ಪೌರ ಕಾರ್ಮಿಕರ ಮುಷ್ಕರ: ಗಬ್ಬೆದ್ದ ಬ್ಯಾಡಗಿ
ಬ್ಯಾಡಗಿ: ಗುತ್ತಿಗೆ ಪೌರಕಾರ್ಮಿಕರು, ಅಧಿಕಾರಿಗಳು, ಗುತ್ತಿಗೆದಾರನ ನಡುವಿನ ಹಗ್ಗಜಗ್ಗಾಟದಿಂದ ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ಸ್ಥಗಿತಗೊಂಡಿದ್ದು, ವಾರದಿಂದ ಕಸದ ರಾಶಿಗಳು ಪಟ್ಟಣದ ತುಂಬ ಹರಡಿದ್ದು, ಹಲವು ಕಡೆಕಟ್ಟಿದ ಚರಂಡಿಗಳು ದುರ್ನಾತ ಬೀರುತ್ತಿವೆ.
ಗುತ್ತಿಗೆದಾರ ನೀಡುತ್ತಿರುವ ವೇತನ ಸಾಕಾಗುವುದಿಲ್ಲ. ವೇತನ ಹೆಚ್ಚಿಸುವವರೆಗೂ ಕೆಲಸಕ್ಕೆ ತೆರಳುವುದಿಲ್ಲ ಎಂದು ಪ್ರತಿಭಟನೆ ನಡೆಸಿ ಬಿಗಿಪಟ್ಟು ಹಿಡಿದಿರುವ 36 ಗುತ್ತಿಗೆ ಪೌರಕಾರ್ಮಿಕರು ಒಂದು ವಾರದಿಂದ ಸ್ವಚ್ಛವಾ ಕಾರ್ಯ ಸ್ಥಗಿತಗೊಳಿಸಿದ್ದು, ಪಟ್ಟಣದ ನೈರ್ಮಲ್ಯ ಸಂಪೂರ್ಣ ಹಾಳಾಗಿದೆ.
ಮೂರು-ನಾಲ್ಕು ಬಾರಿ ಸಭೆಗಳನ್ನು ನಡೆಸಿ ಸಂಧಾನಕ್ಕೆ ಮುಖ್ಯಾಧಿಕಾರಿ ಪ್ರಯತ್ನಿಸಿದರಾದರೂ ಪ್ರಯೋಜನವಾಗಿಲ್ಲ. ಹೀಗಾಗಿ ಪಟ್ಟಣದ ನೈರ್ಮಲ್ಯ ಇನ್ನಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಕಾರ್ಮಿಕರ ಪ್ರತಿಭಟನೆಯಿಂದಾಗಿ ಪಟ್ಟಣವೆಲ್ಲ ಗಬ್ಬು ನಾರುತ್ತ ರೋಗಗಳು ಹರಡುವ ಭೀತಿ ಎದುರಾಗಿದೆ. ಮೂರು ಬಾರಿ ಅತ್ಯುತ್ತಮ ಪುರಸಭೆ ಪ್ರಶಸ್ತಿಗೆ ಭಾಜನವಾಗಿರುವ ಬ್ಯಾಡಗಿ ಪುರಸಭೆಯ ಸದ್ಯದ ಕಾರ್ಯವೈಖರಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ.
ಕೈಸೇರದ ಹಣ: ಪ್ರತಿ ಕಾರ್ಮಿಕನಿಗೆ ದಿನಕ್ಕೆ ರು. 155ರಂತೆ (ತಿಂಗಳಿಗೆ ರು. 4650) ಒಟ್ಟು 40 ಪೌರಕಾರ್ಮಿಕರಿಗೆ ವೇತನ ಅನ್ವಯವಾಗುವಂತೆ ಮಾರುತಿ ಹಂಜಗಿ ಎಂಬುವರು ಗುತ್ತಿಗೆ ಪಡೆದಿದ್ದರು. ಆದರೆ ಗುತ್ತಿಗೆದಾರ ಕೇವಲ ರು. 3600 ನೀಡುತ್ತಾ ಬಂದಿದ್ದು, ಕಾರ್ಮಿಕರು ಇದನ್ನು ವಿರೋಧಿಸಿದ್ದರಿಂದ ವರ್ಷದಿಂದ ಈಚೆಗೆ ರು. 4 ಸಾವಿರ ನೀಡುತ್ತಿದ್ದಾರೆ. ಇಷ್ಟೊಂದು ಕಡಿಮೆ ವೇತನದಲ್ಲಿ ಜೀವನ ನಿರ್ವಹಣೆ ಮಾಡುವುದು ಹೇಗೆ ಎಂಬುದು ಪೌರ ಕಾರ್ಮಿಕರ ಪ್ರಶ್ನೆ.
ವೇತನ ಪರಿಷ್ಕರಣೆಯಾಗಿಲ್ಲ: ಕಾರ್ಮಿಕ ಇಲಾಖೆಯ ಸದ್ಯದ ನಿಯಮದಂತೆ ಪೌರಕಾರ್ಮಿಕರಿಗೆ ರು. 6080 ನೀಡಬೇಕಾಗಿದೆ. ಆದರೆ ವೇತನ ಪರಿಷ್ಕರಿಸದೆ 2009-10ರಂತೆ ಎರಡು ವರ್ಷಗಳಿಂದ ಮಾಸಿಕ ರು. 4650 ವೇತನ ನೀಡುತ್ತಾ ಬಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಗುತ್ತಿಗೆ ಪೌರಕಾರ್ಮಿಕರು ವಾರದಿಂದ ಸ್ವಚ್ಛತೆ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಬಡವರ ನೋವು ಅರ್ಥವಾಗದ ಗುತ್ತಿಗೆದಾರ ಹಾಗೂ ಅಧಿಕಾರಿಗಳಿಂದ ಕಾರ್ಮಿಕರ ಸಮಸ್ಯೆ ಪರಿಹಾರ ಸಾಧ್ಯವಿಲ್ಲ ಎನ್ನುತ್ತಾರೆ ಪೌರ ಕಾರ್ಮಿಕ ಪರಶುರಾಮ ಹರಿಜನ.
ಖಾಸಗಿ ವ್ಯಕ್ತಿಗಳು ಬೇಡ: ನೀರು ಸರಬರಾಜು ಹಾಗೂ ಪಟ್ಟಣದ ನೈರ್ಮಲ್ಯಕ್ಕಾಗಿ ಕಾರ್ಮಿಕರನ್ನು ಪಡೆದುಕೊಳ್ಳಲು ಖಾಸಗಿಯವರಿಗೆ ಗುತ್ತಿಗೆ ನೀಡುವುದು ಅವೈಜ್ಞಾನಿಕ ಕ್ರಮವಾಗಿದ್ದು, ಮೊದಲಿನಿಂದಲೂ ಪೌರಕಾರ್ಮಿಕರು ಇದನ್ನು ವಿರೋಧಿಸುತ್ತಾ ಬಂದಿದ್ದಾರೆ. ಕಾರ್ಮಿಕರನ್ನು ಮನಬಂದಂತೆ ದುಡಿಸಿಕೊಳ್ಳುತ್ತಿರುವ ಗುತ್ತಿಗೆದಾರರು ಕಾರ್ಮಿಕರು ದುಡಿದ ಹಣವನ್ನೇ ಕಿತ್ತು ತಿನ್ನುತ್ತಿದ್ದು, ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡುವುದನ್ನು ಸ್ಥಗಿತಗೊಳಿಸುವಂತೆ ಕುಮಾರ ಮಾಳಗಿ ಆಗ್ರಹಿಸುತ್ತಾರೆ.
ಸೇವಾ ಭದ್ರತೆ ಇಲ್ಲ: ಪುರಸಭೆಯಲ್ಲಿ ಕಾಯಂ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರು ಹಾಕಿದಷ್ಟೇ ಶ್ರಮವನ್ನು ಗುತ್ತಿಗೆ ಕಾರ್ಮಿಕರೂ ಹಾಕುತ್ತಾರೆ. ಆದರೆ, ದುಡಿಮೆಗೆ ತಕ್ಕಂತೆ ಹಣ ಕಾರ್ಮಿಕರಿಗೆ ಸಿಗುತ್ತಿಲ್ಲ. ಸರ್ಕಾರ ಮಾತ್ರ ಗುತ್ತಿಗೆ ಪೌರ ಕಾರ್ಮಿಕರನ್ನು ಇಂದಿಗೂ ಕಾಯಂಗೊಳಿಸಿಲ್ಲ ಎನ್ನುತ್ತಾರೆ ಪುರಸಭೆ ಸದಸ್ಯ ದುರ್ಗೇಶ್ ಗೋಣೆಮ್ಮನವರ.
ಸಂತೆಯಲ್ಲಿ ಕಸ: ಪೌರಕಾರ್ಮಿಕರ ಪ್ರತಿಭಟನೆಯಿಂದಾಗಿ ಪಟ್ಟಣದ ಸಂತೆ ಮೈದಾನದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಬಿದ್ದಿವೆ. ಹಂದಿ ಹಾಗೂ ಜಾನುವಾರುಗಳು ತುಂಬಿಕೊಂಡು ಮತ್ತಷ್ಟು ಗಲೀಜು ಉಂಟಾಗಿದೆ. ಸುತ್ತಲಿರುವ ವಾಣಿಜ್ಯ ಮಳಿಗೆಗಳಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ತೊಂದರೆಯಾಗಿದೆ ಎಂಬ ದೂರುಗಳು ವ್ಯಾಪಾರಸ್ಥರಿಂದ ಕೇಳಿಬರುತ್ತಿದೆ.
ಶಾರ್ಟ್ ಟೆಂಡರ್: ಉಪವಿಭಾಗಾಧಿಕಾರಿ ಚನ್ನಬಸಪ್ಪ ಹಾಗೂ ಬ್ಯಾಡಗಿ ಪುರಸಭೆ ಆಡಳಿತಾಧಿಕಾರಿಗಳು ಪೌರಕಾರ್ಮಿಕರನ್ನು ಪೂರೈಸಲು ಶಾರ್ಟ್ ಟರ್ಮ್ ಟೆಂಡರ್ ಕರೆದಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಳಿಸಿ ಗುತ್ತಿಗೆದಾರನನ್ನು ನೇಮಕ ಮಾಡುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

