ಮತದಾನ ಹೇಗಿರುತ್ತೆ?
ಹಾವೇರಿ: ವಿಧಾನಸಭೆ ಚುನಾವಣೆ ಮೇ 5ರಂದು ರಾಜ್ಯಾದ್ಯಂತ ಒಂದೇ ಹಂತದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 7ರಿಂದ ಸಂಜೆ 5ರ ತನಕ ಮತದಾನ ಮಾಡಬಹುದು. ಸರದಿಯಲ್ಲಿ ನಿಂತು ಮತ ಚಲಾಯಿಸಿ, ಮಹಿಳೆಯರು, ಪುರುಷರಿಗೆ, ವಿಕಲಾಂಗರಿಗೆ ಪ್ರತ್ಯೇಕ ಸಾಲುಗಳಿವೆ. ಅಂಗವಿಕಲರು, ಹಸುಳೆಯೊಂದಿಗೆ ಬರುವ ತಾಯಂದಿರಿಗೆ ಆದ್ಯತೆ ನೀಡಲಾಗುತ್ತದೆ. ಮತಗಟ್ಟೆಯೊಳಗೆ ಪ್ರವೇಶಿಸುವಾಗ ಮೊದಲು ಪೋಲಿಂಗ್ ಆಫೀಸರ್ ಬಳಿ ಹೋಗುತ್ತೀರಿ. ಅವರು ಮತದಾರರ ಪಟ್ಟಿ ಹೊಂದಿರುತ್ತಾರೆ. ಮತದಾರರನ್ನು ಗುರುತಿಸುವ ಜವಾಬ್ದಾರಿ ಅವರದೇ. ನೀವು ಅವರಿಗೆ ನಿಮ್ಮ ಮತಚೀಟಿ, ಗುರುತಿನ ಚೀಟಿ ತೋರಿಸಬೇಕು. ಅಧಿಕಾರಿ ನಿಮ್ಮ ಹೆಸರು ಹಾಗೂ ಕ್ರಮಸಂಖ್ಯೆ ಓದಿ ಹೇಳುತ್ತಾರೆ. ಮತಗಟ್ಟೆ ಏಜೆಂಟರು ನಿಮ್ಮ ಉಪಸ್ಥಿತಿಯನ್ನು ಗುರುತಿಸುತ್ತಾರೆ. ಅಲ್ಲಿಂದ ನೀವು ಸೆಕೆಂಡ್ ಪೋಲಿಂಗ್ ಆಫೀಸರ್ ಬಳಿ ತೆರಳುತ್ತೀರಿ. ಅವರು ನಿಮ್ಮ ಎಡಗೈ ಉಂಗುರ ಬೆರಳಿಗೆ ಅಳಿಸಲಾಗದ ಶಾಯಿ ಹಚ್ಚುತ್ತಾರೆ. ನಿಮ್ಮ ಕ್ರಮಸಂಖ್ಯೆಯನ್ನು ಮತದಾರರ ವಹಿ (ರಜಿಸ್ಟರ್)ಯಲ್ಲಿ ನಮೂದಿಸಿದ ಅನಂತರ ನಿಗದಿತ ಸ್ಥಳದಲ್ಲಿ ಸಹಿ ಮಾಡಬೇಕು. ಸಹಿ ಮಾಡಲು ಬಾರದಿದ್ದರೆ ಹೆಬ್ಬೆಟ್ಟು ಒತ್ತಬೇಕು. ಅವರು ನಿಮಗೆ ಸಹಿ ಮಾಡಿದ ಮತದಾರರ ಚೀಟಿ ನೀಡುತ್ತಾರೆ. ಅದನ್ನು ನೀವು ಮೂರನೇ ಪೋಲಿಂಗ್ ಆಫೀಸರ್ ಬಳಿ ನೀಡಬೇಕು. ಅವರು ಮತಯಂತ್ರದ ನಿಯಂತ್ರಣ ಘಟಕದಲ್ಲಿ ಬ್ಯಾಲೆಟ್ ಎಂಬ ಗುಂಡಿಯನ್ನು ಒತ್ತಿ, ಮತಯಂತ್ರದ ವೋಟಿಂಗ್ ವಿಭಾಗದಲ್ಲಿ ನಿಮ್ಮ ಮತವನ್ನು ದಾಖಲಿಸುವ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಮತದಾರರ ರಜಿಸ್ಟರಿನಲ್ಲಿ ನಮೂದಿಸಿದ ಕ್ರಮದಲ್ಲಿಯೇ ಮತದಾರರು ಮತಯಂತ್ರದ ಬಳಿಗೆ ತೆರಳಬೇಕು.
ಮತದಾನದ ವಿಧಾನ: ಮತಯಂತ್ರದಲ್ಲಿ ನೀವು ಮತದಾನ ಮಾಡಲು ಇಚ್ಛಿಸುವ ಅಭ್ಯರ್ಥಿಯ ಹೆಸರು, ಕ್ರಮಸಂಖ್ಯೆ, ಚಿಹ್ನೆಯ ಎದುರಿಗಿರುವ ನೀಲಿ ಗುಂಡಿಯನ್ನು ಒಂದು ಬಾರಿ ಒತ್ತಬೇಕು. ಅದರ ಎದುರಿಗೆ ಕೆಂಪು ದೀಪ ಉರಿದು, ಬೀಪ್ ಸದ್ದು ಕೇಳಿಸುತ್ತದೆ. ನಿಮ್ಮ ಮತ ದಾಖಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ನಿಯಂತ್ರಣ ಘಟಕದಲ್ಲಿ ಬ್ಯುಸಿ ಎಂದು ಸೂಚಿಸುವ ದೀಪವೂ ಆರಿಹೋಗುತ್ತದೆ. ಇಲ್ಲಿಗೆ ನೀವು ಮತದಾನ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಸಮುದಾಯ ಕಳಕಳಿಯ ಅಭ್ಯರ್ಥಿ ಬೆಂಬಲಿಸಿ
ಹಾನಗಲ್ಲ: ತಾಲೂಕಿನ ಕುಂಬಾರ ಸಮುದಾಯ ಬಾಂಧವರು ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯದ ಕುರಿತು ಕಳಕಳಿ ವ್ಯಕ್ತಪಡಿಸಿದ ಅಭ್ಯರ್ಥಿ ಬೆಂಬಲಿಸಬೇಕೆಂದು ತಾಲೂಕಾಧ್ಯಕ್ಷ ಮಹೇಶ ಮತ್ತಿಹಳ್ಳಿ ಕರೆ ನೀಡಿದ್ದಾರೆ. ತಾಲೂಕಿನಲ್ಲಿ ಕುಂಬಾರ ಸಮುದಾಯದ 16 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಸ್ಪಂದಿಸಿದ ಹಾಗೂ ಅಭಿವೃದ್ಧಿಪರ ಮನೋಭಾವ ಹೊಂದಿರುವ ಕಳಂಕ ರಹಿತ ಅಭ್ಯರ್ಥಿಗೆ ಮೇ 5ರಂದು ನಡೆಯುವ ಚುನಾವಣೆಯಲ್ಲಿ ಮತ ನೀಡಬೇಕು ಎಂದರು.
ಸಿಡಿಲು: ತೆಂಗಿನಮರಕ್ಕೆ ಹಾನಿ
ಬ್ಯಾಡಗಿ: ಸಿಡಿಲು ಬಡಿದು ಬೆಂಕಿ ಹತ್ತಿದ ಘಟನೆ ಇತ್ತೀಚೆಗೆ ಪಟ್ಟಣದ ವೈಶ್ಯರಗಲ್ಲಿಯಲ್ಲಿ ಜರುಗಿದ್ದು, ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಪಟ್ಟಣದ ಆಣೂರಶೆಟ್ಟರ್ ಮನೆ ಹಿತ್ತಲಿನಲ್ಲಿರುವ ತೆಂಗಿನಮರಕ್ಕೆ ಸಿಡಿಲು ಬಡಿದಿದ್ದು, ಮರದ ಮೇಲ್ಭಾಗಕ್ಕೆ ಬೆಂಕಿ ಕಾಣಿಸಿ ಸ್ವಲ್ಪ ಪ್ರಮಾಣದಲ್ಲಿ ಸುಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

