ಜಾನಪದ ಕಲೆ ಬೆಳವಣಿಗೆಗೆ ಕಲಿಕಾ ಕೇಂದ್ರ
ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 25
ಜಾನಪದ ಅಧ್ಯಯನ ಕೇಂದ್ರ ಹಾಗೂ ಜನಪದ ಕಲೆಗಳ ಕಲಿಕಾ ಕೇಂದ್ರ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಸಮಾಜದ ಸಮಸ್ತ ಸಮುದಾಯಗಳ ಜ್ಞಾನ ಸಂಗ್ರಹಣೆ ಜತೆಗೆ ದೇಸಿ ಸಂಸ್ಕೃತಿಯ ಜ್ಞಾನವನ್ನು ಗುರುತಿಸುವ, ಸಂಗ್ರಹಿಸುವ, ಸಂವರ್ದಿಸುವ, ಅಲ್ಲದೇ ಪ್ರಸರಿಸುವ ಆಶಯಕ್ಕೆ ಅನುಗುಣವಾಗಿ ಮಹತ್ವದ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಪ್ರವೃತ್ತವಾಗಿದೆ.
ಜೀವನ ಕ್ರಮದಲ್ಲಿ ಜಾನಪದ: ಕನ್ನಡ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆ ಅದರ ಸಾರ, ಸತ್ವ, ಸೊಬಗು ಅಡಗಿರುವುದೇ ಜಾನಪದದಲ್ಲಿ. ಜೀವನ ಮೌಲ್ಯ, ಆದರ್ಶಗಳ ಮೂಲ ಬೇರು ಹರಡಿಕೊಂಡಿರುವುದು ಸ್ಥಳೀಯ ಜನಪದರ ಜೀವನ ಕ್ರಮದಲ್ಲಿ ಎಂಬುದು ಸರ್ವವೇದ್ಯ. ಒಂದೊಂದು ಸಮುದಾಯಕ್ಕೂ ಒಂದೊಂದು ಕಲೆ, ಸಾಹಿತ್ಯ, ನಂಬಿಕೆ, ಆಚರಣೆ, ರೂಢಿ, ಸಂಪ್ರದಾಯಗಳು ಇರುವುದು ಸಹಜ.
ಜಾನಪದ ಕಟ್ಟುತ್ತಿರುವ ಜಾವಿವಿ: ಪ್ರತಿ ಸಮುದಾಯವು ತನ್ನದೆ ಆದ ಅನನ್ಯತೆಯನ್ನು ಉಳಿಸಿ, ಬೆಳೆಸಿಕೊಂಡು ಬರುತ್ತಿರುವುದು ಜಾನಪದ ಸಂಸ್ಕೃತಿ ಶ್ರೀಮಂತಿಕೆಗೆ ಸಾಕ್ಷಿಗಳಾಗಿವೆ. ಈ ಬಗೆಯ ವಿಶಿಷ್ಟ ಸಾಹಿತ್ಯ, ಕಲೆ, ರೂಢಿ, ಸಂಪ್ರದಾಯ, ಪರಂಪರೆಗಳ ಕೊಂಡಿ ಕಳಚದಂತೆ ಅವುಗಳನ್ನು ಕಾಪಾಡಿಕೊಳ್ಳುವ, ಪುನರ್ ಕಟ್ಟುವ ಕಾಯಕದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಸಂಪೂರ್ಣವಾಗಿ ತೊಡಗಿಕೊಂಡಿದೆ.
ಬೆಟ್ಟದಲ್ಲಿ ಕಲಿಕಾ ಕೇಂದ್ರ: ಜಾನಪದ ಕಲೆಯ ಮಹತ್ವದ ಕಾರ್ಯಗಳ ಅನುಷ್ಠಾನದ ಭಾಗವಾಗಿ ವಿಶ್ವವಿದ್ಯಾಲಯವು ನಾಡಿನ ಮುಖ್ಯವಾದ ಸ್ಥಳಗಳಲ್ಲಿ ತನ್ನ ಪ್ರಾದೇಶಿಕ ಕೇಂದ್ರಗಳನ್ನು ಆರಂಭಿಸುವ ಉದ್ದೇಶ ಹೊಂದಿದೆ. ಆರಂಭದಲ್ಲಿ ವಿಶ್ವವಿದಾಲಯವು ತನ್ನ ಮೊದಲ ಹೆಜ್ಜೆಯಾಗಿ ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ಬೆಟ್ಟದಲ್ಲಿ ಜಾನಪದ ಅಧ್ಯಯನ ಕೇಂದ್ರ ಹಾಗೂ ಜನಪದ ಕಲೆಗಳ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ವಿಶ್ವವಿದ್ಯಾಲಯದ ಮಹತ್ವದ ಉದ್ದೇಶಗಳಲ್ಲಿ ಒಂದಾದ ಪ್ರಾದೇಶಿಕ ಅಧ್ಯಯನ ಕೇಂದ್ರಗಳ ಸ್ಥಾಪನೆಯ ಕನಸು ಈ ಮೂಲಕ ನನಸಾಗಿದೆ. ಈ ಬಗೆಯ ಕನಸು ಸಾಕಾರಗೊಳ್ಳಲು ಹತ್ತು ಹಲವು ದಿಕ್ಕಿನಿಂದ ಸಹಾಯ, ಸಹಕಾರ ಹಾಗೂ ಸರ್ಕಾರಗಳ ಆಡಳಿತಾತ್ಮಕ ಬೆಂಬಲ ದೊರಕಿದ್ದನ್ನು ಮರೆಯುವಂತಿಲ್ಲ.
ಇದೀಗ ಸಂಸದ ಧ್ರುವನಾರಾಯಣ, ಸಹಕಾರ ಸಚಿವ ಎಚ್.ಎಸ್. ಮಹಾದೇವಪ್ರಸಾದ್, ಹನೂರು ಕ್ಷೇತ್ರದ ಶಾಸಕ ನರೇಂದ್ರ ಅವರು ಒತ್ತಾಸೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇರ ಸಹಕಾರದಿಂದ ಜಾನಪದ ಅಧ್ಯಯನ ಕೇಂದ್ರ ಸ್ಥಾಪನೆಯಾಗಿದೆ.
ಜಾನಪದ ಬೆಳವಣಿಗೆಗೆ ಸಹಕಾರಿ: ವಿದ್ವಾಂಸರ ಸಮಿತಿ ರಚಿಸಿ ಮಲೆಮಹದೇಶ್ವರ ಪರಂಪರೆಯನ್ನು ಕುರಿತು ಮಹತ್ವದ ಕ್ರಿಯಾ ಯೋಜನೆ ಸಿದ್ಧಪಡಿಸಿ ಈ ಭಾಗದಲ್ಲಿರುವ ನಂಬಿಕೆ, ಆಚರಣೆ, ಸಂಪ್ರದಾಯ, ಕಲೆಗಳ ಬಗೆಗೆ ಅಧ್ಯಯನ, ಸಂಶೋಧನೆ ಹಾಗೂ ಸೂಕ್ತ ತರಬೇತಿ ನೀಡುವ ಕಾರ್ಯಗಳು ಪ್ರಗತಿಯಲ್ಲಿವೆ. ಈಗ ಸ್ಥಾಪನೆಯಾಗಿರುವ ಜಾನಪದ ಅಧ್ಯಯನ ಹಾಗೂ ಕಲಿಕಾ ಕೇಂದ್ರಗಳಲ್ಲಿ ಜಾನಪದ ಸಂಬಂಧಿ ಕಾರ್ಯಚಟುವಟಿಕೆಗಳು ಹೆಚ್ಚಿನ ರೀತಿಯಲ್ಲಿ ನಡೆಯಲಿವೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ತನ್ನ ಜಾನಪದ ಅಧ್ಯಯನ ಕೇಂದ್ರ ಹಾಗೂ ಜನಪದ ಕಲೆಗಳ ಕಲಿಕಾ ಕೇಂದ್ರಗಳನ್ನು ಮಲೆಮಹದೇಶ್ವರ ಬೆಟ್ಟದಲ್ಲಿ ಆರಂಭಿಸಿದೆ. ಈ ಮೂಲಕ ಪ್ರಾದೇಶಿಕ ಸಂಸ್ಕೃತಿ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ಕೈಗೊಂಡು, ಅಲ್ಲಲ್ಲಿ ಹರಡಿಕೊಂಡಿರುವ ಜಾನಪದ ಜ್ಞಾನವನ್ನು ಅಮೂಲಾಗ್ರವಾಗಿ ಶೋಧಿಸಿ, ಸಂವರ್ಧನೆ ಮಾಡುವ ಬಹು ಮಹತ್ವದ ಹೆಜ್ಜೆಗಳನ್ನು ಇರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

