ಸಮಾಜದ ಅಂಕು-ಡೊಂಕು ತಿದ್ದಿದ ಶರೀಫರು
ಬಸವರಾಜ ಎಸ್. ಹಿರೇಮಠ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಮಾ. 19
ನಾಡಿನಲ್ಲಿ ಅನೇಕ ಶರಣರು ಸಾಹಿತಿಗಳು ಹುಟ್ಟಿ ನಾಡು-ನುಡಿಗಾಗಿ ತಮ್ಮದೇ ಕೊಡುಗೆ ನೀಡಿದ್ದಾರೆ. ಅವರಲ್ಲಿ ಕರ್ನಾಟಕದ ಕಬೀರ, ಭಾವೈಕ್ಯದ ಹರಿಕಾರ ಜಾನಪದ ಸಂತ ಕವಿ ಎಂದೇ ಖ್ಯಾತಿ ಪಡೆದವರು ಶಿಗ್ಗಾಂವಿ ತಾಲೂಕು ಶಿಶುವಿನಾಳ ಗ್ರಾಮದ ಶರೀಫರು.
ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಸುಂದರ ಸಮಾಜ ನಿರ್ಮಾಣಕ್ಕೆ ಶಿಶುವಿನಾಶ ಶರೀಫ ಸಾಹೇಬರು ಶ್ರಮಿಸಿದರು. ತಮ್ಮ ತತ್ವಪದಗಳಿಂದ ಜೀವನ ಸಾರವನ್ನು ತಿಳಿಸಿದರಲ್ಲದೆ ಇಡೀ ಮನುಜ ಕುಲದ ಉದ್ಧಾರಕ್ಕೆ ಯತ್ನಿಸಿದವರು.
ಜೀವನ ಮೌಲ್ಯ ಬಿತ್ತರ: ಕರ್ನಾಟಕದ ಕಬೀರ, ಜಾನಪದ ಕವಿ, ಸಂತ ಎಂದೆನಿಸಿಕೊಂಡವರು. ಒಂದೆಡೆ ನೆಲೆ ನಿಲ್ಲದೇ ಸದಾ ಸಂಚಾರದ ಮೂಲಕ ಜನಮನ ತಲುಪಿಸಿ, ಅಪಾರ ಅನುಭವಗಳ ಮೂಲಕ ಜೀವನದ ಮಹತ್ವ ಹಾಗೂ ಜಂಜಾಟಗಳನ್ನು ಸಹಜ ಪದಗಳ ಮೂಲಕ ಜನಮಾನಸದಲ್ಲಿ ಬಿತ್ತರಿಸಿದರು.
ಜನರ ಕಲ್ಯಾಣಕ್ಕೆ ಶ್ರಮ: ದೈವಿಭಕ್ತರಾದ ಶರೀಫರು ಧರ್ಮದಿಂದ ಮುಸ್ಲಿಮರಾದರೂ ದೃಷ್ಟಿಯಿಂದ ವಿಶ್ವಮಾನವರಾಗಿ ಜಗದ ಕಲ್ಯಾಣಕ್ಕಾಗಿ ಶ್ರಮಿಸಿ ಧೀಮಂತರೆನಿಸಿದರು. ಹೀಗಾಗಿ ಅವರ ಜೀವನದ ಸಂದೇಶಗಳು ಭವಿಷತ್ವದ ದಾರಿದೀಪಗಳೆಂದು ಜನತೆ ಇಂದಿಗೂ ನಂಬಿ ಸಾಗುತ್ತಿದ್ದಾರೆ.
ತಾಳದಿಂದ ಜೀವನದ ತಿರುಳು: ಸೂರ್ಯ-ಚಂದ್ರರು ಇರುವವರೆಗೂ ಸಂತ ಶರೀಫರ ಸಂದೇಶಗಳು ಅಜರಾಮರ. ಹಳ್ಳ-ಕೊಳ್ಳಗಳು ನದಿ-ಹೊಂಡಗಳೆಲ್ಲಾ ಹರಿದು ಸಮುದ್ರವನ್ನೇ ಸೇರುವಂತೆ ಎಲ್ಲ ತತ್ವಗಳ ಮೂಲ ಒಂದೇ ಎಂಬ ವಿಶಾಲ ತತ್ವಸಾರ ಅವರದಾಗಿದೆ. ಹೀಗಾಗಿ ಮೂರು ದಿನದ ಸಂತಿ ನಿನಗ್ಯಾಕ ಲೋಕದ ಚಿಂತಿ ಬಿಡು ಭ್ರಾಂತಿ ಬಾ ಹೋಗೋಣ ಹಾಗೂ ಬೋಧ ಒಂದೇ ಬ್ರಹ್ಮನಾಥ ಒಂದೇ ಎಂಬ ಹಾಡಿನ ಮೂಲಕವೇ ಜೀವನದ ತಿರುಳನ್ನು ತಿಳಿಯಪಡಿಸಿದ್ದಾರೆ.
ಪ್ರವಾಸಿ ತಾಣ ಶರೀಫಗಿರಿ: ತಿಳಿಗನ್ನಡದ ಸರಳವಾಗಿರುವ ಅವರ ಬೆಡಗಿನ ಹಾಡುಗಳಲ್ಲಿ ಆಧ್ಯಾತ್ಮದ ಸೊಗಡು ತುಂಬಿದೆ. ಯಾವ ಮತ-ಪಂಥಗಳಿಗೆ ಸೇರದ ಶರೀಫರ ಸಮಾಧಿ ಸರ್ವಧರ್ಮ ಸಮನ್ವಯದ ಹರಿಕಾರನ ತಾಣವಾಗಿದೆ. ಇಂತಹ ಪುಣ್ಯಕ್ಷೇತ್ರ ಶಿಗ್ಗಾವಿಯಿಂದ ಸುಮಾರು 15 ಕಿ.ಮಿ ದೂರದಲ್ಲಿ ಈಗ ಸುಂದರ ಪ್ರವಾಸಿ ತಾಣವಾಗಿ ಜನರನ್ನು ಆಕರ್ಷಿಸುತ್ತಿದೆ.
ನೋಡುಗರ ಆಕರ್ಷಣೆ ಕೇಂದ್ರ: ಶರೀಫರು ಕಳಸದ ಗುರು ಗೊವಿಂದಭಟ್ಟರಿಂದ ಸಂತ ಶಿಖಾಮಣಿಯಾಗಿ ರೂಪಗೊಂಡು ಮರೆಯಲಾಗದ ಮಹಾನುಭಾವರಾದರು. ಸರ್ಕಾರ ಶರೀಫರ ಸ್ಮರಣೆಗಾಗಿ ಅಧ್ಯಾತ್ಮಿಕ ಅಧ್ಯಯನ ಕೇಂದ್ರ, ಪ್ರವಾಸಿ ನಿಲಯ, ಗ್ರಂಥಾಲಯ, ಕಲಾಭವನ, ಸಮುದಾಯ ಭವನ ನಿರ್ಮಿಸಿ ಉತ್ತಮ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಿರುವುದು ಇಲ್ಲಿನ ಜನತೆಗೆ ಸಂತಸದ ಸಂಗತಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

