ಹ್ಯಾಟ್ರಿಕ್ ಸಾಧನೆಗೆ ನಾಯಕರ ಸಿದ್ಧತೆ
ಹಾವೇರಿ: ಹಾವೇರಿ ಜಿಲ್ಲೆ ಒಟ್ಟು 7 ತಾಲೂಕುಗಳನ್ನು ಹೊಂದಿದ್ದರೂ 6 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಶಿಗ್ಗಾಂವಿ ಹಾಗೂ ಸವಣೂರು ತಾಲೂಕುಗಳನ್ನು ಸೇರಿಸಿ ಒಂದೇ ವಿಧಾನಸಭಾ ಕ್ಷೇತ್ರವಾಗಿದೆ. ಇದನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಎಲ್ಲವೂ ಪ್ರತ್ಯೇಕ ವಿಧಾಸಭಾ ಕ್ಷೇತ್ರಗಳಾಗಿವೆ. ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಈಗಾಗಲೇ ಜಿಲ್ಲೆಯಲ್ಲಿ ನಾಮಪತ್ರ ಸಲ್ಲಿಕೆಗೂ ಮುನ್ನವೇ ಪ್ರಚಾರ ಕಾರ್ಯ ಆರಂಭವಾಗಿದೆ.
ಪ್ರಸ್ತುತ ಹಾವೇರಿ ಜಿಲ್ಲೆಯಲ್ಲೇ ಕೆಜೆಪಿ ಪಕ್ಷ ಸ್ಥಾಪನೆಯಾಗಿದೆ. ಇದರ ಬೆನ್ನಲ್ಲೇ 6 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಇದರಲ್ಲಿ ಹಾನಗಲ್ಲಿನಿಂದ ಮಾಜಿ ಸಚಿವ ಸಿ.ಎಂ. ಉದಾಸಿ, ರಾಣಿಬೆನ್ನೂರಿಂದ ಜಿ. ಶಿವಣ್ಣ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಕೂಡಾ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಹಿರೇಕೆರೂರಿನಿಂದ ಬಿ.ಸಿ. ಪಾಟೀಲ ಅದೃಷ್ಯ ಪರೀಕ್ಷೆಗಿಳಿಯಲಿದ್ದಾರೆ. ಬಹುತೇಕ ಇವರ ಹೆಸರು ಘೋಷಣೆಯಾಗಿದ್ದು, ಅಭ್ಯರ್ಥಿಗಳು ತೆರೆಮರೆಯ ಪ್ರಚಾರವನ್ನು ಆರಂಭಿಸಿದ್ದಾರೆ.
ಸಿ.ಎಂ. ಉದಾಸಿ: ಮೂಲತಃ ಜನತಾ ಪರಿವಾರದಿಂದ ಬಂದ ಉದಾಸಿ 1983ರಿಂದ ಹಾನಗಲ್ಲ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಪ್ರಸ್ತುತ ಕೆಜೆಪಿಯಿಂದ ಸ್ಪರ್ಧಿಸುತ್ತಿದ್ದು, 7 ಬಾರಿ ಸ್ಪರ್ಧಿಸಿ 5 ಬಾರಿ ಜಯ ಸಾಧಿಸಿದ್ದಾರೆ. ಈಗ 8ನೇ ಬಾರಿಗೆ ಕೆಜೆಪಿಯಿಂದ ಸ್ಪರ್ಧಿಸುತ್ತಿದ್ದು, ಕಳೆದ 2 ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ವಿಜೇತರಾಗಿ ಹ್ಯಾಟ್ರಿಕ್ ಸಾಧನೆಗೆ ಮುಖ ಮಾಡಿದ್ದಾರೆ. ಪಕ್ಷೇತರರಾಗಿ ರಾಜಕಾರಣ ಆರಂಭಿಸಿದ ಉದಾಸಿ ಕಾಂಗ್ರೆಸ್ ಹೊರತುಪಡಿಸಿ ಉಳಿದೆಲ್ಲ ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡವರು.
ಬಿ.ಸಿ. ಪಾಟೀಲ: ಪೊಲೀಸ್ ಅಧಿಕಾರಿಯಾಗಿ ಹವ್ಯಾಸಕ್ಕಾಗಿ ಚಲನಚಿತ್ರದಲ್ಲಿ ನಟಿಸಿ, ಬಳಿಕ ರಾಜಕಾರಣದಲ್ಲಿ ಪ್ರಬಲವಾಗಿ ಗುರುತಿಸಿಕೊಂಡ ಬಿ.ಸಿ. ಪಾಟೀಲ ಮೊದಲ ಬಾರಿಗೆ ಜೆಡಿಎಸ್ನಿಂದ ಶಾಸಕರಾಗಿ ಆಯ್ಕೆಯಾಗುವ ಮೂಲಕ ಪೂರ್ಣ ಪ್ರಮಾಣದ ರಾಜಕಾರಣದಲ್ಲಿ ತೊಡಗಿಸಿಕೊಂಡವರು. ಅಲ್ಲದೇ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಸಂದರ್ಭದಲ್ಲಿ ನೂರಾರು ಕೋಟಿ ಅನುದಾನವನ್ನು ತಾಲೂಕಿಗೆ ತಂದವರು. ನಂತರದ ದಿನಗಳಲ್ಲಿ ಕಾಂಗ್ರೆಸ್ ಸೇರಿಕೊಂಡು 2008ರಲ್ಲಿ ಚುನಾವಣೆ ಎದುರಿಸಿ ವಿಜೇತರಾದರು. ಪ್ರಸಕ್ತ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತವಾಗಿದ್ದು, ಪಾಟೀಲ್ ಕೂಡಾ ಹ್ಯಾಟ್ರಿಕ್ ಸಾಧನೆಯತ್ತ ಮುಖ ಮಾಡಿದ್ದು, ಈಗಾಗಲೇ ತೆರೆಮರೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಜಿ. ಶಿವಣ್ಣ: ರಾಣಿಬೆನ್ನೂರಿನ ಸ್ಥಳೀಯ ಸಂಘ-ಸಂಸ್ಥೆಗಳ ಮೂಲಕ ಸಾರ್ವಜನಿಕ ಜೀವನಕ್ಕೆ ಹೆಜ್ಜೆ ಇಟ್ಟ ಜಿ. ಶಿವಣ್ಣ ಮೊದಲ ಬಾರಿಗೆ ಜೆಡಿಯುದಿಂದ ಸ್ಪರ್ಧಿಸಿ ಅಧಿಕಾರ ಪಡೆದವರು. ನಂತರದ ದಿನಗಳಲ್ಲಿ ಬಿಜೆಪಿ ಸೇರಿ ಮತ್ತು ಜನಬೆಂಬಲ ಪಡೆದು ಪ್ರಸ್ತುತ ಕೆಜೆಪಿಯಿಂದ ಮತ್ತೆ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ತಯಾರಿ ನಡೆಸಿದ್ದು, ಇವರ ಆಸಕ್ತಿಯಂತೆ ಕೆಜೆಪಿ ಟಿಕೆಟ್ ಸಿಕ್ಕಿದ್ದು, ಜಿ. ಶಿವಣ್ಣ ಸಹ ಹ್ಯಾಟ್ರಿಕ್ ಸಾಧನೆಯತ್ತ ಮುಖ ಮಾಡಿದ್ದಾರೆ.
ಒಟ್ಟಿನಲ್ಲಿ ವಿವಿಧ ಪಕ್ಷಗಳಿಂದ ಚುನಾಯಿತರಾಗಿ ಹ್ಯಾಟ್ರಿಕ್ ಸಾಧನೆಯತ್ತ ಮುಖ ಮಾಡಿ ನಿಂತವರ ನಿರೀಕ್ಷೆ ಏನು? ಮತದಾರನ ಚಿಂತನೆ ಹಾಗೂ ಹಿಂದಿನ ಸಾಧನೆಗಳಿಗೆ ಮತದಾರ ಪ್ರಭುವಿನ ಸಂದೇಶ ಏ. 11ರ ನಂತರ ತಿಳಿದು ಬರಲಿದೆ.
- ಕಿರಣ ಮಾಸಣಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

