ಸಾರಿಗೆ ವ್ಯವಸ್ಥಾಪಕರ ಅಮಾನತಿಗೆ ಆಗ್ರಹ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮಾ. 26
ಮೈಲಾರ ಜಾತ್ರೋತ್ಸವ ಸಂದರ್ಭದಲ್ಲಿ ಬಸ್ ಅಪಘಾತಲ್ಲಿ 4 ಜನರ ಸಾವಿಗೆ ಕಾರಣನಾಗಿ, ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ರಾಣಿಬೆನ್ನೂರು ಘಟಕದಿಂದ ಚಿಕ್ಕೋಡಿಗೆ ವರ್ಗಾವಣೆ ಪಡೆದಿರುವ ವ್ಯವಸ್ಥಾಪಕ ಪಿ. ಮಹೇಶ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಹಾಗೂ ಸಾರಿಗೆ ಸಂಸ್ಥೆಯ ರಾಜ್ಯ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಿದ್ದೇಶ್ವರ ದೇವಸ್ಥಾನದ ಬಳಿ ರೈತ ಸಂಘದ ನೂರಾರು ಕಾರ್ಯಕರ್ತರು, ಪಿ.ಮಹೇಶ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಂದ್ರಗೌಡ ಪಾಟೀಲ ಮಾತನಾಡಿ, ಪಿ.ಮಹೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ರಾಣಿಬೆನ್ನೂರು ಡಿಪೋ ವ್ಯವಸ್ಥಾಪಕರಾಗಿದ್ದ ಸಮಯದಲ್ಲಿ, ಸೇವೆಗೆ ಯೋಗ್ಯವಲ್ಲದ ಬಸ್ಸುಗಳನ್ನು ಮೈಲಾರ ಮತ್ತು ದೇವರಗುಡ್ಡದ ಜಾತ್ರಾ ಪ್ರಯಾಣಿಕರ ಸೇವೆಗೆ ನಿಯೋಜಿಸಿದ್ದರು. ಅಲ್ಲದೇ ಚಾಲಕರಿಗೆ ಹಾಗೂ ನಿರ್ವಾಹಕರಿಗೆ ತಾಕೀತು ಮಾಡಿದ್ದರು. ಫೆಬ್ರವರಿ 25ರಂದು ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ರಾಣಿಬೆನ್ನೂರು ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತು ನಿಲ್ದಾಣದಿಂದ ಹೊರಗೆ ಬಂದ್ ಬಸ್ 5 ಮೀಟರ್ ಅಂತರದಲ್ಲೇ ಬ್ರೇಕ್ ಫೇಲಾಗಿ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ಬಿಎಸ್ಎನ್ಎಲ್ ನೌಕರ ರಾಜು ಸೊಪ್ಪಿನ ಹಾಗೂ ಆತನ ಹೆಂಡತಿ ಗೀತಾ ಎಂಬುವವರು ಸಾವನ್ನಪ್ಪಿದ್ದಾರೆ. ಫೆಬ್ರವರಿ 27ರಂದು ಗುತ್ತಲ ಗ್ರಾಮದ ಬಸ್ ನಿಲ್ಧಾಣದ ಹತ್ತಿರ ಬ್ರೇಕ್ ಫೇಲಾಗಿ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದು, ಟಾಟಾ ಏಸ್ನಲ್ಲಿದ್ದ ತಂದೆ-ಮಗನ ಸಾವಿಗೆ ಕಾರಣವಾಗಿದೆ. ಕೂಡಲೇ ಅವರನ್ನು ರಾಜ್ಯಪಾಲರು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ತಹಸೀಲ್ದಾರ್ ಶಿವಕುಮಾರ ಮಾತನಾಡಿ, ಮುಂದಿನ ಕ್ರಮಕ್ಕಾಗಿ ರಾಜ್ಯಪಾಲರಿಗೆ ಮನವಿ ಕಳುಹಿಸುವುದಾಗಿ ತಿಳಿಸಿದರು. ತಾಲೂಕು ರೈತ ಸಂಘದ ಮುಖಂಡ ಹನುಮಂತಪ್ಪ ತರಗನಹಳ್ಳಿ, ಹರಿಹರಗೌಡ ಪಾಟೀಲ, ಮಹೇಶ ಕೆಂಚರಡ್ಡಿ, ವಿರೇಶ ಜಡಿಯಣ್ಣನವರ, ಶಿವಪ್ಪ ಜಾನಪ್ಪನವರ, ಬಸಪ್ಪ ಮುಳಗುಂದ, ಬಸಪ್ಪ ದೇವರಮನಿ, ಅಶೋಕರಡ್ಡಿ ಭಾವಿಕಟ್ಟಿ, ಶಂಕರಪ್ಪ ದೊಡ್ಡನಾಗಳ್ಳಿ, ನೀಲಕಂಠಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

