೆ ನೀಡುತ್ತಿದ್ದು, ರೈತರು ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಿ ಬೆಳೆದಿರುವ ಬೆಳೆಗಳನ್ನು ಆಧರಿಸಿ ಹಾನಿಯಾಗಿರುವುದನ್ನು ಪರಿಗಣಿಸಿ ತಮಗೆ ಬೆಳೆ ವಿಮೆ ನೀಡಬೇಕೆಂದು ಕೇಳುತ್ತಿದ್ದಾರೆ. ಕಾರಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಬೆಳೆವಿಮೆ ಮಾಡಿಸಲು ರೈತರು ಅನುಸರಿಸಬೇಕಾದ ಕ್ರಮ ಹಾಗೂ ಯಾವ ಬೆಳೆಗೆ ಎಷ್ಟು ಹಣ ತುಂಬಬೇಕು. ಯಾವಾಗ ತುಂಬಬೇಕೆಂಬುದರ ಕುರಿತು ವಿವರವಾಗಿ ರೈತರಿಗೆ ತಿಳಿಸಲು ಅಧಿಕಾರಿಗಳು ಹಳ್ಳಿಗೆ ತೆರಳಬೇಕು ಎಂದರು.
ತಪ್ಪದೇ ಹಾಜರಾಗಿ: 2012-13ನೇ ಸಾಲಿನಲ್ಲಿ ತಾಲೂಕಿನಾದ್ಯಂತ ಬೆಳೆವಿಮೆಯನ್ನು ಪಡೆದವರ ಸಮಗ್ರ ಮಾಹಿತಿಯನ್ನು ತಮಗೆ ನೀಡಬೇಕೆಂದು ಹಾಗೂ ಸೋಮವಾರ ಮಧ್ಯಾಹ್ನ 3 ಗಂಟೆಗೆ ಕರೆದಿರುವ ಸಭೆಗೆ ತಪ್ಪದೆ ಎಲ್ಲರೂ ಹಾಜರಾಗಬೇಕೆಂದು ಕೆ.ಬಿ. ಕೋಳಿವಾಡ ಹೇಳಿದರು.
ವಿಮಾ ಹಣ ತುಂಬಿ: ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ ನಾಗನಗೌಡ ಮಾತನಾಡಿ, 2013-14ನೇ ಸಾಲಿನಲ್ಲಿ ತಾಲೂಕಿನ ರಾಣಿಬೆನ್ನೂರು, ಕುಪ್ಪೆಲೂರು ಹಾಗೂ ಮೇಡ್ಲೇರಿ ಹೋಬಳಿ ವ್ಯಾಪ್ತಿಗೊಳಪಟ್ಟಿರುವ ರೈತರು ಮುಂಗಾರು ಮತ್ತು ಹಿಂಗಾರಿ ಬೆಳೆಗಳಿಗೆ ಬೆಳೆವಿಮೆ ಪಡೆಯಲು ರಾಷ್ಟ್ರೀಕೃತ ಬ್ಯಾಂಕ್ ಮತ್ತು ತಮ್ಮ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ವ್ಯವಸಾಯ ಸೇವಾ ಕೇಂದ್ರಗಳ ಅಧಿಕಾರಿಗಳನ್ನು ಸಂಪರ್ಕಿಸಿ, ಬೆಳೆ ಆಧಾರಿತವಾಗಿ ನಿಗದಿಪಡಿಸಿರುವ ವಿಮಾ ಹಣವನ್ನು ತುಂಬಬೇಕೆಂದು ತಿಳಿಸಿದರು.
ವಿಮೆ ಮಾಡಿಸಿ: ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ ಪರಮೇಶ ಎನ್. ಹುಬ್ಬಳ್ಳಿ ಮಾತನಾಡಿ, ರೈತರ ಪಶುಗಳಿಗೆ ಹಾಗೂ ಕುರಿಗಾರರ ಕುರಿಗಳಿಗೆ ವಿಮೆ ಮಾಡಿಸುವ ಕಾರ್ಯಕ್ರಮ ಚಾಲ್ತಿಯಲ್ಲಿದ್ದು, ಪಶು ಮತ್ತು ಕುರಿಗಳ ಮಾಲೀಕರು ವಿಮೆ ಮಾಡಿಸಲು ಮುಂದಾಗಬೇಕೆಂದು ತಿಳಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಶಾರದಾ ಲಮಾಣಿ, ಉಪಾಧ್ಯಕ್ಷೆ ರೇಣುಕಾ ಮಲಕನಹಳ್ಳಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಪ್ಪ. ತಾಲೂಕಿನ 41 ಕ್ಯೂ ಆಫ್ ಸೊಸೈಟಿಗಳ ಅಧ್ಯಕ್ಷ, ಕಾರ್ಯದರ್ಶಿಗಳು, ನಗರದ ವಿವಿಧ ಬ್ಯಾಂಕ್ ಅಧಿಕಾರಿಗಳು, ತಾಲೂಕು ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

