5 ದಿನಕ್ಕೊಮ್ಮೆ ಕುಡಿವ ನೀರೊದಗಿಸಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಮೇ 20
ಹಾನಗಲ್ಲ ನಗರಕ್ಕೆ ಕನಿಷ್ಠ 5 ದಿನಕ್ಕೊಮ್ಮೆ ಕಡಿಯುವ ನೀರು ಕೊಡದಿದ್ದರೆ ಅಧಿಕಾರಿಗಳೇ ಹೊಣೆಗಾರರು, ನೂತನ ಸರ್ಕಾರದ ಮೇಲೆ ಪಿತೂರಿ ಹೊರಿಸುವ ಹುನ್ನಾರ ಸಹಿಸುವುದಿಲ್ಲ. ಕೊಳವೆ ಬಾವಿಯಿಂದ ನೀರು ಕೊಡಲು ಸಾಧ್ಯ. ಧರ್ಮಾ ಪ್ರೊಜೆಕ್ಟಿನಿಂದ ನೀರು ಬಿಡಿಸಲಾಗುವುದು. ಅಧಿಕಾರಿಗಳ ಹೊಣಗೇಡಿತನ್ನಕ್ಕೆ ರಾಜೀ ಸೂತ್ರವಿಲ್ಲ ಎಂದು ನೂತನ ಶಾಸಕ ಮನೋಹರ ತಹಸೀಲ್ದಾರ್ ಗುಡುಗಿದರು.
ಹಾನಗಲ್ಲ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನೂತನ ಸರ್ಕಾರದ ಅವಧಿಯ ಮೊದಲ ಕುಡಿಯುವ ನೀರಿನ ಸಮಸ್ಯೆ ಕುರಿತ ಟಾಸ್ಕಫೋರ್ಸ್ ಸಭೆಯಲ್ಲಿ ತಾಲೂಕಿನ 40 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪಂಚಾಯಿತಿ ಅಧ್ಯಕ್ಷರೊಂದಿಗೆ ಚರ್ಚಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ನಿಷ್ಕಾಳಜಿಗೆ ಅಧಿಕಾರಿಗಳೇ ಹೊಣೆ: ತಾಲೂಕಿನಲ್ಲಿ ಯಾವುದೇ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗಕೂಡದು. ಈಗಲೇ ನೀರಿನ ಅಗತ್ಯತೆ ಹೆಚ್ಚಾಗಿದೆ. ಮಳೆ ಬರುವವರೆಗೆ ಅನಿವಾರ್ಯವಾಗಿ ಅಧಿಕಾರಿಗಳು ಕುಡಿಯುವ ನೀರು ಪೂರೈಕೆಗೆ ಕಾಳಜಿ ವಹಿಸಬೇಕು. ತಪ್ಪಿದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಯಾವುದೇ ಅಧಿಕಾರಿಗಳು ಈ ವಿಷಯದಲ್ಲಿ ನಿಷ್ಕಾಳಜಿ ವಹಿಸಿದರೆ ರಾಜೀ ಸೂತ್ರ ನಡೆಯುವುದಿಲ್ಲ ಎಂದು ಎಂದು ಎಚ್ಚರಿಸಿದ ಅವರು, ವಿದ್ಯುತ್ ಇಲಾಖೆ, ಜಿಪಂ, ಗ್ರಾಪಂ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಹಾಗೂ ಒಟ್ಟಾಗಿ ಸಮಸ್ಯೆ ಬರದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಎಚ್ಚರಿಕೆ ವಹಿಸಿ: ಹಾನಗಲ್ಲ ನಗರಕ್ಕೆ ಏಕಾಏಕಿ ವಾರಕ್ಕೊಮ್ಮ ನೀರು ಬಿಡಲಾಗುವುದೆಂದು ಡಂಗುರ ಸಾರಿಸಿದ ಉದ್ದೇಶ ಹೊಸ ಸರ್ಕಾರದ ಮೇಲೆ ಪಿತೂರಿ ಹೇರುವ ಸನ್ನಾಹವಾಗಿದೆ. ಇದನ್ನು ಸಹಿಸುವುದಿಲ್ಲ. ಒಮ್ಮಿಂದೊಮ್ಮಿಲೆ 5 ದಿನದಿಂದ 7 ದಿನಕ್ಕೆ ವಿಸ್ತರಿಸಿರುವುದು ಅಧಿಕಾರಿಗಳ ಹೊಣೆಗೇಡಿತನ ಆದೀತು. ಎಂಥದೇ ಕಷ್ಟವಾದರೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಕೆಲಸ ಮಾಡಿರಿ ಎಂದರು.
ಸಮರ್ಪಕ ನೀರು ಕೊಡಿ: ಹಣಕಾಸು ಹಾಗೂ ಇತರೆ ವ್ಯವಸ್ಥೆಯನ್ನು ನಾನು ಮಾಡುತ್ತೇನೆ ಎಂದ ಮನೋಹರ ತಹಸೀಲ್ದಾರ್, ಧರ್ಮಾ ಜಲಾಶಯದಿಂದ ನೀರು ಬಿಡಿಸಲು ಯತ್ನಿಸಲಾಗುವುದು. ಅಗತ್ಯ ಬಿದ್ದರೆ ಮತ್ತೆ ಕೊಳವೆ ಭಾಗಿ ಕೊರೆಯಿಸೋಣ. ಈಗಿರುವ ಕೊಳವೆ ಬಾವಿಗಳನ್ನು ದುರಸ್ಥಿಗೊಳಿಸಿ ನೀರು ಕೊಡಿ. ಇದಕ್ಕಾಗಿ ಕೆಇಬಿ, ಪುರಸಭೆ ಅಧಿಕಾರಿಗಳು ಚರ್ಚಿಸಿ ಸಮರ್ಪಕ ಕುಡಿಯುವ ನೀರು ಕೊಡಲು ಸೂಚಿಸಿದರು.
ಇಓ, ಪಿಡಿಓ ಜವಾಬ್ದಾರರು: ಹಾನಗಲ್ಲ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾದರೆ ಟ್ಯಾಂಕರ್ ಮೂಲಕ ನೀರು ಕೊಡಲು ಮುಂದಾಗಿರಿ. ಇದಕ್ಕಾಗಿ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲಾಗುವುದು. ಅಧಿಕಾರಿಗಳು ನಿರಂತರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಸಂಪರ್ಕದಲ್ಲಿದ್ದು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಕುಡಿಯುವ ನೀರಿನ ತೊಂದರೆ ಆದರೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನೂ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಮೊದಲ ಸಭೆ ಒಟ್ಟಾರೆ ನೀರಿನ ಸಮಸ್ಯೆಯನ್ನೇ ಅವಲಂಬಿಸಿತ್ತು. ಇಡೀ ಸಭೆಯಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಪ್ರತಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓ ಅವರನ್ನು ಪ್ರತ್ಯೇಕ ಕರೆದು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಯತ್ನ ಶಾಸಕರಿಂದ ನಡೆಯಿತು.
ನಿಗದಿತ ಸಮಯಕ್ಕೆ ಬೀಜ, ಗೊಬ್ಬರ ಪೂರೈಕೆ: ಕೃಷಿ ಇಲಾಖೆ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿ, ಬೀಜ, ಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಆಗಕೂಡದು. ಈಗಿರುವ ಮಾಹಿತಿಯನ್ನು ನೀಡಿ, ಹೆಚ್ಚಿನ ಅಗತ್ಯಕ್ಕೆ ಮಾಹಿತಿ ಕೊಡಿ ಎಂದು ತಿಳಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಉಪಾಧ್ಯಕ್ಷೆ ಅನಿತಾ ಶಿವೂರ, ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಸದಸ್ಯರಾದ ಬಸವರಾಜ ಹಾದಿಮನಿ, ಮಹದೇವಪ್ಪ ಬಾಗಸರ, ಕಸ್ತೂರವ್ವ ವಡ್ಡರ ಇದ್ದರು. ತಾಪಂ ಇಓ ಮನೋಜಕುಮಾರ ಗಡಬಳ್ಳಿ, ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ, ಜಿಪಂ ಅಧಿಕಾರಿ ಕೆ.ಆರ್. ಮಠದ, ಕೃಷಿ ಅಧಿಕಾರಿ ಅಮೃತೇಶ್ವರ. ಹೆಸ್ಕಾಂ ಅಧಿಕಾರಿ ಕೃಷ್ಣಪ್ಪ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

