ಹಾವೇರಿ

ನರಗುಂದ ಪೊಲೀಸ್ ಠಾಣೆ ಎದುರು ಧರಣಿ

Published On :

ನರಗುಂದ: ಪಟ್ಟಣದ ಪುರಸಭೆ ಚುನಾವಣೆ ನಿಮಿತ್ತ 21ನೇ ವಾರ್ಡನ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗುರುವಾರ ರಾತ್ರಿ 10ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆಂದು ಆರೋಪಿಸಿ ಶುಕ್ರವಾರ ಹಾಲಬಾವಿ ಕೆರೆ ನಿವಾಸಿಗಳು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವವಹಿಸಿದ್ದ ಶಹರ ಕಾಂಗ್ರೆಸ್ ಅಧ್ಯಕ್ಷ ಚಂಬಣ್ಣ ವಾಳದ ಮಾತನಾಡಿ, ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಶಾಸಕರು ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿಯೂ ಹಾಲಬಾವಿ ಕೆರೆಯ ಬಡ ನಿವಾಸಿಗಳ ಮೇಲೆ ರಾತ್ರಿ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು, ಶಾಸಕರ ಕುಮ್ಮಕ್ಕಿನಿಂದ ಬಿಜೆಪಿಗೆ ಮತ ಹಾಕಿಲ್ಲವೆಂದು ಥಳಿಸಿದ್ದಾರೆ. ಈ ಕುರಿತು ಮಾ. 7ರಂದು ಪ್ರಕರಣ ದಾಖಲಿಸಿ, ಮಾ. 8ರ ಬೆಳಗ್ಗೆ 11 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದರೂ ಅವರ ಮೇಲೆ ಕ್ರಮಕೈಗೊಳ್ಳದೇ ರಾಜಾರೋಷವಾಗಿ ಓಡಾಡಲು ಬಿಟ್ಟಿದ್ದಾರೆಂದು ಪೊಲೀಸರ ವಿರುದ್ಧ ಹರಿಹಾಯ್ದರು.
ರಾಜು ಕಲಾಲ ಮಾತನಾಡಿ, ಪಟ್ಟಣದಲ್ಲಿನ ಹಾಲಿ ಶಾಸಕ ಸಿ.ಸಿ. ಪಾಟೀಲರು ಕಾಂಗ್ರೆಸ್ ಕಾರ್ಯಕರ್ತರಿಗೆ ಮೇಲಿಂದ ಮೇಲೆ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಿದರು. ಎಫ್.ವೈ. ದೊಡಮನಿ ಮಾತನಾಡಿ, ನಮಗೆ ಬೇಕಾದ ಪಕ್ಷಕ್ಕೆ ಮತದಾನ ಮಾಡುವ ಅಧಿಕಾರವಿಲ್ಲವೇ ಎಂದರು. ಹಲ್ಲೆಗೊಳಗಾದ ಹಸೇನಸಾಬ ಮಣ್ಣಗೇರ ಪತ್ನಿ ಹುಸೇನಬಿ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಕುರಿತು ಸಿಪಿಐ ಪ್ರಶಾಂತ ಸಿದ್ದನಗೌಡ ಮಾತನಾಡಿ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ, ನಿಮಗೆ ನ್ಯಾಯ ದೊರಕಿಸಿ ಕೊಡಲಾಗುವುದೆಂದು ಧರಣಿ ನಿರತರಿಗೆ ತಿಳಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಆಸ್ಪತ್ರೆಗೆ ಭೇಟಿ: ಮಾಜಿ ಸಚಿವ ಬಿ.ಆರ್. ಯಾವಗಲ್ ಅವರು ಹಲ್ಲೆಗೊಳಗಾದ ನಿಂಗಪ್ಪ ಮಜ್ಜಿಗೆ ದಾಖಲಾದ ತಾಲೂಕು ಆಸ್ಫತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಯಾವಗಲ್, ಶಾಸಕರು ಮತ್ತು ಅವರ ಬೆಂಬಲಿಗರ ಉಪಟಳ ಹೆಚ್ಚಾಗಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ನೋವಿನ ಸಂಗತಿ. ಈ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಎಸ್.ಆರ್. ಪಾಟೀಲ, ಅಶೋಕ ಪತ್ರಿ, ಸಿ.ಬಿ. ಪಾಟೀಲ, ಪ್ರವೀಣ ಯಾವಗಲ್, ಪಿ.ಎ. ಪಾನಿಕಟ್ಟಿ, ಜಿ.ಎಂ. ಜೋರಂ, ಎಂ.ಬಿ. ಮೆಣಸಗಿ, ಜಗದೇಶ ರಾಯನಗೌಡ್ರ, ಜಗದೇಶ ಕಗದಾಳ, ಬಸಪ್ಪ ನರಗುಂದ, ಮಾರುತಿ ಮೇಟಿ, ಮುನ್ನಾ ಸಕಲಿ, ದ್ಯಾಮಣ್ಣ ಸವದತ್ತಿ, ತೀರ್ಥಗೌಡ ಪಾಟೀಲ, ಬಸು ವಡ್ಡಗೇರಿ, ಹುಲಗಮ್ಮ ಮಜ್ಜಿಗಿ, ಸುರೇಶ ಕಮ್ಮಾರ, ಸಿ.ಎಂ. ಬುದ್ನಿ  ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.