ಹಾವೇರಿ

ಬ್ಯಾಂಕ್ ಸೇವೆ ಎಲ್ಲರಿಗೂ ಸಿಗಲಿ: ಪಾಂಡುರಂಗ

Published On :

ಹಾವೇರಿ: ಕೇಂದ್ರ ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಬ್ಯಾಂಕಿಂಗ್ ಸಂಘಟನೆಗಳ ನೆರವಿನಲ್ಲಿ ಬ್ಯಾಂಕಿಂಗ್ ಕ್ಷೇತ್ರದಿಂದ ಹೊರಗುಳಿದ ಸಾಮಾನ್ಯರನ್ನು ತಲುಪಲು ಕೆವಿಜಿ ಬ್ಯಾಂಕ್ ಮಹತ್ವ ನೀಡುತ್ತಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಹಾವೇರಿ ಪ್ರಾದೇಶಿಕ ವ್ಯವಸ್ಥಾಪಕ ಕೆ. ಪಾಂಡುರಂಗ ನುಡಿದರು.
ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕುರಿತಂತೆ ಅರಿವು ನೀಡುವ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಸಾಮಾನ್ಯರನ್ನು ಸರಳ ಬ್ಯಾಂಕಿಂಗ್ ಸೇವೆಯ ಮೂಲಕ ತಲುಪಲು ವಿಶೇಷ ಯತ್ನ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮ ಸಭೆಗಳನ್ನು ನಡೆಸಲಾಗುತ್ತಿದೆ. ಆರ್ಥಿಕ ಸಾಕ್ಷರತಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. 2 ಸಾವಿರಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಕುಗ್ರಾಮಗಳಲ್ಲಿ ಅತಿ ಕಿರುಶಾಖೆ ಪ್ರಾರಂಭಿಸಲಾಗಿದೆ. ಶಾಖೆಗಳನ್ನೇ ತೆರೆಯಲು ಬಾರದ ಸ್ಥಳಗಳಲ್ಲಿ ವ್ಯವಹಾರ ಪ್ರತಿನಿಧಿಗಳನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ ಎಂದು ವಿವರಿಸಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ 9 ಜಿಲ್ಲೆಗಳಲ್ಲಿ 523 ಶಾಖೆಗಳ ಮೂಲಕ 5 ಮಿಲಿಯನ್ ಗ್ರಾಹಕರಿಗೆ ರಚನಾತ್ಮಕ ಬ್ಯಾಂಕಿಂಗ್ ಸೇವೆ ನೀಡುತ್ತಿದೆ. ರು. 12 ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ ಎಂದರು.
ಅತಿಥಿಗಳಾಗಿದ್ದ ನಬಾರ್ಡ್ ಜಿಲ್ಲಾ ಅಭಿವೃದ್ಧಿ ಪ್ರಬಂಧಕ ವಿದ್ಯಾ ಗಣೇಶನ್ ಮಾತನಾಡಿ, ಎಲ್ಲರನ್ನೂ ಬ್ಯಾಂಕಿಂಗ್ ವ್ಯಾಪ್ತಿಗೆ ತರುವ ಗುರುತರ ಜವಾಬ್ದಾರಿ ಬ್ಯಾಂಕ್‌ಗಳದ್ದಾಗಿದೆ. ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಶಾಖಾಜಾಲ ಹೊಂದಿರುವ ಗ್ರಾಮೀಣ ಬ್ಯಾಂಕುಗಳು ಹೆಚ್ಚಿನ ಜವಾಬ್ದಾರಿ ಹೊರಬೇಕಿದೆ ಎಂದರು.
ಕೆವಿಜಿ ಬ್ಯಾಂಕಿನ ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಆರು ತಂಡಗಳು ಪಾಲ್ಗೊಂಡಿದ್ದವು. ವಿಜೇತ ತಂಡಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಪ್ರೊ೤ ಎಸ್.ಜೆ. ತೆಪ್ಪದ, ಪ್ರೊ೤ ಆರ್.ಎಲ್. ತೆಂಬದ, ಶಶಿಕಾಂತ ಪದಕಿ ಉಪಸ್ಥಿತರಿದ್ದರು. ಎನ್. ಮುದಕಣ್ಣವರ ಸ್ವಾಗತಿಸಿದರು. ಉಲ್ಲಾಸ ಗುನಗಾ ನಿರ್ವಹಿಸಿದರು. ಆನಂದ ಹೆಬಸೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.