ಇಂದು ಗ್ರಾಮದೇವತೆ ಮೂರ್ತಿ ಪ್ರತಿಷ್ಠಾಪನೆ
ಕನ್ನಡಪ್ರಭ ವಾರ್ತೆ, ಗದಗ, ಮೇ 13
ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ 26 ವರ್ಷಗಳಿಂದ ನಡೆಯದ ಗ್ರಾಮ ದೇವತೆಯಾದ ದ್ಯಾಮವ್ವದೇವಿ (ಕಾಳಿಕಾದೇವಿ)ಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮ ಮೇ 14ರಿಂದ 16ರ ವರೆಗೆ ನಡೆಯಲಿದೆ.
ದೇವಿಗೆ ಸಕಲ ವಾದ್ಯಗಳೊಂದಿಗೆ ಕುಂಭಪೂಜೆ ಜೊತೆಗೆ ಗ್ರಾಮದ ಚೌತಾಕಟ್ಟೆ(ಶಬಾರಕಟ್ಟೆ)ಗೆ ಬಂದು ಅಲ್ಲಿಂದ ತವರು ಮನೆಗೆ ಹೋಗಿ ಅಲ್ಲಿ ಉಡಿ ತುಂಬಿಸಿಕೊಂಡು ಮರಳಿ ಚೌತಾಕಟ್ಟೆಗೆ ಬರುವಳು.
ಮೆರವಣಿಗೆಯೊಂದಿಗೆ ಉಡಿತುಂಬಿಸಿಕೊಳ್ಳುವ ಕಾರ್ಯ ನಡೆಯಲಿದೆ. ಬೆಳಗ್ಗೆ 8ಕ್ಕೆ ಗಂಗಾಪೂಜೆ ಮುಗಿಸಿ ನಂತರ ಉಡಿ ತುಂಬಿಸಿಕೊಳ್ಳುವ ಕಾರ್ಯಕ್ರಮ ಜರುಗಲಿದೆ.
ಚಳ್ಳೆ ಆಡುವುದು: ಗ್ರಾಮ ದೇವತೆ ದ್ಯಾಮವ್ವ(ಕಾಳಿಕಾ)ದೇವಿಯು ಗ್ರಾಮದಲ್ಲಿರುವ ಎಲ್ಲ ವಾದ್ಯ ಮೇಳಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಚಳ್ಳೆ ಆಡಿ(ದೇವಿಯ ಬೃಹತ್ ಮೆರವಣಿಗೆ) ಪುನಃ ದೇವಸ್ಥಾನಕ್ಕೆ ಬರುವಳು.
ಈ ಕಾರ್ಯ ಅತ್ಯಂತ ಮಡಿಯಿಂದ ನಡೆಯುವುದು. ಗ್ರಾಮದ ಪ್ರಮುಖ ರಸ್ತೆಗಳನ್ನು ಶುಚಿಗೊಳಿಸಲಾಗುವುದು. ನಂತರ ಅಲ್ಲಿ ಗ್ರಾಮ ದೇವತೆಯು ಚಳ್ಳೆ ಆಡುವುದು. ಈ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಂದು ಯಾವುದೇ ವಾಹನಗಳು ಗ್ರಾಮದಲ್ಲಿ ಬರುವುದಿಲ್ಲ.
ಹೋಮ ಹವನಗಳು: ಗ್ರಾಮ ದೇವತೆಯ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ತ ದೇವತಾ ಪೂಜೆ, ಹೋಮ, ದುರ್ಗಾ ಹೋಮ, ಚಂಡಿ ಹೋಮ, ಸಂಕ್ಷಿಪ್ತ ಪೂರ್ಣಾಹುತಿ ಸೇರಿದಂತೆ ವಿವಿಧ ರೀತಿಯ ವಿಶೇಷ ಪೂಜಾ ಕಾರ್ಯ, ಮಂಗಳಾರತಿ, ಪ್ರಸಾದ ಕಾರ್ಯ ನಡೆಯಲಿದೆ. ದೇವಿಯ ಚಳ್ಳೆ ಆಡುವ ದಿನದಂದು ಕುಂಭಮೇಳ ಕಾರ್ಯಕ್ರಮ ಜರುಗಲಿದೆ.
ಪ್ರಾಣ ಪ್ರತಿಷ್ಠಾನ ಪೂಜೆ: ವಿವಿಧ ಶ್ರೀಗಳ ಸಾನ್ನಿಧ್ಯದಲ್ಲಿ ಸುಪ್ರಭಾತ, ದೇವತಾ ಉದ್ದಾಪನೆ, ದೇವತಾ ಪೂಜೆಯೊಂದಿಗೆ ಗ್ರಾಮ ದೇವತೆ ಹಾಗೂ ನವಗ್ರಹ ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ಮಿಲನ, ಕಲಾವ್ಹಾನ ಕದಳಿ, ಕುಷ್ಮಾಂಡ, ಧೇನುದರ್ಶನ, ದಣರ್ಪಣದಲ್ಲಿ ಬಿಂಬ ದರ್ಶನ, ಕಲಾ ಹೋಮ, ಪ್ರಾಣ ಪ್ರತಿಷ್ಠಾ ಹೋಮ, ಬಲಿ ಹರಣ, ಪೂರ್ಣಾಹುತಿಯೊಂದಿಗೆ ಮಹಾ ಮಂಗಳಾರತಿ ಮತ್ತು ಭಕ್ತರಿಂದ ಹಣ್ಣು ಕಾಯಿ, ಕರ್ಪೂರ, ಉಡಿ ತುಂಬುವುದು ಮುಂತಾದ ಹತ್ತು ಹಲವು ಕಾರ್ಯ ನಡೆಯಲಿವೆ.
26 ವರ್ಷಗಳ ನಂತರ ಈ ಉತ್ಸವ ಮಂಗಳವಾರದಿಂದ 3 ದಿನಗಳ ಕಾಲ ನಡೆಯುತ್ತಿದೆ. ನಾಡಿನ ಹೆಸರಾಂತ ಹರ, ಗುರು, ಚರ ಮೂರ್ತಿಗಳು ಸೇರಿದಂತೆ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಸದ್ಭಕ್ತರು ಆಗಮಿಸುವರು.
ಇಂದು ಧ್ವಜಾರೋಹಣ
ಕೋಟುಮಚಗಿ ಗ್ರಾಮದೇವತೆ ದ್ಯಾಮವ್ವ (ಕಾಳಿಕಾದೇವಿ) ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ, ಜಾತ್ರಾ ಮಹೋತ್ಸವ ನಿಮಿತ್ತ ಮೇ 14ರ ಬೆಳಗ್ಗೆ 6ಕ್ಕೆ ಧ್ವಜಾರೋಹಣ ಜರುಗಲಿದೆ. ಶಿರಹಟ್ಟಿ ಸಂಸ್ಥಾನಮಠದ ಫಕೀರೇಶ್ವರ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಫಕೀರಯ್ಯ ಹಿರೇಮಠ, ಗಂಗಾಧರಯ್ಯ ಹಿರೇಮಠ, ಟ್ರಸ್ಟ್ನ ಅಧ್ಯಕ್ಷ ಶಿವಪ್ಪ ನೇಗಲಿ ಉಪಸ್ಥಿತರಿರುವರು. ಬೆಳಗ್ಗೆ 8ಕ್ಕೆ ಗಿಣಗೇರಿಯ ದೇವೇಂದ್ರ ಶ್ರೀಗಳ ನೇತೃತ್ವದಲ್ಲಿ ಗಂಗಾಪೂಜೆ ಜರುಗಲಿದೆ. ಸಂಜೆ 5ಕ್ಕೆ ನಡೆಯುವ ಧರ್ಮಸಭೆ ಸಾನ್ನಿಧ್ಯವನ್ನು ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಶಿವಬಸವ ಶ್ರೀಗಳು, ಮುದ್ದಾಬಳ್ಳಿಯ ಏಕದಂಡಗಿಯ ಗುರುನಾಥ ಶ್ರೀಗಳು, ಮುತ್ತಪ್ಪಜ್ಜನವರು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರ ವಹಿಸುವರು. ಗ್ರಾಪಂ ಅಧ್ಯಕ್ಷೆ ಸುಮಂಗಲಾ ಜಗ್ಗಲ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕಳಕಪ್ಪ ಬಂಡಿ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಉಪಾಧ್ಯಕ್ಷ ರಮೇಶ ಮುಂದಿನಮನಿ, ಚಂಬವ್ವ ಪಾಟೀಲ, ಎಪಿಎಂಸಿ ಸದಸ್ಯ ರಾಮಣ್ಣ ಶಿಂಗಟಾಲಕೇರಿ. ಹುಚ್ಚೀರಪ್ಪ ಬಡಿಗೇರ ಅತಿಥಿಗಳಾಗಿ ಆಗಮಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

