ಬಿಸಿಯೂಟಕ್ಕೆ ಹೆದ್ದಾರಿ ದಾಟುವ ಮಕ್ಕಳು!
ಅನಂತ ದೇಸಾಯಿ
ಕನ್ನಡಪ್ರಭ ವಾರ್ತೆ, ಜೋಯಿಡಾ, ಮಾ. 21
ತಾಲೂಕಿನ ಅಣಶಿ ಪ್ರೌಢಶಾಲೆಯ ಮಕ್ಕಳು ಬಿಸಿಯೂಟಕ್ಕಾಗಿ ತಟ್ಟೆ ಹಿಡಿದು ಹೆದ್ದಾರಿ ದಾಟುವ ಅಪಾಯಕರ ಸ್ಥಿತಿ, ಕುಡಿಯುವ ನೀರಿನ ಅವ್ಯವಸ್ಥೆ, ಶೌಚಾಲಯ, ಅಪೂರ್ಣ ಕಟ್ಟಡ ಹೀಗೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದು, ಈ ಎಲ್ಲ ಅವ್ಯವಸ್ಥೆ ನಡುವೆ ಇಲ್ಲಿನ ಮಕ್ಕಳು ಶಿಕ್ಷಣ ಕಲಿಯುತ್ತಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಜೋಯಿಡಾ ಗಡಿ ತಾಲೂಕಿನ ಶಿಕ್ಷಣ ವ್ಯವಸ್ಥೆ ಕಡೆಗಣಿಸಲ್ಪಟ್ಟಿದೆ ಎನ್ನುವ ಆರೋಪ ಕೇಳಿಬರುತ್ತಿದೆ.
2009-10ರಲ್ಲಿ ಆರಂಭಗೊಂಡ ಅಣಶಿ ಪ್ರೌಢಶಾಲೆ ಕಟ್ಟಡ ಸಮಸ್ಯೆಯಿಂದಾಗಿ ಅಲ್ಲಿನ ಪ್ರಾಥಮಿಕ ಶಾಲೆಯಲ್ಲಿಯೇ ತರಗತಿ ಆರಂಭಿಸಿತ್ತು. ಕಟ್ಟಡದ ಕಾಮಗಾರಿಯ ವಿಳಂಬಗತಿ ಕೆಲಸದಿಂದ ಕಳೆದ ಮಧ್ಯಂತರ ರಜೆಯ ನಂತರ ಒಂದು ಕಟ್ಟಡಕ್ಕೆ ಪ್ರವೇಶ ಪಡೆದರೆ, ಇನ್ನೊಂದು ಕಟ್ಟಡ ಪೂರ್ಣಗೊಳ್ಳದ ಕಾರಣ ಇಲಾಖೆಗೆ ಹಸ್ತಾಂತರಿಸಿಲ್ಲ. ಅಲ್ಲಲ್ಲಿ ಸೋರುವ ಕಟ್ಟಡಗಳ ನಡುವೆ ಶಿಕ್ಷಕರು ಮಕ್ಕಳಿಗೆ ಪಾಠಮಾಡಿಕೊಂಡಿರಬೇಕಾದ ಪರಿಸ್ಥಿತಿ ಇದೆ.
ಪ್ರೌಢಶಾಲೆ ಮಕ್ಕಳು ಬಿಸಿಯೂಟಕ್ಕಾಗಿ ತಾಟು ಹಿಡಿದು ಸದಾಶಿವಗಡ-ಔರಾದ ಹೆದ್ದಾರಿ ದಾಟಿ 200 ಮೀ. ದೂರದ ಪ್ರಾಥಮಿಕ ಶಾಲೆಯ ಆವರಣಕ್ಕೆ ಹೊಗಬೇಕಿದೆ. ಹೊಸ ಕಟ್ಟಡದಲ್ಲಿ ಪ್ರೌಢಶಾಲೆ ಆರಂಭಿಸಿದ್ದರೂ ಬಿಸಿಯೂಟದ ಕಟ್ಟಡ ಮಾತ್ರ ಇನ್ನೂ ಮಂಜೂರಿಯಾಗಿಲ್ಲ. ಇದು ಇಲಾಖೆ ನಿರ್ಳಕ್ಷವೋ, ಅಧಿಕಾರಿಗಳ ಬೇಜವಾಬ್ದಾರಿಯೊ ಎನ್ನುವುದನ್ನು ಸಂಬಂಧಪಟ್ಟವರು ತಿಳಿಸಬೇಕಾಗಿದೆ. ಒಟ್ಟಾರೆ ಹೆದ್ದಾರಿಯಲ್ಲಿ ವಾಹನ ದಟ್ಟಣೆ ನಡುವೆ ಊಟಕ್ಕಾಗಿ ಮಕ್ಕಳು ರಸ್ತೆಯುದ್ದಕ್ಕೂ ಸಾಗಿ ಹೋಗುವಾಗ ಅಚಾತುರ್ಯವೇನಾದರು ನಡೆದರೆ ಇಲಾಖೆಯೇ ಇದಕ್ಕೆ ಹೊಣೆಗಾರರೆಂದು ಪಾಲಕರು ಎಚ್ಚರಿಸಿದ್ದಾರೆ.
ಸ್ವಚ್ಛವಾಗಿಲ್ಲ ಶೌಚಾಲಯ: ಶಾಲಾ ಮಕ್ಕಳಿಗೆ ಕುಡಿವ ನೀರಿಗಾಗಿ ಸಮರ್ಪಕ ವ್ಯವಸ್ಥೆ ಕಲ್ಪಿಸಿಲ್ಲ. ಮಕ್ಕಳು ಅನತಿ ದೂರದ ಮನೆಗಳಿಂದ ನೀರು ಸಂಗ್ರಹಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಇಲ್ಲಿನ ಗ್ರಾಪಂ ಮಾತ್ರ ಇನ್ನೂ ಈ ಮಕ್ಕಳ ಸಮಸ್ಯೆಗೆ ತಲೆ ಹಾಕದೆ ವರ್ಷಾಂತ್ಯದ ಅನುದಾನವನ್ನು ಖರ್ಚು ಮಾಡುವಲ್ಲಿಯೇ ಕಾಲಹರಣ ಮಾಡುತ್ತಿದೆ. ಸ್ಥಳಿಯ ಆಡಳಿತ ಮಂಡಳಿ, ಜನಪ್ರತಿನಿಧಿಗಳಾರೂ ಈ ಮಕ್ಕಳ ನೀರಿನ ಸಮಸ್ಯೆಗೆ ತಲೆ ಕೆಡಿಸಿಕೊಂಡಿಲ್ಲ. ಇಲ್ಲಿನ ನೀರಿನ ಸಂಗ್ರಹಾಗಾರ ಶಿಥಿಲಾವಸ್ಥೆ ತಲುಪಿದ್ದು, ಇದರಲ್ಲಿನ ನೀರನ್ನು ಮಕ್ಕಳು ಕುಡಿಯಲು ಬಳಸುವಂತಿಲ್ಲ. ಬಳಸಿದರೆ ಮಕ್ಕಳಿಗೆ ಅನಾರೋಗ್ಯ ಖಚಿತ.
ಮಕ್ಕಳ ಶೌಚಾಲಯ ಕಟ್ಟಡ ಇನ್ನು ಪೂರ್ಣಗೊಂಡಿಲ್ಲ. ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಶೌಚಾಲಯ ಸ್ವಚ್ಛವಾಗಿಲ್ಲ. ಮಕ್ಕಳ ಆರೋಗ್ಯ ದೃಷ್ಟಿಯಿಂದ ನೀರಿನ ವ್ಯವಸ್ಥೆ ಮಾಡುವದರೊಂದಿಗೆ ಕಟ್ಟಡದ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕಾದ ಆವಶ್ಯಕತೆ ಇದೆ. ಪ್ರೌಢಶಾಲೆಯ ಇನ್ನೊಂದು ಕಟ್ಟಡದ ಕಾಮಗಾರಿಯನ್ನು ಗುತ್ತಿಗೆದಾರರು ಪೂರ್ಣಗೊಳಿಸದೆ ಇದ್ದರಿಂದ ಮುಖ್ಯಾಧ್ಯಾಪಕರಿಗೆ ಹಸ್ತಾಂತರಗೊಂಡಿಲ್ಲ. ಇದರಿಂದಾಗಿ ಬಿಸಿಯೂಟದ ತಾತ್ಕಾಲಿಕ ಸಮಸ್ಯೆ ಪರಿಹಾರಕ್ಕೆ ಅಡಚಣೆ ಉಂಟಾಗಿದೆ ಎನ್ನಲಾಗಿದ್ದು, ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳಬೇಕಾಗಿದೆ.
ಮುತುವರ್ಜಿ ವಹಿಸುತ್ತಿಲ್ಲ: ಈ ಮಧ್ಯೆ ಅಣಶಿ ಪ್ರೌಢಶಾಲೆ ಹಲವು ಅವ್ಯವಸ್ಥೆ ನಡುವೆ ಮಕ್ಕಳ ಶಿಕ್ಷಣಕ್ಕೇನು ಕೊರತೆಯಾಗದಂತೆ ಅಲ್ಲಿನ ಶಿಕ್ಷಕರು ಶ್ರಮವಹಿಸುತ್ತಿರುವುದು ಮಾತ್ರ ಶ್ಲಾಘನೀಯ. ಪ್ರೌಢಶಾಲೆ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಸ್ಪಂದಿಸುವಲ್ಲಿ ಸ್ಥಳೀಯ ಆಡಳಿತ ಮಂಡಳಿ, ಜನಪ್ರತಿನಿಧಿಗಳು ಮುತುವರ್ಜಿ ವಹಿಸದೇ ಇರುವುದು ಇಲ್ಲಿನ ಮಕ್ಕಳ ದುರದೃಷ್ಟ ಎನ್ನುವಂತಾಗಿದೆ. ಶಿಕ್ಷಣ ಇಲಾಖೆ, ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಹಾಗೂ ಆಡಳಿತ ಮಂಡಳಿಯ ನಿರ್ಲಕ್ಷ್ಯತನಕ್ಕೆ ಮಕ್ಕಳು ತುತ್ತಾಗುತ್ತಿದ್ದಾರೆ.
ಅಣಶಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಗೊಂಡ ಅವರು, ಬಿಸಿಯೂಟಕ್ಕೆ ಕಟ್ಟಡದ ಅನುದಾನ ಮಂಜೂರಿ ಆಗಿಲ್ಲದ ಕಾರಣ ಬಿಸಿಯೂಟದ ಕೊಠಡಿ ನಿರ್ಮಿಸಿಲ್ಲ. ಅನುದಾನ ಬಿಡುಗಡೆಗೊಂಡಂತೆ ಶೀಘ್ರ ಕೆಲಸ ಆರಂಭಿಸಿ ಮೇ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಕುಡಿಯುವ ನೀರಿನ ವ್ಯವಸ್ಥೆಗಾಗಿ ಪ್ರತ್ಯೇಕ ಟ್ಯಾಂಕ್ ಒಂದನ್ನು ಕಟ್ಟುವುದಾಗಿ ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

