ಕೋಮು ಸೌಹಾರ್ದ ಕದಡುವ ಯತ್ನ: ದೂರು
ಹಾವೇರಿ: ನಗರಸಭಾ ಮಾಜಿ ಸದಸ್ಯ ಬಾಬುಸಾಬ ಮೋಮಿನಗಾರ ಸೇರಿದಂತೆ ಐವರು ನಗರದಲ್ಲಿರುವ ಜನತೆಯಲ್ಲಿನ ಕೋಮು ಸೌಹಾರ್ದ ಕದಡುತ್ತಿದ್ದಾರೆ ಎಂದು ಆರೋಪಿಸಿ ಅಂಜುಮನ್ ಇಸ್ಲಾಂ ಸಮಿತಿ, ಮುಸ್ಲಿಂ ಸಮಾಜದ ಮುಖಂಡರು ಗುರುವಾರ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದ ಶಾಂತಿಗೆ ಭಂಗ ತರುವ ಚಟುವಟಿಕೆಯಲ್ಲಿ ತೊಡಗಿರುವ ನಗರಸಭೆ ಮಾಜಿ ಸದಸ್ಯ ಬಾಬುಸಾಬ ಮೋಮಿನಗಾರ ಇಲ್ಲ ಸಲ್ಲದ ವಿಷಯಗಳನ್ನು ಮುದ್ರಿಸಿ ಹಂಚುವ ಮೂಲಕ ಜನರಲ್ಲಿ ಕೋಮುಭಾವನೆ ಬಿತ್ತುತ್ತಿದ್ದಾರೆ. ಅಲ್ಲದೆ, ಮುಸ್ಲಿಮರನ್ನು ರಾಜಕೀಯವಾಗಿ ತುಳಿಯುವ ಯತ್ನ ನಡೆದಿದೆ. ಚುನಾವಣೆ ಸಂದರ್ಭದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡುವಲ್ಲಿ ಮೀನಮೇಷ ಎಣಿಸಲಾಗುತ್ತಿದೆ ಎಂಬಿತ್ಯಾದಿ ಅಂಶಗಳ ಕರಪತ್ರವನ್ನು ಕೆಲವರ ಭಾವಚಿತ್ರದೊಂದಿಗೆ ಮುದ್ರಿಸಿ ನಗರದಲ್ಲಿ ಹಂಚಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಈ ಕುರಿತ ಇಲ್ಲಿನ ತಾರಾ ಪ್ಲಾಜಾದಲ್ಲಿ ಗುರುವಾರ ಸಭೆ ನಡೆದಿತ್ತು. ಈ ಕರಪತ್ರ ಕೈಗೆ ಸಿಕ್ಕಾಗ ಹಲವು ಮುಸ್ಲಿಂ ಬಾಂಧವರು ಈ ಬಗ್ಗೆ ತಕರಾರು ಎತ್ತಿದ್ದರಲ್ಲದೇ, ಬಾಬುಸಾಬ ಅವರನ್ನು ವಿಚಾರಿಸುವ ಪ್ರಯತ್ನವನ್ನೂ ಮಾಡಿದ್ದರು. ಆದರೆ, ಬಾಬುಸಾಬ ತಲೆ ತಪ್ಪಿಸಿಕೊಂಡು ಹೋದರು. ಇದರಿಂದ ಕೆರಳಿದ ಸಮಾಜದ ನೂರಾರು ಜನರು ಗುರುವಾರ ತಾರಾ ಪ್ಲಾಜಾಕ್ಕೆ ಹೋಗಿ ಸಭೆಯನ್ನು ತಡೆದರು. ಇದು ಸಮಾಜ ವಿರೋಧಿ ಸಭೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮುಸ್ಲಿಂ ಸಮಾಜ ಮುಖಂಡರು ಸಭೆಯನ್ನು ರದ್ದುಗೊಳಿಸಿದರು.
ಚಕಮಕಿ: ಸಭೆ ತಡೆಯುವ ಸಂದರ್ಭಬಾಬುಸಾಬ ಮೋಮಿನಗಾರ, ಮುಸ್ಲಿಂ ಬಾಂಧವರೊಂದಿಗೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಕೈಕೈಮಿಲಾಯಿಸುವ ಹಂತ ತಲುಪಿದಾಗ ಪೊಲೀಸರು ಮಧ್ಯೆ ಪ್ರವೇಶಿಸಿ ಜನರನ್ನು ಚದುರಿಸಿದರು. ಕೆಲಹೊತ್ತು ತಾರಾ ಪ್ಲಾಜಾದ ಮುಖ್ಯ ಬಾಗಿಲು ಬಂದ್ ಮಾಡಿ ಪರಿಸ್ಥಿತಿ ಹತೋಟಿಗೆ ತರಲಾಯಿತು.
ಬಳಿಕ ಮುಸ್ಲಿಂ ಮುಖಂಡರು ಈ ಕುರಿತು ದಾನಮ್ಮ ದೇವಸ್ಥಾನದ ಬಳಿ ದರ್ಗಾದಲ್ಲಿ ಸಭೆ ಸೇರಿ 2 ಗಂಟೆ ಕಾದರೂ ಬಾಬುಸಾಬ ಸಭೆಗೆ ಬಾರದಿದ್ದಾಗ ಅವರ ವಿರುದ್ಧ ದೂರು ದಾಖಲಿಸಲು ನಿರ್ಧರಿಸಿದರು. ಜತೆಗೆ ಮಾ. 22ರಂದು ಸಂಜೆ ಸಮಾಜದ ಮುಖಂಡರೆಲ್ಲ ಮತ್ತೊಮ್ಮೆ ಸಭೆ ಸೇರಿ ನಿರ್ಧರಿಸುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

