ಹಾವೇರಿ

ಕೆಜೆಪಿ, ಕಾಂಗ್ರೆಸ್ ಲೆಕ್ಕಾಚಾರದಲ್ಲಿ ಮತದಾರರು

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮೇ 7
ಚುನಾವಣೆ ಮತದಾನದ ಪ್ರಕ್ರಿಯೆಗಳು ಮುಗಿದು ಫಲಿತಾಂಶದತ್ತ ಮುಖ ಮಾಡಿರುವ ಅಭ್ಯರ್ಥಿಗಳಿಗೂ ಮಿಗಿಲಾಗಿ ಹಾನಗಲ್ಲ ತಾಲೂಕಿನ ಮತದಾರರಿಂದ ಫಲಿತಾಂಶ ಲೆಕ್ಕಾಚಾರಗಳು ನಡೆದಿದ್ದು, ಕೆಜೆಪಿ ಅಥವಾ ಕಾಂಗ್ರೆಸ್ಸಿನ ಗೆಲವು ಎಂಬ ಮಾತು ಕೇಳಿ ಬರುತ್ತಿದ್ದು, ಶಾಂತ, ಸಂಯಮದ ನಿರೀಕ್ಷೆಗೆ ಮೊರೆ ಹೋಗಿದ್ದಾರೆ.
ನಾಯಕನ ನಿರೀಕ್ಷೆಗಾಗಿ: ಇಡೀ ತಾಲೂಕಿನಲ್ಲಿ ಮಳೆ ಬಂದು ನಿಂತಂತಹ ವಾತಾವರಣ ಭಾಸವಾಗುತ್ತಿದೆ. ಗುಟ್ಟು ಬಿಟ್ಟು ಕೊಡದ ಮತದಾರ ಇನ್ನೂ ತನ್ನ ಪ್ರೀತಿಗೆ ಪಾತ್ರವಾದ ಪಕ್ಷದ ಅಭ್ಯರ್ಥಿಯದೇ ಗೆಲವು ಎಂಬ ನಿರೀಕ್ಷೆಯಲ್ಲಿದ್ದಾನೆ. ಈ ಬಾರಿ ಇಡೀ ತಾಲೂಕಿನಲ್ಲಿ ಒಂದು ಪುಟ್ಟ ಗದ್ದಲವೂ ಇಲ್ಲದೆ ಮತದಾನ ನಡೆಯುವ ಮೂಲಕ ಮತದಾರರು ಹಾಗೂ ಪಕ್ಷ-ಪಕ್ಷಗಳ ಅಭಿಮಾನಿಗಳು, ಕಾರ್ಯಕರ್ತರು ಸಂಯಮ ಮರೆದಿದ್ದಾರೆ.
ಶಾಂತಿ ಕಾಪಾಡಿದ ಮತದಾರ: ಈ ಬಾರಿ ಚುನಾವಣೆ ಆರಂಭವಾದಾಗಿನಿಂದಲೂ ಎಲ್ಲಿಯೂ ಅಸಭ್ಯ ವರ್ತನೆ, ಚೀರಾಟ, ಕೂಗಾಟಗಳಾಗಲಿ, ಅನ್ಯ ಪಕ್ಷಗಳ ವಿರುದ್ಧ ಅಸಭ್ಯ ವರ್ತನೆಯಾಗಲಿ ಎಲ್ಲೂ ಕಾಣಲಿಲ್ಲ. ಎಲ್ಲ ಪಕ್ಷಗಳ ಅಭ್ಯರ್ಥಿಗಳ ಪರ ಕಾರ್ಯಕರ್ತರು ಒಟ್ಟಾಗಿ ಕುಳಿತು ನಗು ನಗುತ್ತ, ಯಾವ ಪಕ್ಷಕ್ಕೆ ಹೆಚ್ಚು, ಕಡಿಮೆ ಮತ ಎಂಬ ಚರ್ಚೆ ಮಾಡುತ್ತಿರುವಾಗಲು ಯಾವುದೇ ಭಾವಾವೇಶಕ್ಕೆ ಒಳಗಾಗದೆ ಶಾಂತ ಹಾಗೂ ಆದರ್ಶ ಭಾವ ಮರೆದಿರುವುದು ಈ ಬಾರಿಯ ಚುನಾವಣೆ ವಿಶೇಷ.
ಮತ ಯಂತ್ರ ಭದ್ರ: ಹಾನಗಲ್ಲ ತಾಲೂಕಿನ 222 ಮತಗಟ್ಟೆಗಳಲ್ಲೂ ಯಾವುದೇ ತಾಂತ್ರಿಕ ತೊಂದರೆಯಾಗದೆ ಚುನಾವಣೆ ಪೂರ್ಣಗೊಂಡಿರುವುದು ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಟ್ಟಂತಾಗಿದೆ. ಮೆ 5ರಂದು ರಾತ್ರಿಯೇ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಎಲ್ಲ ಮತ ಪೆಟ್ಟಿಗೆಗಳು ಹಾವೇರಿಯ ಮತ ಎಣಿಕೆ ಕೇಂದ್ರ ತಲುಪಿವೆ.
ಅಭಿವೃದ್ಧಿ ಉತ್ಸಾಹದಲ್ಲಿ ಉದಾಸಿ: ಕೆಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಸಿ.ಎಂ. ಉದಾಸಿ ಅವರು ಚುನಾವಣೆ ಮರು ದಿನದಿಂದಲೇ ತಮ್ಮ ಚುನಾವಣಾ ಪೂರ್ವ ದಿನಚರಿಯಂತಲೆ ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದು, ಕಾರ್ಯಕರ್ತರೊಂದಿಗೆ ಚರ್ಚೆ,  ಫಲಿತಾಂಶದ ಬಗೆಗೆ ಸಮೀಕ್ಷೆಯ ಸಹಜ ಅಭಿವ್ಯಕ್ತಿ ನಡೆದೆ ಇದೆ. ಸೋಲು-ಗೆಲುವುಗಳನ್ನು ಸಮನಾಗಿ ಸ್ವೀಕರಿಸಿದ ಉದಾಸಿ ಅವರಿಗೆ ಬಂದ ಫಲಿತಾಂಶವನ್ನು ಮತದಾರನ ನಿರ್ಣಯವೆಂದು ಸ್ವೀಕರಿಸುವ, ನಿರಂತರವಾಗಿ ತಾಲೂಕಿನ ಅಭಿವೃದ್ಧಿಗೆ ಮುಂದಾಗುವ ಉತ್ಸಾಹದಲ್ಲಿದ್ದಾರೆ.
ಸಹಜ ದಿನಚರಿಯಲ್ಲಿ ನಾಯಕರು: ಕಾಂಗ್ರೇಸ್ ಅಭ್ಯರ್ಥಿ, ವಿಧಾನಸಭಾ ಮಾಜಿ ಉಪಸಭಾಪತಿ ಮನೋಹರ ತಹಸೀಲ್ದಾರ್ ಕೂಡ ತಾಲೂಕಿನಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರ ಭೇಟಿ ಮಾಡುತ್ತ ಮತದಾನ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುತ್ತ ಎಂದಿನಂತೆ ತಮ್ಮ ದಿನಚರಿಯಲ್ಲಿದ್ದಾರೆ.
ಚುನಾವಣೆಯಲ್ಲಿ ಭಾರೀ ಪೈಪೋಟಿ, ಪ್ರಚಾರದಲ್ಲಿದ್ದ ಬಿಜೆಪಿ ಅಭ್ಯರ್ಥಿ ಬಸವರಾಜ ಹಾದಿಮನಿ, ಜೆಡಿಎಸ್ ಅಭ್ಯರ್ಥಿ ಬಿ.ಕೆ. ಮೋಹನ್‌ಕುಮಾರ, ಪಕ್ಷೇತರ ಅಭ್ಯರ್ಥಿ ರಾಮು ಯಳ್ಳೂರ ಎಂದಿನಂತೆ ತಮ್ಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ಫಲಿತಾಂಶದತ್ತ ಎಲ್ಲರ ಚಿತ್ತ: ಫಲಿತಾಂಶದ ಕ್ಷಣಗಣನೆಯಲ್ಲಿ ಅಭ್ಯರ್ಥಿಗಳಿಗಿಂತ ಕಾರ್ಯಕರ್ತರು ಹಾಗೂ ಮತದಾರರು ಕುತೂಹಲದಲ್ಲಿದ್ದಾರೆ. ಹಾನಗಲ್ಲ ವಿಧಾನಸಭಾ ಕ್ಷೇತ್ರವನ್ನು ಬುದ್ದಿವಂತ ಮತದಾರರ ಕ್ಷೇತ್ರ ಎಂದೇ ಚರ್ಚಿಸಲಾಗುತ್ತಿದೆ. ಈಗ ಫಲಿತಾಂಶಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ.
ರೈತನಿಗೆ ಮಳೆ, ಸರ್ಕಾರ ನಿರೀಕ್ಷೆ: ಚುನಾವಣೆ ಕಾವು ಏರಿರುವಾಗ ಬಿದ್ದ ಒಂದೆರಡು ಹನಿ ಮಳೆ ಹಾಗೂ ಭಾರಿ ಆಣೆಕಲ್ಲು ಮಳೆಗೆ ರೈತ ಹಂಗಾಮು ಆರಂಭವಾಯಿತು ಎಂಬ ಖುಷಿಯಲ್ಲಿದ್ದ. ಈಗ ಮತ್ತೆ ಮಳೆಯ ಸುಳಿವಿಲ್ಲದೆ, ಮಳೆಯ ದಾರಿ ಕಾಯುತ್ತಿದ್ದಾನೆ.
ಕಳೆದೆರಡು ವರ್ಷಗಳಿಂದ ನಿರೀಕ್ಷಿತ ಮಳೆ ಇಲ್ಲದೆ ಪರದಾಡಿದ ರೈತನಿಗೆ ಈ ಬಾರಿಯಾದರೂ ಉತ್ತಮ ಮಳೆ ಬರಬಹುದು ಎಂದು ಆರಂಭವಾದ ಚುನಾವಣಾ ಸಂದರ್ಭದ ಮಳೆ ಬಿದ್ದದ್ದು ಈಗ ಮತ್ತೆ ಆಕಾಶದತ್ತ ಮುಖ ಮಾಡುವಂತೆ ಮಾಡಿದೆ. ಚುನಾವಣಾ ಫಲಿತಾಂಶ ಹಾಗೂ ಮಳೆಯ ನಿರೀಕ್ಷೆ ಕೃಷಿಕನದ್ದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.