ತಿಂಗಳಲ್ಲಿ ಇಬ್ಬರು ಪೇದೆ ಆತ್ಮಹತ್ಯೆ
ಕನ್ನಡಪ್ರಭ ವಾರ್ತೆ, ಹಾವೇರಿ, ಮೇ 27
ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಏಪ್ರಿಲ್ ತಿಂಗಳೊಂದರಲ್ಲೇ ಇಬ್ಬರು ಪೇದೆಗಳು ಆತ್ಮಹತ್ಯೆಗೆ ಶರಣಾಗಿದ್ದು, ಅನೇಕ ಸಂಶಯಗಳನ್ನು ಹುಟ್ಟು ಹಾಕಿದೆ.
ಇಲಾಖೆ ಹಿರಿಯ ಅಧಿಕಾರಿಗಳು ಕಿರಿಯ ಸಹದ್ಯೋಗಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯ ಹಾಗೂ ಅಸನೀಯ ವರ್ತನೆಯೇ ಈ ಘಟನೆಗಳಿಗೆ ಕಾರಣ ಎಂಬ ಮಾತುಗಳು ಜಿಲ್ಲಾದ್ಯಂತ ಪುಂಖಾನುಪುಂಖವಾಗಿ ಕೇಳಿಬರಲಾರಂಭಿಸಿದ್ದು, ಜಿಲ್ಲಾ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆಯನ್ನುಂಟು ಮಾಡಿದೆ.
ಇದೇ ತಿಂಗಳ ಅವಧಿಯಲ್ಲೇ ಡಿಸಿಆರ್ಬಿ ವಿಭಾಗದಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿ.ಪಿ. ಗಂಗಾಧರ ಎಂಬ ಪೇದೆ, ಪೊಲೀಸ್ ಉಪ ಅಧೀಕ್ಷಕ ಡಿ.ಜಿ. ನಿಕ್ಕಂ ಅವರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದು, ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸಾರಿ ಹೇಳುವಂತಿದೆ.
ಘಟನೆ-1: ಜಿಲ್ಲೆಯ ತಡಸ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ಗುರುನಾಥ ಗುಡ್ಡಪ್ಪ ಮಿಳ್ಳಿ ಎಂಬುವ ಏ. 6ರಂದು ಬೆಳಗ್ಗೆ 7.45ಕ್ಕೆ ಠಾಣೆಯಲ್ಲೇ 303 ಬಂದೂಕಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಇಡೀ ಪೊಲೀಸ್ ವ್ಯವಸ್ಥೆಯನ್ನೇ ತಲೆಕೆಳಗಾಗಿಸುವಂತೆ ಮಾಡಿತ್ತು.
ಈ ಘಟನೆ ಹಿಂದೆಯೂ ಹಿರಿಯ ಅಧಿಕಾರಿಗಳ ದೌರ್ಜನ್ಯವೇ ಕಾರಣ ಎಂಬ ಆರೋಪಗಳು ಕೇಳಿ ಬಂದವಾದರೂ ನಂತರ ವೈಯಕ್ತಿಕ ಕಾರಣದಿಂದ ಮಿಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವರದಿ ತಯಾರಿಸಿ ಪ್ರಕರಣಕ್ಕೆ ಅಂತ್ಯ ಹಾಡಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಘಟನೆ-2: ಹಂಸಭಾವಿ ಠಾಣೆಯ ಪೇದೆ ಏ. 7ರಂದು ಮಧ್ಯಾಹ್ನ 2.30ರ ಸುಮಾರಿಗೆ ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಇಡಗೋಡ ಗ್ರಾಮದ ಮಾವಿನ ತೋಟದಲ್ಲಿ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣದ ಹಿಂದೆಯೂ ಹಿರಿಯ ಅಧಿಕಾರಿಗಳ ದೌರ್ಜನ್ಯವೇ ಕಾರಣ ಎನ್ನಲಾಗುತ್ತಿತ್ತು.
ಆದರೆ, ನಂತರ ನಡೆದ ಇಲಾಖಾ ವಿಚಾರಣೆ ಸಂದರ್ಭದಲ್ಲಿ ಮೃತನ ಕುಟುಂಬದ ಸದಸ್ಯರಿಂದ ಯಾವುದೇ ರೀತಿಯ ಸಂಶಯವಿಲ್ಲ ಎಂಬ ಹೇಳಿಕೆ ಪಡೆದ ತನಿಖಾಧಿಕಾರಿಗಳು ಈ ಘಟನೆಯನ್ನೂ ಅಲ್ಲಿಗೆ ತಣ್ಣಗಾಗಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.
ಘಟನೆ-3: ಡಿಸಿಆರ್ಬಿ ಅಪರಾಧ ದಾಖಲಾತಿ ವಿಭಾಗದಲ್ಲಿ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿ.ಪಿ. ಗಂಗಾಧರ ಎಂಬ ಪೇದೆ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ರಜೆ ಮಂಜೂರು ಮಾಡುವಂತೆ ಏ. 12ರಂದು ಮಧ್ಯಾಹ್ನ 2ರ ಹೊತ್ತಿಗೆ ಉಪ ಅಧೀಕ್ಷಕ ಡಿ.ಜಿ. ನಿಕ್ಕಂ ಅವರ ಬಳಿ ತೆರಳಿದ್ದರು. ಈ ಸಂದರ್ಭ ಹಿರಿಯ ಅಧಿಕಾರಿ ನಿಕ್ಕಂ, ಸಹದ್ಯೋಗಿಯೊಂದಿಗೆ ಮಾನವೀಯತೆಯಿಂದ ವರ್ತಿಸದೆ ಪೇದೆಯನ್ನು ಏಕವಚನದಲ್ಲಿ ಮೂದಲಿಸಿದ್ದಲ್ಲದೆ, ಗಂಗಾಧರನ ಮೇಲೆ ಹಲ್ಲೆ ನಡೆಸಿ ಅಧಿಕಾರದ ದರ್ಪ ಮೆರೆದಿದ್ದಾರೆ ಎಂದು ಜಿಲ್ಲಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಧಿಕಾರಿಯಿಂದ ತೀವ್ರ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೊಳಗಾದ ಪೇದೆ ಜಿ.ಪಿ. ಗಂಗಾಧರ, ನಿಕ್ಕಂ ಅವರ ವಿರುದ್ಧ ಠಾಣೆಯಲ್ಲಿ ದೂರು ನೀಡಲು ಮುಂದಾದರೂ ಹಿರಿಯ ಅಧಿಕಾರಿ ಎಂಬ ಏಕೈಕ ಕಾರಣದಿಂದ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳದೆ ಬಚಾವ್ ಮಾಡಲು ಯತ್ನಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.ಉಪ ಅಧೀಕ್ಷಕ ಡಿ.ಜಿ. ನಿಕ್ಕಂ ಅವರಿಂದ ತಮಗಾದ ಅನ್ಯಾಯದ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕು ಹಾಗೂ ಅವರ ಮೇಲೆ ಶಿಸ್ತು ಕ್ರಮಕೈಗೊಳ್ಳಬೇಕೆಂದು ಪೊಲೀಸ್ ಮಹಾನಿರೀಕ್ಷಕರಿಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೌರ್ಜನ್ಯಕ್ಕೊಳಗಾದ ಪೇದೆ ಗಂಗಾಧರ 'ಕನ್ನಡಪ್ರಭ'ದೊಂದಿಗೆ ಮಾತನಾಡಿ ಆಂತಕ ವ್ಯಕ್ತಪಡಿಸಿದರು.
ಸಾಕ್ಷಿಗಿಲ್ಲ ಕಿಮ್ಮತ್ತು: ಪೊಲೀಸ್ ಇಲಾಖೆ ಯಾವುದೇ ಪ್ರಕರಣ ಕೈಗೆತ್ತಿಕೊಂಡರೂ ಮೊದಲು ಸಂಗ್ರಹಿಸುವುದು ಸಾಕ್ಷಿಯನ್ನೇ. ಡಿಎಸ್ಪಿ ನಿಕ್ಕಂ ಅವರಿಂದ ಗಂಗಾಧರ ಮೇಲೆ ಆಗಿರುವ ಅನ್ಯಾಯಕ್ಕೆ ಸಂಬಂಧಿಸಿದಂತೆ ಅನೇಕ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಹ ಸಾಕ್ಷಿ ನೀಡಲು ಮುಂದೆ ಬಂದಿದ್ದರೂ ಅಧಿಕಾರಿ ನಿಕ್ಕಂ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕ್ರಮಕ್ಕೆ ಮುಂದಾಗದೆ ಇರುವುದು ಹಿರಿಯ ಅಧಿಕಾರಿ ಹೊಂದಿರುವ ಪ್ರಭಾವಕ್ಕೆ ಸಾಕ್ಷಿಯಾಗಿದೆ. ಜನಸಾಮಾನ್ಯರ ಮೇಲೆ ನಡೆಯುವ ದೌರ್ಜನ್ಯ ತಡೆಯುವ ಮಹತ್ತರ ಸ್ಥಾನದಲ್ಲಿರುವ ಆರಕ್ಷಕರೆ ತಮ್ಮ ಕಿರಿಯ ಸಹದ್ಯೋಗಿಗಳ ಮೇಲೆ ದೌರ್ಜನ್ಯ ನಡೆಸುತ್ತಿರುವುದು ನಿಜಕ್ಕೂ ಇಡೀ ಪೊಲೀಸ್ ವ್ಯವಸ್ಥೆಯನ್ನೇ ತಲೆಕೆಳಗಾಗಿಸುವಂತೆ ಮಾಡಿದೆ.
ಕೆಲ ಅಧಿಕಾರಿಗಳ ವರ್ತನೆಯಿಂದ ಇಡೀ ಜಿಲ್ಲಾ ಪೊಲೀಸ್ ವ್ಯವಸ್ಥೆಗೆ ಕಪ್ಪುಚುಕ್ಕೆ ಅಂಟಿಕೊಳ್ಳುವಂತಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಥೋರ್ ಇಂತಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವರೆ?
- ಬಿ.ಕೆ. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

