ಹಾವೇರಿ

ಡೆಂಘೀಗೆ ಬಾಲಕ ಮೆಹಬೂಬ್ ಅತ್ತಾವುಲ್ಲಾ ಬಲಿ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, 16
ಡೆಂಘೀ ಜ್ವರದಿಂದ ಬಳಲುತ್ತಿದ್ದ ಪಟ್ಟಣದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ದಾವಣಗೆರೆಯ ಎಸ್. ಎಸ್. ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಭಾನುವಾರ ನಡೆದಿದೆ.
ದುರ್ದೈವಿ ಬಾಲಕನನ್ನು ಪಟ್ಟಣದ ಗುತ್ತೆಮ್ಮದೇವಿ ದೇವಸ್ಥಾನ ಬಳಿಯ ನಿವಾಸಿ ಮೆಹಬೂಬ್ ಅತ್ತಾವುಲ್ಲಾ ಹತ್ತಿವಾಲೆ (8) ಎಂದು ಗುರುತಿಸಲಾಗಿದೆ. ಈತನಿಗೆ ಕಳೆದೊಂದು ವಾರದಿಂದ ಜ್ವರ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ವೈದ್ಯರು ಪರೀಕ್ಷಿಸಿದ ಬಳಿಕ ಡೆಂಘೀ ಜ್ವರ ಇರುಬಹುದು ಎಂಬ ಶಂಕೆಯಿಂದ ಆತನನ್ನು ಹಾವೇರಿಯ ಲೋಡಾಯ್ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವ್ಶೆದ್ಯರು ಸಲಹೆ ನೀಡಿದ್ದರು. ಅಲ್ಲಿಯೂ ಬಾಲಕ ಗುಣಮುಖವಾಗದ ಹಿನ್ನೆಲೆಯಲ್ಲಿ ಜೂ. 14 ರಂದು ದಾವಣಗೆರೆಯ ಎಸ್‌ಎಸ್ ಹೈಟೆಕ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆಂಘೀ ಜ್ವರ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಜ್ವರ ನಿಯಂತ್ರಣಕ್ಕೆ ಬಾರದೇ ಮೆಹಬೂಬ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ನಾಲ್ಕನೇ ಬಲಿ: ಬ್ಯಾಡಗಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶಂಕಿತ ಡೆಂಘೀ ಜ್ವರಕ್ಕೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೇರಿದೆ. ತಾಲೂಕಿನ ಛತ್ರ, ಮೋಟೆಬೆನ್ನೂರು ಹಾಗೂ ಚಿಕ್ಕಬಾಸೂರು ಗ್ರಾಮಗಳಲ್ಲಿ ತಲಾ ಒಂದು ಮಗು ಸಾವನ್ನಪ್ಪಿದ್ದು, ಇದೀಗ ಪಟ್ಟಣದಲ್ಲಿ ನಾಲ್ಕನೇ ಮಗು ಡೆಂಘೀಗೆ ಬಲಿಯಾಗಿದೆ.
ವೈದ್ಯಾಧಿಕಾರಿಗಳ ಭೇಟಿ:  ತಾಲೂಕು ಆರೋಗ್ಯಾಧಿಕಾರಿ ಬಿ.ಆರ್. ಲಮಾಣಿ, ವೈದ್ಯಾಧಿಕಾರಿ ಸುಹಿಲ್ ಹರವಿ, ಸಿಬ್ಬಂದಿಗಳಾದ ಎಸ್.ಎನ್. ತೋಳಿ, ವೈ.ಎಮ್. ಹಿರಿಯಕ್ಕನವರ, ಎನ್.ಎಂ. ಕಂಬಳಿ, ಸಣ್ಮನಿ, ಲಕ್ಷ್ಮೀಗೌಡ, ಜರೀನಾ, ಎಸ್.ಎ. ಜಾಧವ್ ಎಸ್.ಎಸ್. ಮಾಸೂರು ಮೃತ ಬಾಲಕನ ಮನೆಗೆ ತೆರಳಿ ಪರಿಶೀಲನೆ ನಡೆಸಿದರಲ್ಲದೇ, ದುಖಿಃತ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಲಾರ್ವಾ ಸಮೀಕ್ಷೆ: ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಲಾರ್ವಾ ಸಮೀಕ್ಷೆ ಆರಂಭಿಸಲಾಗಿದೆ. ಔಷೋಧಾಪಚಾರ ನಡೆಸಿದರು. ಸೊಳ್ಳೆಗಳನ್ನು ನಾಶಪಡಿಸಲು ಫಾಗಿಂಗ್ ಹಾಗೂ ಚರಂಡಿಗಳ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಚಿಕಿತ್ಸೆ ಒದಗಿಸಿ: ಮೃತ ಬಾಲಕನ ಸಂಬಂಧಿ ನ್ಯಾಯವಾದಿ ಎಮ್.ಎಚ್. ಮುಲ್ಲಾ ಆರೋಗ್ಯ ಇಲಾಖೆ ಹಾಗೂ ಪುರಸಭೆ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತ್ತವರನ್ನು ಮತ್ತೆ ಬದುಕಿಸುವ ಶಕ್ತಿ ಆರೋಗ್ಯ ಇಲಾಖೆಗಿಲ್ಲ. ಆದರೆ, ಡೆಂಘೀ ಜ್ವರಕ್ಕೆ ಸಂಬಂಧಿಸಿದ ಮ್ಯಾಕ್‌ಲೈಜ್ ಟೆಸ್ಟ್ ಹಾಗೂ ಬಿಳಿರಕ್ತ ಕಣಗಳನ್ನು ಹಾಕುವ ಪ್ಲೇಟ್‌ಲೆಟ್ ಸೌಲಭ್ಯವೂ ಕೂಡ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿಲ್ಲ. ಹೀಗಾಗಿ ಪ್ರತಿಯೊಂದಕ್ಕೂ ದಾವಣಗೆರೆ ಹುಬ್ಬಳ್ಳಿ, ಮಣಿಪಾಲ ಇನ್ನಿತರ ಸ್ಥಳಗಳಿಗೆ ಹೋಗಬೇಕಾಗಿದ್ದು, ಬಡ ಕುಟುಂಬಗಳಿಂದ ಇದು ಅಸಾಧ್ಯದ ಮಾತು ಎಂದರು.
ಜಿಲ್ಲೆಗೂ ಒದಗಿಸಿ:  ಮಹಮ್ಮದ್‌ಲಿ ಜಿನ್ನಾ ಹಲಗೇರಿ ಮಾತನಾಡಿ, ಡೆಂಘೀಗೆ ಸಂಬಂಧಿತ ರಕ್ಷ ಪರೀಕ್ಷೆ ನಡೆಸಲು ಇಡೀ ರಾಜ್ಯದಲ್ಲಿ ಕೇವಲ 21 ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವುದಾಗಿ ತಿಳಿದು ಬಂದಿದೆ. ಜ್ವರಕ್ಕೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಆರೋಗ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ಕೂಡಲೇ ಔಷಧೋಪಚಾರಕ್ಕಾಗಿ ಅಗತ್ಯ ಉಪಕರಣಗಳನ್ನು ಒದಗಿಸುವಂತೆ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.