ಹಾವೇರಿ

ಆಮಿಷ: ವ್ಯಕ್ತಿ ಬಂಧನ, ದೂರು ದಾಖಲು

Published On :

ಹಾವೇರಿ: ಮತ ಪಡೆಯುವ ಉದ್ದೇಶದಿಂದ ತೆಂಗಿನಕಾಯಿ ಹಾಗೂ ಬ್ಲೌಸ್‌ಪೀಸ್ ಹಂಚುತ್ತಿದ್ದ ವ್ಯಕ್ತಿಯನ್ನು ಆಟೋ ಸಮೇತ ಬಂಧಿಸಿ, ಬಳಿಕ ವ್ಯಕ್ಯಿಯನ್ನು ಬಿಡುಗಡೆ ಮಾಡಿದ ಘಟನೆ ರಾಣಿಬೆನ್ನೂರಿನ ಉಮಾಶಂಕರ ನಗರದಲ್ಲಿ ಜರುಗಿದೆ. ಈ ಕುರಿತಂತೆ ಕೆ. ಉಬೇದ ಅವರು ದೂರು ನೀಡಿದ್ದು, ರು. 180 ಮೌಲ್ಯದ ಸಾಮಗ್ರಿ ಹಾಗೂ ಆಟೋ ವಶಕ್ಕೆ ಪಡೆಯಲಾಗಿದೆ. ಈ ಕುರಿತಂತೆ ರಾಣಿಬೆನ್ನೂರು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕ ಬೆಂಕಿ: ಮೆಕ್ಕೆಜೋಳ ರಾಶಿ ನಾಶ
ಹಿರೇಕೆರೂರು: ಜಮೀನಿನಲ್ಲಿ ಸಂಗ್ರಹಿಸಲಾಗಿದ್ದ ಗೋವಿನಜೋಳದ ರಾಶಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಮಾರು ರು. 50 ಸಾವಿರ ಮೌಲ್ಯದ ಬೆಳೆ ಸುಟ್ಟುಹೋದ ಘಟನೆ ಹಿರೇಕೆರೂರು ತಾಲೂಕಿನ ಸತಗಿಹಳ್ಳಿಯಲ್ಲಿ ಜರುಗಿದೆ. ಗೋವಿನಜೋಳ ರಾಶಿ ಬೂದಿಗೌಡ ಸಣ್ಣಬಸನಗೌಡ ಗೌಡ್ರ ಎಂಬುವರಿಗೆ ಸೇರಿತ್ತೆನ್ನಲಾಗಿದೆ. ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಸುದ್ದಿ ತಿಳಿದಾಕ್ಷಣ ಗ್ರಾಮದ ಜನತೆಯೇ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟ್ರ್ಯಾಕ್ಟರ್ ಅಪಘಾತ: ಓರ್ವ ಮಹಿಳೆ ಸಾವು
ಹಾವೇರಿ: ನಿರ್ಲಕ್ಷ್ಯ ಹಾಗೂ ವೇಗವಾಗಿ ಟ್ರ್ಯಾಕ್ಟರ್ ಚಾಲನೆ ಮಾಡಿ ತಿರುವಿನಲ್ಲಿ ಓಡಿಸಿದ ಪರಿಣಾಮ ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಇಬ್ಬರು ಮಹಿಳೆಯರು ಕೆಳಗೆ ಬಿದ್ದು, ಓರ್ವಳು ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಮಹಿಳೆ ತೀವ್ರವಾಗಿ ಗಾಯಗೊಂಡ ಘಟನೆ ಹೊಸ ಶಿಡೇನೂರು ರಸ್ತೆಯಲ್ಲಿ ಜರುಗಿದೆ. ಮೃತ ಮಹಿಳೆಯನ್ನು ಕಮಲವ್ವ ಗದಿಗೆಪ್ಪ ಯತ್ತಿನಹಳ್ಳಿ (32) ಎಂದು ದುರುತಿಸಲಾಗಿದ್ದು, ರತ್ನವ್ವ ಮಹಾದೇವಪ್ಪ ಬಿದರಿ ಗಾಯಗೊಂಡಿದ್ದಾಳೆ. ಘಟನೆ ನಂತರ ಟ್ರ್ಯಾಕ್ಟರ್ ಚಾಲಕ ಪೊಲೀಸರಿಗೆ ಮಾಹಿತಿ ನೀಡದೆ ಆಸ್ಪತ್ರೆಗೆ ದಾಖಲಿಸಿದ ಕುರಿತಂತೆ ಹನುಮಂಚಪ್ಪ ರಾಮಪ್ಪ ಒಡೇಯನಪುರ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರು ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಯತ್ನ: ಆರೋಪಿಗಳ ಬಂಧನ
ಹಾವೇರಿ: ಅತ್ಯಾಚಾರ ಎಸಗುವ ಉದ್ದೇಶದಿಂದ ಮಹಿಳೆಯನ್ನು ಅಪಹರಿಸಲೆತ್ನಿಸಿ ವಿಫಲರಾದ ವ್ಯಕ್ತಿಗಳಿಬ್ಬರು ಪೊಲೀಸರ ಅತಿಥಿಗಳಾದ ಘಟನೆ ಹಿರೇಕೆರೂರಿನಲ್ಲಿ ಜರುಗಿದೆ. ಆರೋಪಿಗಳನ್ನು ಮಂಜು ಭೀಮಪ್ಪ ಬಣಕಾರ ಹಾಗೂ ರಾಜು ಅಲಿಯಾಸ್ ಕಿರಣಕುಮಾರ ಹಾಲಯ್ಯ ಮಠದ ಎಂದು ಗುರುತಿಸಲಾಗಿದೆ. ಈ ಕುರಿತಂತೆ ತೊಂದರೆಗೊಳಗಾದ ಮಹಿಳೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ ತನಿಖೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.