ಮುಂದಿನ ಜನಾಂಗಕ್ಕೆ ಜನಪದ ವರ್ಗಾಯಿಸಿ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 24
ನಮ್ಮ ನಾಡು ವೈವಿಧ್ಯಮಯವಾದ ಜನಪದ ಕಲಾ ಶ್ರೀಮಂತಿಕೆಯನ್ನು ಹೊಂದಿದೆ. ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಎಂಬುದು ಸುಪ್ರಭಾತವಾಗಬೇಕು. ಆ ಮೂಲಕ ಜಾನಪದ ಕಲೆ, ಸಂಸ್ಕೃತಿ ಮುಂದಿನ ಜನಾಂಗಕ್ಕೆ ವರ್ಗಾವಣೆಯಾಗಬೇಕೆಂದು ಜಾನಪದ ವಿವಿಯ ಸಿಂಡಿಕೇಟ್ ಸದಸ್ಯ ಹಾಗೂ ಜನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು ಕರೆ ನೀಡಿದರು.
ಕರ್ನಾಟಕ ಜಾನಪದ ವಿವಿಯಲ್ಲಿ ನಡೆದ ತಿಂಗಳ ಅತಿಥಿಯೊಂದಿಗೆ ಪಟ್ಟಂಗ ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿವಿ ಸ್ಥಾಪನೆ ನಮ್ಮ ಹೆಮ್ಮೆ: ಜಾಗತೀಕರಣ ಪ್ರಭಾವದಿಂದಾಗಿ ಜನಪದ ಕಲೆ, ಸಂಸ್ಕೃತಿ ನಾಶವಾಗುತ್ತಿದೆ. ಯುವಕರು ಪಾಶ್ಚೀಮಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ತೊಡಗಿದ ಪರಿಣಾಮ ಜನಪದ ಸಂಸ್ಕೃತಿ ಅಳಿವಿನ ಅಂಚಿನಲ್ಲಿದೆ. ಈ ಸಂದರ್ಭ ಜನಪದರ ಜೀವನ ಕ್ರಮ, ಸಂಪ್ರದಾಯ, ಆಚರಣೆಗಳು, ಕಲೆ ಸಂಸ್ಕೃತಿಗಳನ್ನು ಪುನರುಜ್ಜೀವನಗೊಳಿಸುವ ಅಗತ್ಯತೆಯಿದೆ. ಅದು ನಮ್ಮ ಕರ್ತವ್ಯವಾಗಬೇಕು. ಈ ಹಿನ್ನೆಲೆಯಲ್ಲಿ ವಿಶ್ವದ ಮೊದಲ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು ಈ ನಾಡಿನ ಹೆಮ್ಮೆ ಎಂದರು.
ವಿವಿ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡಿನ ಬೇರೆ ಬೇರೆ ಪ್ರದೇಶದ ವಿವಿಧ ಕಲಾವಿದರನ್ನು ವಿಶ್ವವಿದ್ಯಾಲಯಕ್ಕೆ ಕರೆಸಿ ಗೌರವಿಸುವ ಕೆಲಸಕ್ಕೆ ವಿವಿ ಮುಂದಾಗಿದೆ. ಈ ಮೂಲಕ ಜನಪದ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ವಿವಿ ತನ್ನ ಕ್ಷೇತ್ರ ಕಾರ್ಯವನ್ನು ವಿಸ್ತರಿಸಿಕೊಳ್ಳುವ ಭಾಗವಾಗಿ ಮಲೈ ಮಹಾದೇಶ್ವರ ಬೆಟ್ಟದಲ್ಲಿ ಪ್ರಾದೇಶಿಕ ಕೇಂದ್ರ ಆರಂಭಿಸಲಿದ್ದು, ಆ ಭಾಗದ ಜನಪದ ಕಲೆ ಸಂಸ್ಕೃತಿಗೆ ಸಂಬಂಧಿಸಿ ಮಹತ್ವದ ಕೆಲಸ ಮಾಡಲಿದೆ ಎಂದರು.
ವಿಸ್ತರಣೆ ಹಾಗೂ ಸಲಹಾ ಕೇಂದ್ರದ ಉಪ ನಿರ್ದೇಶಕ ಡಾ ಎಂ.ಎನ್. ವೆಂಕಟೇಶ ಮಾತನಾಡಿ, ಜಾನಪದ ಕಲೆ ಮತ್ತು ಕಲಾವಿದರಿಗೆ ಭಾವನಾತ್ಮಕ ನೆಲೆಯಲ್ಲಿ ಸ್ಪಂದಿಸುವುದು ಮಾತ್ರ ಸಮಸ್ಯೆಗೆ ಪರಿಹಾರವಲ್ಲ. ಅವರನ್ನು ಗುರುತಿಸಿ, ಗೌರವಿಸುವ ಹೊಣೆಗಾರಿಕೆ ಬಹಳಷ್ಟಿದೆ. ಈ ನಿಟ್ಟಿನಲ್ಲಿ ಜಾನಪದ ವಿಶ್ವವಿದ್ಯಾಲಯವು ಕಲಾವಿದರನ್ನು ಕರೆಸುವ ಉದ್ದೇಶದಿಂದ ಪಟ್ಟಂಗ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.
ಮೌಲ್ಯಮಾಪನ ಕುಲಸಚಿವ ಹಾಗೂ ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕ ಪ್ರೊ. ಸ.ಚಿ. ರಮೇಶ, ವಿವಿ ಕುಲಸಚಿವ ಪ್ರೊ. ಸಿ.ಎ. ಸೋಮಶೇಖರಪ್ಪ ಉಪಸ್ಥಿತರಿದ್ದರು.
ವಿವಿಯಿಂದ ಅಪ್ಪಗೆರೆ ತಿಮ್ಮರಾಜು ಅವರನ್ನು ಸನ್ಮಾನಿಸಲಾಯಿತು. ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಎಂ.ಬಿ. ಪ್ರಾರ್ಥಿಸಿದರು. ಸಂದರ್ಶಕ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ ನಿರ್ವಹಿಸಿದರು. ಹಿರಿಯ ಸಂಶೋಧನಾಧಿಕಾರಿ ಡಾ ಕೆ. ಪ್ರೇಮಕುಮಾರ ವಂದಿಸಿದರು. ಸಿಂಡಿಕೇಟ್ ಸದಸ್ಯ ಡಾ ಪಿ.ಕೆ. ರಾಜಶೇಖರ, ವಿವಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

