ಖಾದ್ರಿ, ಬೆಂಬಲಿಗರಿಂದ ಬೊಮ್ಮಾಯಿ ಮೇಲೆ ಹಲ್ಲೆ ಯತ್ನ
ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 4
ಚುನಾವಣಾ ಪ್ರಚಾರ ಕಾರ್ಯ ಮುಗಿಸಿ ಮರಳುತ್ತಿದ್ದ ಬಿಜೆಪಿ ಅಭ್ಯರ್ಥಿಯಾಗಿರುವ ಸಚಿವ ಬಸವರಾಜ ಬೊಮ್ಮಾಯಿ ಅವರ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಅಜ್ಜಂಪೀರ ಖಾದ್ರಿ ಹಾಗೂ ಅವರ ಬೆಂಬಲಿಗರು ಹಲ್ಲೆ ಯತ್ನಿಸಿದಲ್ಲದೆ, ಜೀವ ಬೆದರಿಕೆ ಹಾಕಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಬಹಿರಂಗ ಪ್ರಚಾರ ಕಾರ್ಯದ ಕೊನೆ ದಿನವಾಗಿದ್ದ ಶುಕ್ರವಾರದಂದು ಬೊಮ್ಮಾಯಿ ಪರ ಮತಯಾಚಿಸಲು ಚಿತ್ರನಟಿ ತಾರಾ ಕ್ಷೇತ್ರಕ್ಕೆ ಆಗಮಿಸಿದ್ದರು. ಸಂಜೆಯವರೆಗೂ ಕ್ಷೇತ್ರದ ವಿವಿಧ ಕಡೆಗಳಲ್ಲಿ ಪ್ರಚಾರ ಕಾರ್ಯ ಮುಗಿಸಿ ಹುಬ್ಬಳ್ಳಿಯ ಕಡೆಗೆ ಬರುತ್ತಿದ್ದ ಬೊಮ್ಮಾಯಿ ಅವರನ್ನು ಖಾದ್ರಿ ಹಾಗೂ ಅವರ ಬೆಂಬಲಿಗರು ತಾಲೂಕಿನ ಹಿರೇಬೆಂಡಿಗೇರಿಯಲ್ಲಿ ತಡೆದು ಏಕವಚನದಲ್ಲಿ ನಿಂದಿಸಿದ್ದಾರಲ್ಲದೆ ತಮಗೂ ಜೀವ ಬೆದರಿಕೆಯೊಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಬಿಜೆಪಿ ಕಾರ್ಯಕರ್ತ ಶಿವಾನಂದ ಮ್ಯಾಗೇರಿ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ: ಪ್ರಚಾರ ಕಾರ್ಯ ಮುಗಿಸಿ ಹಿರೇಬೆಂಡಿಗೇರಿ ಗ್ರಾಮದಲ್ಲಿರುವ ಕಾರ್ಯಕರ್ತ ಶಿವಾನಂದ ಮ್ಯಾಗೇರಿ ಅವರೊಂದಿಗೆ ಮಾತುಕತೆ ನಡೆಸಲು ಬೊಮ್ಮಾಯಿ ಕಾರ್ ನಿಲ್ಲಿಸುತ್ತಿದಂತೆಯೇ, ಅಲ್ಲಿ ಪ್ರತ್ಯಕ್ಷರಾದ ಖಾದ್ರಿ ಹಾಗೂ ಅವರ ಬೆಂಬಲಿಗರು ಸಚಿವರ ವಾಹನ ತಡೆದು ಏಕವಚನದಲ್ಲಿ ನಿಂದಿಸಲಾರಂಭಿಸಿದ್ದರು. ಅಲ್ಲದೆ, ಒಬ್ಬ ಸಚಿವರಾಗಿ ಹಣ ಹಂಚಲು ಬಂದಿದ್ದೀರಿ ಎಂಬ ಖಾದ್ರಿ ಆರೋಪಕ್ಕೆ ಬೊಮ್ಮಾಯಿ, ತಾವು ಇಲ್ಲಿ ಹಣ ಹಂಚಲು ಬಂದಿಲ್ಲ, ಕಾರ್ಯಕರ್ತ ಮ್ಯಾಗೇರಿ ಅವರನ್ನು ಮಾತನಾಡಿಸಲು ಬಂದಿದ್ದೇವೆ. ಅನ್ಯಥಾ ಭಾವಿಸಬೇಡಿ ಎಂದು ನಯವಾಗಿಯೇ ತಿಳಿಸಿದರು. ಆದಾಗ್ಯೂ, ಇದ್ಯಾವುದಕ್ಕೂ ಶಾಂತರಾಗದ ಖಾದ್ರಿ ತಾವು ನಿಂತ ಜಾಗದಿಂದ ಎಲ್ಲಿಯೂ ಹೋಗಬಾರದೆಂದು ಸೂಚಿಸಿ ಅಕ್ರಮವಾಗಿ ತಡೆದಿದ್ದಲ್ಲದೆ, ದೂರವಾಣಿ ಕರೆ ಮಾಡಿ ಮತ್ತಷ್ಟು ಬೆಂಬಲಿಗರನ್ನು ಘಟನಾ ಸ್ಥಳಕ್ಕೆ ಬರುವಂತೆ ಆಹ್ವಾನಿಸಿದ್ದಾರೆ ಎಂದೂ ಮ್ಯಾಗೇರಿ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ತಪಾಸಣೆಗೆ ಆಕ್ಷೇಪ: ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿದ ಖಾದ್ರಿಯವರ ಬೆಂಬಲಿಗರು ಸಚಿವರ ಮೇಲೆ ಹಲ್ಲೆಗೆ ಯತ್ನಿಸಿದರಲ್ಲದೆ, ಅವರ ವಾಹನ ತಪಾಸಣೆ ಮಾಡಲು ಮುಂದಾದರು. ಇದಕ್ಕೆ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿ ಚುನಾವಣಾಧಿಕಾರಿಗಳನ್ನು ಕರೆಯಿಸಿ ತಪಾಸಣೆ ಕೈಗೊಳ್ಳುವಂತೆ ತಿಳಿ ಹೇಳಿದರು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಬಾರದು ಹಾಗೂ ಶಾಂತಿಯುತ ಮತದಾನ ನಡೆಯಬೇಕು ಎಂದು ಖಾದ್ರಿ ಹಾಗೂ ಬೆಂಬಲಿಗರಿಗೆ ಬೊಮ್ಮಾಯಿ ತಿಳಿ ಹೇಳಿದರೂ ಸ್ಪಂದಿಸಿಲ್ಲ. ಬೊಮ್ಮಾಯಿ ಅವರೊಂದಿಗೆ ಮಾತನಾಡುತ್ತಿದ್ದ ತಮಗೂ ಚುನಾವಣೆ ನಂತರ ಜೀವ ಸಹಿತ ಬಿಡುವುದಿಲ್ಲ ಎಂದು ಖಾದ್ರಿ ಬೆದರಿಕೆ ಹಾಕಿದ್ದಾರೆ ಎಂದೂ ಶಿವಾನಂದ ಮ್ಯಾಗೇರಿ ತಿಳಿಸಿದ್ದಾರೆ. ಮಾತಿನುದ್ದಕ್ಕೂ ಬೊಮ್ಮಾಯಿ ಅವರನ್ನು ಏಕವಚನದಲ್ಲಿ ನಿಂದಿಸಿದ ಖಾದ್ರಿ, ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು ಎಂದೂ ಧಮಕಿ ಹಾಕಿದ್ದಾರೆ ಎಂದು ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ನಮೂದಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತಡಸ ಠಾಣೆ ಪೊಲೀಸರು ಅಕ್ರಮ ಬಂಧನಕಾರಿ, ಜೀವ ಬೆದರಿಕೆ ಹಾಗೂ ಹಲ್ಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬಂಧನಕ್ಕೆ ಒತ್ತಾಯ: ಬೊಮ್ಮಾಯಿ ಅವರ ಮೇಲೆ ಖಾದ್ರಿ ಹಾಗೂ ಬೆಂಬಲಿಗರು ಹಲ್ಲೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದಂತೆಯೇ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಶಿಗ್ಗಾಂವಿಯಲ್ಲಿರುವ ಸಚಿವರ ಮನೆ ಎದುರು ಜಮಾಯಿಸಿ ಘಟನೆಯನ್ನು ಬಲವಾಗಿ ಖಂಡಿಸಿದರು. ಅಲ್ಲದೆ, ಗೂಂಡಾವರ್ತನೆ ಪ್ರದರ್ಶಿಸಿದ ಖಾದ್ರಿ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

