ಹಾವೇರಿ

ನಿರ್ಮಲಾ ಬದುಕಿಗೆ ಕನಕಾಂಬರ ಆಸರೆ

Published On :

ಕುಷ್ಟಗಿ: ರೈತ ಮಹಿಳೆಯೊಬ್ಬಳು ಅರ್ಧ ಎಕರೆ ಜಮೀನಿನಲ್ಲಿ ಕನಕಾಂಬರ ಹೂವು ಬೆಳೆದು ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಆಸರೆಯಾಗಿ ಸಮಾಜಕ್ಕೆ ಮಾದರಿಯಾಗಿದ್ದಾಳೆ.
ತಾಲೂಕಿನ ತಳುವಗೇರಾ ಗ್ರಾಮದ ಹಿರೇಮಠ ಕುಟುಂಬದ ಸದಸ್ಯೆಯಾದ ರೈತ ಮಹಿಳೆ ನಿರ್ಮಲಾ ವೀರಭದ್ರಯ್ಯ ಹಿರೇಮಠ 7ನೇ ತರಗತಿವರೆಗೆ ಅಷ್ಟೇ ವಿದ್ಯಾಭ್ಯಾಸ ಮಾಡಿದ್ದಾರೆ. ಮದುವೆ ನಂತರ ತಾವೂ ಕೃಷಿಯಲ್ಲಿ ಸಾಧನೆ ಮಾಡುವ ಮೂಲಕ ಕುಟುಂಬಕ್ಕೆ ಆರ್ಥಿಕವಾಗಿ ಆಸರೆಯಾಗಬೇಕೆಂಬ ಕನಸು ಹೊತ್ತರು. ಇದಕ್ಕೆ ಗಂಡ ವೀರಭದ್ರಯ್ಯ ಪ್ರೋತ್ಸಾಹವೂ ಸಿಕ್ಕಿತು.
ಇನ್ನು ಗಂಡನ ಮನೆ ಪೂರ್ವಜರು ಆರಂಭದಿಂದಲೂ ಪುಷ್ಪ ಕೃಷಿಯಲ್ಲಿ ಅಖಂಡ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗೆ ಉತ್ತಮ ಹೆಸರು ಮಾಡಿದವರು. ಅವರಂತೆ ನಿರ್ಮಲಾ ತಾವೂ ಪುಷ್ಪ ಕೃಷಿಯಲ್ಲೇ ಸಾಧನೆ ಮಾಡಬೇಕೆಂಬ ಮನಸ್ಸು ಮಾಡಿದರು. ಊರ ಸಮೀಪದ ತಮ್ಮ ಕುಂಟುಂಬಕ್ಕೆ ಸೇರಿದ 7 ಎಕರೆ ಕೆಂಪು ಮಣ್ಣಿನ ಭೂಮಿಯಲ್ಲಿ ಪುಷ್ಪ ಕೃಷಿ ಆರಂಭಿಸಿದರು.
ಕನಕಾಂಬರಿ: ಕುಟುಂಬದ ಸಲಹೆ ಹಾಗೂ ಪತಿಯ ಪ್ರೋತ್ಸಾಹದಿಂದ ಕನಕಾಂಬರಿ ಹೂ ಬೆಳೆಯಲು ಮುಂದಾದರು. ಜಮೀನಿನಲ್ಲಿ ಕೊಳವೆ ಬಾವಿಯಿದ್ದರೂ ನೀರು ಅಷ್ಟಕಷ್ಟೇ, ಕಡಿಮೆ ಪ್ರಮಾಣದಲ್ಲಿ ಸಿಗುವ ನೀರನ್ನೇ ಬಳಸಿಕೊಳ್ಳಲು ತೀರ್ಮಾನಿಸಿದರು. ನಿರ್ಮಲಾ ಅವರಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಹಾಯಧನದಡಿ ಕನಕಾಂಬರಿ ಸಸಿ ಹಾಗೂ ಡ್ರಿಪ್ ಪೈಪ್‌ಲೈನ್ ಕಲ್ಪಿಸಿಕೊಟ್ಟರು.
ಊರಿನ ಕೆಲ ಕೃಷಿಕ ಮಹಿಳೆಯರ ಜೊತೆ ಜಮೀನನ್ನು ಎಲ್ಲ ರೀತಿಯಲ್ಲಿ ಸಿದ್ಧ ಮಾಡಿಕೊಂಡು ಕನಕಾಂಬರಿ ಸಸಿ ನೆಟ್ಟರು. ನೀರು ನೇರವಾಗಿ ಸಸಿಗೆ ತಲುಪಿಸಲು ಡ್ರಿಪ್ ಪೈಪ್‌ಲೈನ್ ಅಳವಡಿಸಿದರು. ಜತೆಗೆ ರಸಗೊಬ್ಬರ ಹಾಕದೇ ಸಾವಯವ ಗೊಬ್ಬರವನ್ನೇ ಸಸಿಗಳಿಗೆ ಕೊಟ್ಟರು.
ಲಾಭದ ಬೆಳೆ: ಮೂರು ತಿಂಗಳು ಚಿಕ್ಕಮಕ್ಕಳನ್ನು ಕಾಪಾಡಿದಂತೆ ಕಣ್ಣಲ್ಲಿ ಕಣ್ಣಿಟ್ಟು ಕನಕಾಂಬರಿ ಸಸಿಗಳನ್ನು ಬೆಳೆಸಿದ ರೈತ ಮಹಿಳೆ ನಿರ್ಮಲಾ ಶ್ರಮಕ್ಕೆ ತಕ್ಕಂತೆ ಕನಕಾಂಬರ ಸಸಿಗಳು ಹುಲಸಾಗಿ ಬೆಳೆದು ಹೂವು ಬಿಡಲಾರಂಭಿಸಿದವು. ಆರಂಭದಲ್ಲಿ ದಿನಕ್ಕೆ 4-5 ಕೆ.ಜಿ. ಹೂ ಕೈಗೆ ಸಿಗುತ್ತಿತ್ತು. ಸದ್ಯ 7ರಿಂದ 8 ಕೆ.ಜಿ. ಕನಕಾಂಬರ ಹೂ ಬಿಡಿಸಲಾಗುತ್ತಿದೆ. ಜಮೀನಿಗೆ ಬಂದು ಹೂವು ಖರೀದಿಸುವ ಮಾರಾಟಗಾರು, ಕೆ.ಜಿ.ಗೆ ರು. 160ರಿಂದ 180ರ ವರೆಗೆ ಬೆಲೆ ಖರೀದಿಸುತ್ತಾರೆ. ಕೂಲಿ ಮತ್ತಿತರ ವೆಚ್ಚ ತೆಗೆದು ಕೈಗೆ ನಿತ್ಯ ರು. 100ರಿಂದ 120ರ ವರೆಗೆ ಲಾಭ ಸಿಗುತ್ತದೆ ಎನ್ನುತ್ತಾರೆ ರೈತ ಮಹಿಳೆ ನಿರ್ಮಲಾ ಹಿರೇಮಠ. ಮಳೆಗಾಲ ಬಿಟ್ಟು ಉಳಿದ ಕಾಲದಲ್ಲಿ ಉತ್ತಮ ಇಳುವರಿ ಸಿಗುವ ಕನಕಾಂಬರಿ ಹೂವು ಕೃಷಿ, ಸಮಯಕ್ಕೆ ಸರಿಯಾಗಿ ಗೊಬ್ಬರ, ನೀರು ಕೊಟ್ಟು ಪೋಷಿಸಬೇಕು. ಆಗ ಖಂಡಿತ ವರ್ಷಪೂರ್ತಿ ಬೆಳೆ ಕೈಗೆ ಸಿಕ್ಕು, ಲಾಭ ಕೂಡ ಕಂಡುಕೊಳ್ಳಬಹುದು. ತನ್ನ ಪತ್ನಿ ಒಬ್ಬ ಮಾದರಿ ರೈತ ಮಹಿಳೆಯಾಗಿದ್ದು, ಅವಳ ಸಲಹೆಯಂತೆ ಕುಟುಂಬ ಸಂತಸದಲ್ಲಿದೆ ಎನ್ನುತ್ತಾರೆ ಪತಿ ವೀರಭದ್ರಯ್ಯ ಹಿರೇಮಠ.

- ಅನೀಲ ಅಲಮೇಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.