ಹಾವೇರಿ

ಮಂತ್ರಿಗಿರಿ ರೇಸ್‌ನಲ್ಲಿ ಮೂವರು ಶಾಸಕರು

Published On :

ಹಾವೇರಿ: ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕೈ ಬಲಪಡಿಸಿಕೊಂಡಿರುವ ಕಾಂಗ್ರೆಸ್ ಪಾಳೆಯದಲ್ಲಿ ಇದೀಗ ಮಂತ್ರಿಗಿರಿಗಾಗಿ ಭಾರಿ ಜಿದ್ದಾಜಿದ್ದಿ ಏರ್ಪಟ್ಟಿದೆ.
ಹಾನಗಲ್ ಶಾಸಕ ಮನೋಹರ ತಹಸೀಲ್ದಾರ್, ರಾಣಿಬೆನ್ನೂರು ಶಾಸಕ ಕೆ.ಬಿ. ಕೋಳಿವಾಡ ಹಾಗೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಂತ್ರಿ ಆಗಬೇಕೆಂಬ ರೇಸ್‌ನಲ್ಲಿದ್ದು, ಹೈಕಮಾಂಡ್ ಮನವೊಲಿಕೆಗೆ ತೀವ್ರ ಕಸರತ್ತು ನಡೆಸಿದ್ದಾರೆ.
ಚಾಣಾಕ್ಷತನದ ಕಾರ್ಯ ಅಗತ್ಯ: ತಹಸೀಲ್ದಾರ್ ಹಾಗೂ ಕೋಳಿವಾಡ ಹಿರಿಯ ರಾಜಕಾರಣಿಗಳಾಗಿದ್ದು, ಈ ಇಬ್ಬರ ಪೈಕಿ ಒಬ್ಬರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ಅಭಿಪ್ರಾಯಗಳು ಕೇಳಿ ಬರುತ್ತೀವೆ. 5 ವರ್ಷಗಳ ಕಾಲ ಆಡಳಿತ ನಡೆಸಿರುವ ಬಿಜೆಪಿ, ಜಿಲ್ಲೆಗೆ ಅನುದಾನದ ಹೊಳೆಯನ್ನೇ ಹರಿಸಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಜಿಲ್ಲೆಯಲ್ಲಿ ಈಗಾಗಲೇ ಬಿಜೆಪಿ ವರ್ಚಸ್ಸು ಕಮ್ಮಿಯಾಗಿದೆ. ಕಮಲ ಪಕ್ಷ ಮತ್ತೆ ಬೇರುಗಳನ್ನು ಚಾಚದಂತೆ ಚಾಣಾಕ್ಷತನದಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿರುವ ಗುರುತರ ಜವಾಬ್ದಾರಿ ಶಾಸಕರ ಮೇಲಿರುವುದು ಸುಳ್ಳಲ್ಲ.
ಸಾಧ್ಯತೆ ಕಮ್ಮಿ: ಗದಗ ಶಾಸಕರೂ ಆಗಿರುವ ಪಕ್ಷದ ಹಿರಿಯಾಳು ಎಚ್.ಕೆ. ಪಾಟೀಲ, ದೆಹಲಿ ಮಟ್ಟದ ನಾಯಕರಿಂದ ಹಿಡಿದು ರಾಜ್ಯ ಮಟ್ಟದ ನಾಯಕರಲ್ಲಿ ಉತ್ತಮ ಸಂಬಂಧ ಹೊಂದಿದ್ದಾರೆ. ಆದ್ದರಿಂದ ಸಲೀಸಾಗಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳುತ್ತಾರೆ ಎಂಬುದರಲ್ಲಿಯೂ ಯಾವುದೇ ಸಂದೇಹವಿಲ್ಲ. ಹೀಗಾದ್ದಾಗ್ಯೂ ಪಕ್ಕದ ಹಾವೇರಿ ಜಿಲ್ಲೆಯ ಮತ್ತೊಬ್ಬರಿಗೆ ಮಂತ್ರಿ ಸ್ಥಾನ ನೀಡಲು ಹೈಕಮಾಂಡ್ ನಿರಾಕರಿಸಬಹುದೆಂಬ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಉನ್ನತ ಹುದ್ದೆಗೇರಿದವರು: ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೆ.ಬಿ. ಕೋಳಿವಾಡರು ಮಂತ್ರಿ ಸ್ಥಾನ ಅಲಂಕರಿಸಿದ್ದರು. ಹಾನಗಲ್‌ನ ಹಾಲಿ ಶಾಸಕ ಮನೋಹರ ತಹಸೀಲ್ದಾರ್ ಇದೇ ಅವಧಿಯಲ್ಲಿ ವಿಧಾನಸಭೆ ಉಪ ಸಭಾಪತಿಯಾಗಿದ್ದರು. ಬಲಿಜ ಜಾತಿಗೆ ಸೇರಿರುವ ತಹಸೀಲ್ದಾರ್ ಸಮುದಾಯದ ಜನರು ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿಲ್ಲ. ಈ ಅಂಶವೂ ಅವರಿಗೆ ಮಂತ್ರಿ ಸ್ಥಾನಕ್ಕೇರಲು ಅಡ್ಡಿಯನ್ನುಂಟು ಮಾಡಬಹುದು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಇದಲ್ಲದೇ, ಇಬ್ಬರೂ ನಾಯಕರಿಗೆ ಈಗಾಗಲೇ ಹೈಕಮಾಂಡ್ ಈ ಹಿಂದೆಯೇ ಉನ್ನತ ಹುದ್ದೆ ದಯಪಾಲಿಸಿದ್ದು, ಮತ್ತೊಂದು ಅವಧಿಗೆ ಹೊಸಬರಿಗೆ ಮಣೆ ಹಾಕಲು ಮುಂದಾದರೆ ಅಚ್ಚರಿಪಡುವಂತಿಲ್ಲ. ಹಾವೇರಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಗೆಲವು ಸಾಧಿಸಿರುವ ರುದ್ರಪ್ಪ ಲಮಾಣಿ, ಈ ಹಿಂದೆಯೂ ಶಾಸಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಮಂತ್ರಿಗಿರಿ ತಾನಾಗಿ ಬಂದರೆ ಅನುಭವಿಸೋಣ ಎಂಬ ಮನೋಭಾವನೆ ಲಮಾಣಿ ಹೊಂದಿದಂತಿದೆ.
ಸಿದ್ದು ಸಿಎಂ ಆದ್ರೆ..: ಸದ್ಯ ರಾಜ್ಯದ ಕಾಂಗ್ರೆಸ್ ಪಾಳೆಯದಲ್ಲಿ ಸಿಎಂ ರೇಸ್‌ನಲ್ಲಿ ಸಿದ್ಧರಾಮಯ್ಯ ಮುಂಚೂಣಿಯಲ್ಲಿದ್ದಾರೆ. ಒಂದೊಮ್ಮೆ ಸಿದ್ದು ಸಿಎಂ ಆದ್ರೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರ ಅದೃಷ್ಟ ಖುಲಾಯಿಸಲಿದೆ ಎಂಬ ಲೆಕ್ಕಾಚಾರದ ಮಾತುಗಳು ಕೇಳಿ ಬರುತ್ತೀವೆ.
ಕುರುಬ ಸಮುದಾಯಕ್ಕೆ ಸೇರಿರುವ ಶಿವಣ್ಣನವರ ಅವರನ್ನು ಮಂತ್ರಿ ಸ್ಥಾನ ನೀಡುವಂತೆ ಸಿದ್ದು, ಹೈಕಮಾಂಡ್ ಎದುರು ಪ್ರಸ್ತಾಪಿಸಬಹುದು ಎನ್ನಲಾಗುತ್ತಿದ್ದು, ಈ ಮನವಿಗೆ ಹೈಕಮಾಂಡ್ ತಥಾಸ್ತು ಎಂದಲ್ಲಿ ಶಿವಣ್ಣನವರ ಮಂತ್ರಿಯಾಗುವುದು ನಿಸ್ಸಂಶವೇ.
ಶಿಗ್ಗಾಂವಿ ವಿಧಾನಸಭೆ ಕ್ಷೇತ್ರ ಮಾತ್ರವಲ್ಲದೆ ಇಡೀ ಜಿಲ್ಲೆಯಲ್ಲಿ ಕುರುಬ ಸಮಾಜ ದೊಡ್ಡ ಸಂಖ್ಯೆಯಲ್ಲಿದೆ ಎಂಬುದರ ಅರಿವು ಕಾಂಗ್ರೆಸ್ ನಾಯಕರಿದ್ದು, ಇದೊಂದೆ ಕಾರಣ, ಶಿವಣ್ಣನವರ ಅವರಿಗೆ ಮಂತ್ರಿ ಸ್ಥಾನದವರೆಗೂ ಕರೆದ್ಯೊಯ್ದರೆ ಅಚ್ಚರಿಪಡಬೇಕಿಲ್ಲ.
ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ನಂತರ, ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೆ ಕರೆಯಲ್ಪಡುವ ಧಾರವಾಡ ಹಾಗೂ ಗದಗ ಜಿಲ್ಲೆಗೆ ಒಂದೊಂದು ಮಂತ್ರಿ ಸ್ಥಾನ ಸಿಗುವುದು ಖಚಿತ ಎನ್ನಲಾಗುತ್ತಿದ್ದು, ಆ ಮೂಲಕ ಸಮಸ್ತ ಉತ್ತರ ಕರ್ನಾಟಕದ ಅಭಿವೃದ್ಧಿಯಾಗಲಿ ಎಂಬುದೊಂದು ಮತದಾರ ಅಭಿಲಾಷೆ.

- ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.