ಇಂದಿನಿಂದ ಹಾನಗಲ್ ಗ್ರಾಮದೇವಿ ಜಾತ್ರೋತ್ಸವ
ಹಾನಗಲ್ಲ: ಸಾಂಸ್ಕೃತಿಕ ಸಿರಿನಾಡು ವಿರಾಟನಗರ ಖ್ಯಾತಿಯ ಐತಿಹಾಸಿಕ ಹಾನಗಲ್ಲಿನಲ್ಲಿ 7ನೇ ಗ್ರಾಮದೇವಿ ಜಾತ್ರೆ ಮಾ. 22ರಿಂದ ಏ. 3ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ.
40 ವರ್ಷಗಳ ಕಾಲ ಹಾನಗಲ್ಲ ಗ್ರಾಮದೇವಿ ಜಾತ್ರೆ ನಡೆದಿರಲಿಲ್ಲ. ಆದರೆ, 1986ರಲ್ಲಿ ಹಾನಗಲ್ಲಿನ ಹಿರಿಯರು, ಧಾರ್ಮಿಕ ಮುಖಂಡರು ಮಾಜಿ ಸಚಿವ ಸಿ.ಎಂ. ಉದಾಸಿ, ಎಂ.ಬಿ. ಕಲಾಲ, ಎಚ್.ಎಸ್. ನಾಗಜ್ಜನವರ, ದೇವಿಂದ್ರಪ್ಪ ಮೂಡ್ಲಿ, ಎಂ.ಎಚ್. ಕಲಾಲ, ರಾಘವೇಂದ್ರ ಕೋಟೇಶ್ವರ, ವೈ.ಎಫ್. ಕಿತ್ತೂರು ಮುಂತಾದ ಹಿರಿಯರ ಸಾಂಸ್ಕೃತಿಕ, ಧಾರ್ಮಿಕ ಸದಾಲೋಚನೆಯಿಂದ ಜಾತ್ರೆ ಪುನರಾರಂಭವಾಯಿತು.
ಹಾನಗಲ್ಲಿನ ಗ್ರಾಮದೇವಿಗೂ, ಶಿರಸಿ ಮಾರಿಕಾಂಬಾ ದೇವಿಗೂ ಅಕ್ಕ-ತಂಗಿಯರ ಸಂಬಂಧವಿದೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಹಾನಗಲ್ಲಿನ ಶ್ರೀ ಗ್ರಾಮದೇವಿಯ ತವರು ಹಾನಗಲ್ ತಾಲೂಕಿನ ಹಸನಾಬಾದಿ ಎನ್ನಲಾಗುತ್ತಿದೆ.
ಮಾ. 22ರಂದು ಬೆಳಗ್ಗೆ 8ಗಂಟೆಗೆ ಅಂಕಿ ಹಾಕುವುದು, ಶ್ರೀ ಗ್ರಾಮದೇವಿ ಪಾದಗಟ್ಟೆಯ ಕಳಸಾರೋಹಣ ಹಾಗೂ ಧ್ವಜಾರೋಹನ ಕಾರ್ಯಕ್ರಮ ನಡೆಯುವುದು. ಹುಬ್ಬಳ್ಳಿ ಮೂರುಸಾವಿರಮಠದ ಜ. ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ನೆರವೇರುವವು. 24ರಂದು ಟಗರಿನ ಕಾಳಗ ನಡೆಯಲಿದೆ.
ಭವ್ಯ ರಥೋತ್ಸವ: 26ರಂದು ರಾತ್ರಿ 9ಕ್ಕೆ ಶ್ರೀದೇವಿಯ ರಥೋತ್ಸವದಲ್ಲಿ ಕೇರಳದ ಚಂಡಿವಾದ್ಯ, ತಾಸಾ ರಾಂದೋಲ, ಚಿತ್ರದುರ್ಗದ ಕಹಳೆ, ಮಹಿಳಾ ವೀರಗಾಸೆ, ಬೇಡರ ವೇಷ, ಜಗ್ಗಲಿಗೆ ಮೇಳ, ಸ್ತಬ್ಧ ಚಿತ್ರಗಳು, ಝಾಂಜ್, ಡೊಳ್ಳು, ಕೊಂಬು, ಕೀಲುಕುದರೆ, ನೃತ್ಯಗಾರರು, ಬೃಹತ್ ಗೊಂಬೆಗಳು ಹಾಗೂ ವೇಷಭೂಷಣಗಳಿಂದ ಅಲಂಕೃತಗೊಂಡ ಜಾನಪದ ಕಲಾವಿದರು ಪಾಲ್ಗೊಂಡು ಮೆರವಣಿಗೆಗೆ ಮೆರಗು ತರಲಿವೆ. 27ರಂದು ಬೆಳಗ್ಗೆ ಪಾದಗಟ್ಟೆಯ ಮೇಲೆ ಶ್ರೀ ಗ್ರಾಮದೇವಿಯ ಪ್ರತಿಷ್ಠಾಪನೆ ಹಾಗೂ ಸಾಂಪ್ರದಾಯಕ ವಿಧಿ-ವಿಧಾನಗಳು ನಡೆಯುವವು.
ಸಾಂಸ್ಕೃತಿಕ ವೈವಿಧ್ಯ: ಮಾ. 27ರಿಂದ ಏ. 2ರ ವರೆಗೆ ಪ್ರತಿದಿನ ರಾತ್ರಿ 9ಕ್ಕೆ ಉತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.
27ರಂದು ಸಹನಾ ಕರೋಂಕೆ ಮೆಲೋಡಿಸ್ ಹಾನಗಲ್ಲ ಇವರಿಂದ ರಸಮಂಜರಿ ಕಾರ್ಯಕ್ರಮವಿದೆ. 28ರಂದು ಚೇತನ ಕಾಮನಹಳ್ಳಿ ಫ್ರೆಂಡ್ಸ್ ಗ್ರುಪ್ ಹಾನಗಲ್ಲ ತಂಡದಿಂದ ಪಾಪ್ ಡಾನ್ಸ್, ಶ್ರೀ ಅನ್ನಪೂರ್ಣೇಶ್ವರಿ ಅಂಧರ ಕಲಾ ತಂಡ ಶಿರಸಿ ಇವರಿಂದ ಮಿಮಿಕ್ರಿ, ಭಾವಗೀತೆ, ಭಕ್ತಿಗೀತೆ ಹಾಗೂ ಚಲನಚಿತ್ರ ಗೀತೆಗಳ ಕಾರ್ಯಕ್ರಮ ಪ್ರಸ್ತುತಗೊಳ್ಳಲಿವೆ. 29ರಂದು ರಾಣಿಬೆನ್ನೂರಿನ ಹಾಲೇಶ ಗುಂಗೇರ ತಂಡದಿಂದ ಜಾನಪದ ಹಾಡು, ಮಿಮಿಕ್ರಿ, ನೃತ್ಯ ಕಾರ್ಯಕ್ರಮ ಹಾಗೂ ಶೇಷಗಿರಿಯ ಶ್ರೀ ಗಜಾನನ ಯುವಕ ಮಂಡಳದಿಂದ ರಂಗ ಪ್ರದರ್ಶನ ನಾಟಕ, 30ರಂದು ಶಿರಸಿಯ ಆನಂದಿ ನೃತ್ಯಕಲಾ ಶಾಲೆಯವರಿಂದ ಕಥಕ್ ನೃತ್ಯ ಹಾಗೂ ಭರತನಾಟ್ಯ ಪ್ರದರ್ಶನ. 31ರಂದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಹಣಜಿಬೈಲ್ ಹಾಗೂ ಹಾನಗಲ್ಲ ಇವರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿವೆ.
ಏ. 1ರಂದು ಹಾನಗಲ್ಲಿನ ಹೆಜ್ಜೆ-ಗೆಜ್ಜೆ ವೇದಿಕೆಯಿಂದ ಭರತನಾಟ್ಯ ಮತ್ತು ಹಾನಗಲ್ಲಿನ ಅಶೋಕ ಕೊಂಡ್ಲಿ ಹಾಗೂ ಸಂಗಡಿಗರಿಂದ ಹಾಸ್ಯ, ಸಂಗೀತ ಕಾರ್ಯಕ್ರಮವಿದೆ. 2ರಂದು ಗೆಜ್ಜೆ-ಹೆಜ್ಜೆ ರಂಗತಂಡ ಮೈಸೂರು ಇವರಿಂದ ಹಾಸ್ಯಲೋಕ ಕಾರ್ಯಕ್ರಮವು ಕಲಾವಿದರಾದ ಬ್ಯಾಂಕ್ ಜನಾರ್ಧನ, ಮೈಸೂರು ರಮಾನಂದ, ವೈಜನಾಥ ಬಿರಾದಾರ, ಅಪೂರ್ವ ಅವರಿಂದ ನಡೆಯಲಿದೆ.
ಕೃಷಿಮೇಳ: ಏ. 3ರಂದು ಮಂಗಳವಾರ ಕೃಷಿ ಇಲಾಖೆ ಹಾವೇರಿ ಆಶ್ರಯದಲ್ಲಿ ಕೃಷಿಮೇಳ ನಡೆಯಲಿದೆ. ಮಾಜಿ ಸಚಿವ ಸಿ.ಎಂ. ಉದಾಸಿ ಅವರು ಗ್ರಾಮದೇವಿ ಜಾತ್ರಾ ಸಮಿತಿ ಅಧ್ಯಕ್ಷರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

