ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ನಿರ್ಲಕ್ಷ್ಯ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ.18
ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ಜೀವನದ ಪ್ರತಿ ಹಂತದಲ್ಲೂ ಹೋರಾಟದ ಬದುಕು ಸಾಗಿಸುವಂತಾಗಿದೆ. ಮಹಿಳೆ ಶ್ರಮ ಪರಿಗಣಿಸಿದ ಪುರುಷ ಪ್ರಧಾನ ಸಮಾಜ ತಾತ್ಸಾರ ಮನೋಭಾವನೆಯಿಂದ ಕಾಣುತ್ತಿದೆ ಎಂದು ಉಪನ್ಯಾಸಕಿ ರೂಪಾ ಸಜ್ಜನ ವಿಷಾದ ವ್ಯಕ್ತಪಡಿಸಿದರು.
ಸ್ಥಳೀಯ ಪುರಸಭೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ದೃಷ್ಟಿಕೋನ ಬದಲಾಗಲಿ: ಮಹಿಳೆ ಸ್ವಾವಲಂಬಿಯಾಗಿ ಬದುಕಲು ಬಿಡಬೇಕು. ಆದರೆ, ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಸ್ವೇಚ್ಛಾಚಾರದ ಬಣ್ಣ ಹಚ್ಚುವ ಮೂಲಕ ಮಹಿಳೆಯನ್ನು ಸಂಕೋಲೆಯಲ್ಲಿಡುವ ಪ್ರಯತ್ನಗಳು ನಡೆಯುತ್ತಿವೆ. ಮಹಿಳೆಯರನ್ನು ನೋಡುತ್ತಿರುವ ದೃಷ್ಟಿಕೋನ ಬದಲಾಗಬೇಕಾಗಿದೆ ಎಂದರು.
ದುರಂತ ಸಂಗತಿ: ಸಮಾನತೆ ಕೇವಲ ನಿಘಂಟಿನ ಪದಕ್ಕೆ ಸೀಮಿತವಾಗಬಾರದು. ಕುಟುಂಬದೊಳಗಿನ ಸಮಸ್ಯೆ ಪರಿಹರಿಸದಿರುವ ಪುರುಷರು, ಆಕೆಯ ಬಾಹ್ಯ ಸಮಸ್ಯೆಗಳನ್ನು ಪರಿಹರಿಸುವುದು ಎಷ್ಟು ಸತ್ಯ? ಮಹಿಳೆ ತನ್ನೆಲ್ಲಾ ಸಂಕಟಗಳನ್ನು ಸ್ವೀಕರಿಸುವ ತಾಳ್ಮೆ ಹೊಂದಿದ್ದಾಳೆ ಹೊರತು ಅಗತ್ಯ ಸಂದರ್ಭಗಳಲ್ಲಿ ಅವುಗಳನ್ನು ಮೆಟ್ಟಿ ನಿಲ್ಲುವಲ್ಲಿ ಅಸಹಾಯಕತೆ ತೋರುತ್ತಿರುವುದು ದುರಂತ ಎಂದು ಬಣ್ಣಿಸಿದರು.
ನಿಸ್ಸಹಾಯಕಳಾಗಿದ್ದಾಳೆ: ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಸಂಕಮ್ಮ ಸಂಕಣ್ಣನವರ ಮಾತನಾಡಿ, ಸಮಸ್ಯೆಗಳನ್ನು ಒಡಲಲ್ಲಿ ತುಂಬಿಕೊಂಡಿರುವ ಮಹಿಳೆ, ಸವಾಲುಗಳನ್ನು ಎದುರಿಸಲು ನಿಸ್ಸಹಾಯಕಳಾಗಿದ್ದಾಳೆ. ಆಧುನಿಕತೆ ಗೀಳಿಗೆ ಬಿದ್ದಿರುವ ಮಹಿಳೆ ಸ್ವೇಚ್ಛಾಚಾರದ ಹೆಸರಿನಲ್ಲಿ ತಾನು ಮುಂದುವರಿದಂತೆ ಭಾವಿಸಿಕೊಳ್ಳುತ್ತಿರುವುದು ತಪ್ಪು ಎಂದರು.
ಜೀವರಾಜ ಛತ್ರದ ಮಾತನಾಡಿ, ಆಧುನಿಕ ಸಮಾಜ ಒಮ್ಮೆಲೆ ಬದಲಾವಣೆಯಾಗಲು ಸಾಧ್ಯವಿಲ್ಲ. ಕಠಿಣ ಕಾನೂನುಗಳಿಂದ ಸಮಾಜವನ್ನು ನಿಯಂತ್ರಿಸಬಹುದೇ ವಿನಃ ಬದಲಾಯಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಮಹಿಳೆಯನ್ನು ನೋಡುವ ದೃಷ್ಟಿಕೋನ ಬದಲಾಗಬೇಕೆಂದರು.
ಮಹಿಳೆ ಅಜ್ಞಾನದಿಂದ ಹೊರಬಂದು ಶಿಕ್ಷಣ ಪಡೆದಾಗ ಮಾತ್ರ ಸಮಾಜದ ಪರಿವರ್ತನೆ ಸಾಧ್ಯ. ಪ್ರಸ್ತುತ ದಿನಗಳಲ್ಲಿ ಶಿಸ್ತು ಹಾಗೂ ಶಿಷ್ಟಾಚಾರವನ್ನು ಮಹಿಳೆಯರು ರೂಢಿಸಿಕೊಳ್ಳಬೇಕೆಂದರು.
ಅನುಸೂಯಾ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯಾಧಿಕಾರಿ ಎ.ಬಿ. ಹಾಳಕಲ್ಲಾಪುರ, ಮಹಿಳಾ ಇಲಾಖೆ ಮೇಲ್ವಿಚಾರಕಿ ಶೋಭಾ ಹುಲ್ಮನಿ, ಎಸ್.ಡಿ. ಅಗಡಿ, ವಿ.ಎಂ. ಪೂಜಾರ, ಎಂ.ಪಿ. ಯಲ್ಲಣ್ಣನವರ, ಶಿವಕುಮಾರ ಹಲಗಣ್ಣನವರ, ಇನ್ನಿತರರು ಉಪಸ್ಥಿತರಿದ್ದರು. ಸಿ.ಪಿ. ಚೇತನಾ ಸ್ವಾಗತಿಸಿದರು. ಜಯಶ್ರೀ ಕೋರಿಶೆಟ್ಟರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

