ಹಾವೇರಿ

ಪುಸ್ತಕಗಳಿಂದ ವಾಸ್ತವದ ಅರಿವು: ಕುಲಕರ್ಣಿ

Published On :

ಹಾನಗಲ್ಲ: ಪುಸ್ತಕಗಳು ಜಗತ್ತಿನ ವಾಸ್ತವದ ಅರಿವನ್ನು ಮೂಡಿಸುವ ಅಭಿವ್ಯಕ್ತಿಗಳಾಗಿದ್ದು, ಕಾಲ ಕಾಲಕ್ಕೆ ಕಾವ್ಯದ ಧ್ವನಿ ಬದಲಾಗುವುದರ ಜತೆಗೆ ಓದಿನ ವಿಭಜೀಕರಣವೂ ಆಗುತ್ತಿದೆ ಎಂದು ಸಾಹಿತಿ ಸತೀಶ ಕುಲಕರ್ಣಿ ನುಡಿದರು.
ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಸಾಹಿತ್ಯ-ಪಠ್ಯ-ಮೌಲ್ಯ ಕುರಿತ ವಿಚಾರ ಸಂಕಿರಣದಲ್ಲಿ ಪ್ರಥಮ ಪಿಯುಸಿ ಕನ್ನಡ ವಿಷಯದ ಪಠ್ಯದಲ್ಲಿ ಇವರ 'ನನ್ನ ಚಪ್ಪಲಿಗಳಿಗೆ' ಕವನ ಆಯ್ಕೆಯಾಗಿರುವುದಕ್ಕೆ ಕಾಲೇಜಿನಿಂದ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮೌಲ್ಯ ಪ್ರತಿಪಾದಿಸುವ ಸಾಹಿತ್ಯ ಬೇಕಾಗಿದೆ.
ಪುಸ್ತಕ ಅನುಭವಕ್ಕೆ ಸ್ಫೂರ್ತಿ: ಕಾವ್ಯದ ಓದು ಮಾನವೀಯ ಮೌಲ್ಯ, ಸಂಬಂಧಗಳನ್ನು ವೃದ್ಧಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಹಾಗೂ ಇತರ ಮಾಧ್ಯಮಗಳ ಮೂಲಕ ಓದಿನ ವಿಭಜೀಕರಣವೂ ಆಗುತ್ತಿದೆ. ಆದರೆ, ಪುಸ್ತಕ ಮುಟ್ಟಿ, ನೋಡಿ, ಓದು ಅನುಭವಿಸುವ ಸುಖವೇ ನಿಜವಾದ ಕಾವ್ಯ ಸುಖ ಎಂದರು.
ಮನಸ್ಸು ಕಟ್ಟುವ ಕಾವ್ಯ ಬೇಕಿದೆ: ಬಂಡಾಯ ಸಾಹಿತ್ಯ ಸಂಘಟನೆ ನಿರ್ಲಕ್ಷಿತರು, ಜನಸಾಮಾನ್ಯರ ಧ್ವನಿಯಾಗಿ ಹೊರ ಹೊಮ್ಮಿತು. ಕಾವ್ಯದಿಂದ ಸಮಾಜ ಕಟ್ಟುವ ಕಾರ್ಯಕ್ಕೆ ಸ್ಫೂರ್ತಿಯಾಯಿತು. ಕಾಲದ ವಿಡಂಬನೆಗೆ ಕಾವ್ಯ ಮುಂದಾಗುತ್ತಿದೆ. ಮಧುರತೆ, ಪ್ರೀತಿ, ಸಾಮಾಜಿಕ ಜವಾಬ್ದಾರಿಗಾಗಿ ಬರುವ ಕಾವ್ಯವೇ ನಿಜವಾದ ಕಾವ್ಯ. ಮನಸ್ಸುಗಳನ್ನು ಕಟ್ಟಿ, ನಮ್ಮ ನಡುವಿನ ಗೋಡೆಗಳನ್ನು ಕೆಡವಿ ಮೌಲ್ಯ ಪ್ರತಿಪಾದಿಸುವ ಕಾವ್ಯದ ಜವಾಬ್ದಾರಿ ಈಗ ಬೇಕಾಗಿದೆ. ಪ್ರಕೃತಿಯ ಮೇಲಿನ ಅತ್ಯಾಚಾರವಲ್ಲದೆ, ಈಗ ಮನುಷ್ಯನ ಮೇಲಿನ ಅತ್ಯಾಚಾರದ ದುಷ್ಟ ಕರಾಳ ಛಾಯೆ ಮನುಷ್ಯನನ್ನು ಮೃಗವನ್ನಾಗಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸೃಜನಶೀಲತೆಯಿಂದ ಕನಸು ನನಸು: ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಸಿ. ಪೀರಜಾದೆ ಮಾತನಾಡಿ, ಕವಿ, ಕಲಾವಿದರನ್ನು ಗೌರವಿಸಿದರೆ ಸೃಜನಶೀಲತೆಯನ್ನು ಗೌರವಿಸಿದಂತೆ ಸಾಹಿತ್ಯ ಕೃಷಿಯನ್ನು ಸಮುದಾಯಕ್ಕೆ ತಲುಪಿಸುವ ಕಾರ್ಯ ಸಮಾಜ ಹಾಗೂ ಸರ್ಕಾರದಿಂದ ನಿರಂತರವಾಗಿ ನಡೆಯಬೇಕು. ಬೀದಿಯಲ್ಲಿ ಬದುಕುವ ಕಲಾವಿದರಿದ್ದಾರೆ. ಅವರಿಗೆ ಸೂರು ಮಾತ್ರವಲ್ಲ ಅನ್ನದ ಕೊರತೆಯೂ ಇದೆ. ನಿರ್ಲಕ್ಷಿತ ಕವಿ, ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವುದು ಮಾತ್ರವಲ್ಲ, ಅವರ ಬದುಕಿಗೆ ಸಹಕಾರ ನೀಡುವ ಮೂಲಕ ಉತ್ತಮ ಸಾಹಿತ್ಯ ಹಾಗೂ ಕಲೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದ ಅವರು, ಯುವ ಪೀಳಿಗೆ ಸೃಜನಶೀಲತೆಯನ್ನು ಮೈಗೂಡಿಸಿಕೊಂಡು ನಾಳಿನ ಕನಸುಗಳನ್ನು ನನಸಾಗಿಸಿಕೊಳ್ಳಬೇಕು ಎಂದರು. ಸಾಹಿತಿ ಪ್ರೊ೤ ಮಾರುತಿ ಶಿಡ್ಲಾಪುರ ಆಶಯ ಮಾತುಗಳನ್ನಾಡಿ, 'ಸಾಹಿತ್ಯ-ಪಠ್ಯ-ಮೌಲ್ಯ' ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿವೆ.  ನಾಳಿನ ನಮ್ಮ ಜೀವನಕ್ಕೆ ನಮ್ಮದೇ ಆದ ನಿರ್ದಿಷ್ಟ ಜೀವನ ವಿಧಾನಗಳನ್ನು ರೂಪಿಸಿಕೊಳ್ಳಬೇಕು. ಅದರಲ್ಲಿ ನಾವು ಸಮಾಜ ಜೀವಿಗಳು ಎಂಬ ಅರಿವಿರಬೇಕು. ಅದಕ್ಕಾಗಿ ಸಾಹಿತ್ಯ, ಮೌಲ್ಯಗಳು ನಮ್ಮ ಬದುಕಿನ ಪಠ್ಯದಲ್ಲಿರಬೇಕು ಎಂದರು. ಮುಖ್ಯ ಅತಿಥಿಗಳಾಗಿ ಕವಿ ಅಶೋಕ ಕೊಂಡ್ಲಿ, ಉಪನ್ಯಾಸಕರಾದ ಬಿ.ಎಂ. ಕಾಡಪ್ಪನವರ, ಮಹೇಂದ್ರ ಬಾರಿಕರ, ಎಸ್.ಬಿ. ಕಮಾಟಿ, ಎಸ್.ಪಿ. ಹಿರೂರ, ವಿ.ಯು. ಪಾಟೀಲ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.