ಹಾವೇರಿ

ವಿವಿಧೆಡೆ ಸಂಭ್ರಮದ ಹೋಳಿ

Published On :

ಹಾವೇರಿ: ಎದುರಿಗೆ ಮುಗುಳ್ನಗೆಯಿಂದ ಬಂದ ಸ್ನೇಹಿತನಾಗಿ ಆತ್ಮೀಯವಾಗಿ ಬಣ್ಣ ಬಳಿಯುವ, ದೂರ ಸರಿದು ಹೋಗಲೆತ್ನಿಸುವವರಿಗೆ ಬೆಂಬತ್ತಿ ಬಣ್ಣ ಬಳಿದು ಸಂಭ್ರಮಿಸುವ ರಂಗು ರಂಗಿನ ಹೋಳಿ ಇದು ಹಾವೇರಿ ನಗರ, ರಾಣಿಬೆನ್ನೂರು ಹಾಗೂ ಕೆಲ ಗ್ರಾಮೀಣ ಪ್ರದೇಶಗಳು ಸಾಕ್ಷಿಯಾದವು.
ಸಂಭ್ರಮಿಸಿದ ಯುವ ತಂಡ: ಪರಸ್ಪರ ಪ್ರೀತಿ, ಭಾವೈಕ್ಯ, ಮಾನವೀಯ ಸಂಬಂಧಗಳಿಗೆ ಕಳೆಗಟ್ಟುವ ನಿಟ್ಟಿನಲ್ಲಿ ಪ್ರಸ್ತುತ ಹೋಳಿ ಹಬ್ಬ ಮೇರು ಮಟ್ಟದ ಬೆಸುಗೆಗೆ ಸಾಕ್ಷಿಯಾಗುತ್ತಿದ್ದು, ಬಣ್ಣದ ಎರಚಾಟ, ಸೋಗಿನ ಬಂಡಿಗಳ ಸಂಭ್ರಮದ ಮೆರವಣಿಗೆ, ಕಾಮನ ಮೂರ್ತಿ ದಹಿಸಿ ಹೋಳಿ ಹಬ್ಬವನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.
ಮೈ-ಮನ ಪುಳಕ: ನಗರದಲ್ಲಿ ರಂಗಿನಾಟ ಅಕ್ಷರಶಃ ಬಣ್ಣದ ಹಬ್ಬವಾಗಿ ಶಾಂತಿ, ಸೌಹಾರ್ದತೆ ಪ್ರತೀಕವಾಗಿ ಎಲ್ಲಿಯೂ ಗದ್ದಲ-ಗೊಂದಲಗಳಿಗೆ ಅವಕಾಶವಿಲ್ಲದಂತೆ ಆಚರಿಸಲಾಯಿತು. ಹಲಗೆ, ತಮಟೆಗಳ ಗುಂಗು ಪ್ರತಿ ಓಣಿಯಲ್ಲಿ ರಿಂಗಣಿಸಿ ಬಣ್ಣದ ಬೆಡಗಿನ ಆಟಕ್ಕೆ ಉನ್ಮಾದ ಹೆಚ್ಚಿಸಿತು. ಪರಸ್ಪರ ಬಣ್ಣ ಬಳಿದು, ಎರಚಿ, ಮೈ ಮನಗಳಿಗೆ ಸಂತಸ ತುಂಬಿ ಹೊಸ ಬದುಕಿನ ಭರವಸೆ ಹೆಚ್ಚಿಸಿತು. ಚಾವಡಿಯಲ್ಲಿ ಪ್ರತಿಷ್ಠಾಪಿಸಿದ ರತಿ- ಕಾಮರ ಮೂರ್ತಿ ಹಾಗೂ ನಗರದ ವಿವಿಧ ಬಡಾವಣೆಗಳಲ್ಲಿ ಐದು ದಿನಗಳ ಕಾಲ ಪ್ರತಿಷ್ಠಾಪಿಸಿದ್ದ ರತಿ-ಕಾಮರ ಮೂರ್ತಿಗಳನ್ನು ದಹಿಸಲಾಯಿತು. ರೈಲು ನಿಲ್ದಾಣದ ಬಳಿ ಮೇಲ್ಸೇತುವೆ ಕೆಳಗೆ ನಿಲ್ಲಿಸಿದ ಸುಮಾರು 20 ಅಡಿ ಎತ್ತರದ ಕಾಮನನ್ನು ಪ್ರತಿಷ್ಠಾಪಿಸಿದ್ದುದು ಗಮನ ಸೆಳೆಯಿತು.
ಆಕರ್ಷಕ ಸೋಗಿನ ಬಂಡಿ: ಕೆಲವರು ಸೋಗಿನ ಬಂಡಿಯಲ್ಲಿ ಸಂಚರಿಸಿ ನೋಡುಗರ ಗಮನ ಸೆಳೆದರೆ ಮತ್ತೆ ಕೆಲ ಯುವಕರು ಹೆಂಗಳೆಯರ ಉಡುಪು, ವೈಯಾರಗಳ ಮೂಲಕ ಇತರರನ್ನು ರಂಜಿಸಿದರು. ಇಲ್ಲಿನ ಹಳವೂರು ಅಥವಾ ದೇಸಾಯಿಗಲ್ಲಿಯಿಂದ ಆರಂಭವಾದ ಸರ್ಕಾರಿ ಕಾಮನ ಬಂಡಿಯ ಪಯಣ, ಸೋಗಿನ ಬಂಡಿಯೊಂದಿಗೆ ಗೌಡರ ಓಣಿ, ಕಲ್ಲು ಮಂಟಪ ರಸ್ತೆ, ದೊಡ್ಡ ಬಸವೇಶ್ವರ ದೇವಸ್ಥಾನ, ಬಸ್ತಿ ಓಣಿ, ಗಾಂಧಿ ರಸ್ತೆ, ಗೌಳಿ ಗಲ್ಲಿ, ಯಾಲಕ್ಕಿ ಓಣಿ, ಕುಂಬಾರರ ಓಣಿ, ಪುರದ ಓಣಿ, ಹತ್ತರಗೇರಿ ಮೂಲಕ ದ್ಯಾಮವ್ವ ಗುಡಿಗೆ ತಲುಪಿ ಮೆರವಣಿಗೆ ಸಮಾರೋಪಗೊಂಡಿತು. ದಿನಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ ಬಿಸಿಲಿಗೆ ಬಸವಳಿದ ಜನತೆ ಅಲ್ಲಲ್ಲಿ ತಂಪುಪಾನೀಯ, ಮರಗಳ ನೆರಳು, ಇಲ್ಲವೇ ಅಲ್ಲಲ್ಲಿ ಇದ್ದ ಹಣ್ಣಿನಂಗಡಿ, ಎಳಗಾಯಿಗಳಿಗೆ ಮೊರೆ ಹೋದರು. ರಂಗಿನ ಹೋಳಿ ಹಬ್ಬಕ್ಕೆ ಪೊಲೀಸ್ ಇಲಾಖೆ ಭದ್ರತೆ ಒದಗಿಸಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.