100 ಹಾಸಿಗೆ ಆಸ್ಪತ್ರೆಗೆ ಶೀಘ್ರ ಭೂಮಿಪೂಜೆ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮೇ 27
ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ರು. 5 ಕೋಟಿ ವೆಚ್ಚದಲ್ಲಿ 100 ಹಾಸಿಗೆ ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಶೀಘ್ರ ಭೂಮಿಪೂಜೆ ನೆರವೇರಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಜರುಗಿದ ವೈದ್ಯಕೀಯ ಸಿಬ್ಬಂದಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ತಾಲೂಕಿನ ಬಡ ಜನತೆಗೆ ಆರೋಗ್ಯ ಕುರಿತಾದ ಎಲ್ಲ ಸೌಲಭ್ಯ ಲಭಿಸುವಂತೆ ನೋಡಿಕೊಳ್ಳಲಾಗುವುದು. ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಸ್ಟ್ಯಾಂಡರ್ಡ್ ಇನ್ಫಾಟೆಕ್ ಇಂಡಿಯಾ ಪ್ರೈ.ಲಿ. ಕಂಪನಿಯವರು ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿದೆ ಎಂದ ಅವರು, ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದರು.
ಹೊಸ ಆಂಬ್ಯೂಲೆನ್ಸ್: ಶಾಸಕರ ಅನುದಾನದಲ್ಲಿ ಬ್ಯಾಡಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೊಸದಾಗಿ ವಿನ್ಯಾಸಗೊಳಿಸಿರುವ ಆಂಬ್ಯೂಲೆನ್ಸ್ ನೀಡುವುದಾಗಿ ಶಾಸಕ ಶಿವಣ್ಣನವರ ಭರವಸೆ ನೀಡಿದರು. ಈಗಿರುವ ಆಂಬ್ಯೂಲೆನ್ಸ್ ಸುಮಾರು 3 ಲಕ್ಷ ಕಿ.ಮೀ. ಚಲಿಸಿದ್ದು, ಯಾವುದೇ ಸಂದರ್ಭದಲ್ಲಿ ದುರಸ್ತಾಗಿ ನಿಲ್ಲುವ ಭೀತಿಯಿದೆ. ಅಗತ್ಯ ಸಂದರ್ಭಗಳಲ್ಲಿ ತುರ್ತು ವಾಹನದ ಉಪಯೋಗ ಸಾರ್ವಜನಿಕರಿಗೆ ಆಗಬೇಕೆಂಬುದು ಸರ್ಕಾರದ ಉದ್ದೇಶ. ಹೀಗಾಗಿ ಹೊಸ ಆಂಬ್ಯೂಲೆನ್ಸ್ನ್ನು ಒದಗಿಸಿಕೊಡಲು ಇಚ್ಚಿಸಿದ್ದಾಗಿ ತಿಳಿಸಿದರು.
ಸಿಬ್ಬಂದಿ ವಸತಿ ಗೃಹ: ಉತ್ತಮ ತಜ್ಞ ವೈದ್ಯರನ್ನು ಹೊಂದಿರುವ ಸಮುದಾಯ ಕೇಂದ್ರದಲ್ಲಿ ವೈದ್ಯರು ವಾಸ ಮಾಡಲು ವಸತಿ ಗೃಹಗಳಲ್ಲದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಶೀಘ್ರ ಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ವಸತಿ ಗೃಹಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದರು.
ಸಿಬ್ಬಂದಿ ಕೊರತೆ: ಆರೋಗ್ಯ ಕೇಂದ್ರದಲ್ಲಿ 9 ಜನ ತಜ್ಞ ವೈದ್ಯರಿದ್ದರೂ ಚಿಕಿತ್ಸೆ ನೀಡಲು ಅಗತ್ಯ ಸಲಕರಣೆ ಸೇರಿದಂತೆ ಅವರ ಜತೆ ಕೆಲಸ ಮಾಡಲು ಸ್ಪಾಫ್ ನರ್ಸ್ಗಳಿಲ್ಲ. ಕಳೆದ ಹಲವಾರು ವರ್ಷಗಳಿಂದ ಗ್ರುಪ್ ಡಿ ಸೇರಿದಂತೆ ಇನ್ನಿತರ ಸಿಬ್ಬಂದಿ ಕೊರತೆಯಿದೆ. ಹೀಗಾಗಿ ಇರುವಷ್ಟು ಜನರೇ ಹಗಲಿರುಳೆನ್ನದೇ ಕೆಲಸ ಮಾಡಬೇಕಾಗಿದೆ ಎಂದರು.
ಔಷಧಿ ಮಂಜೂರಾಗಲಿ: ಡಾ ಸತ್ಯಮೂರ್ತಿ ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿತ್ಯ ಸುಮಾರು 250ಕ್ಕೂ ಹೆಚ್ಚು ಹೊರ ರೋಗಿಗಳು ಬಂದು ಹೋಗುತ್ತಾರೆ. ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಲಭ್ಯವಿರುವ ಔಷಧಿಗಳನ್ನು ಉಚಿತ ವಿತರಿಸಲು ಕ್ರಮ ತೆಗೆದುಕೊಂಡಿದೆ ಎಂದರು. ಆದರೆ, ಲಭ್ಯವಿಲ್ಲದ ಔಷಧಿಗಳನ್ನು ಖಾಸಗಿ ಔಷಧಿ ಅಂಗಡಿಗಳಲ್ಲಿ ಪಡೆಯುವಂತೆ ಸೂಚಿಸಿದ ಸಂದರ್ಭಗಳಲ್ಲಿ ಔಷಧಿಯಿದ್ದರೂ ನೀಡುತ್ತಿಲ್ಲ ಎಂಬುದಾಗಿ ರೋಗಿಗಳು ತಕರಾರು ಮಾಡುವ ಮೂಲಕ ವೈದ್ಯರ ಜತೆ ವಾಗ್ವಾದ ನಡೆಸಿದ ಉದಾಹರಣೆಗಳು ನಿತ್ಯ ಕಾಣಸಿಗುತ್ತವೆ ಎಂದರು.
ಎಸ್.ಆರ್. ಪಾಟೀಲ, ಹುಸೇನಸಾಬ್ ದೊಡ್ಮನಿ, ರಮೇಶ ಸುತ್ತಕೋಟಿ, ಡಾ ಶ್ರೀನಿವಾಸ ಡಾ ಸುಧೀಂದ್ರ, ಚಂದ್ರಕಾಂತ, ನೀಲಕಂಠಸ್ವಾಮಿ, ಪುಷ್ಪಾ ಬಣಗಾರ, ಅಶೋಕ, ಅಬಿದ್ ಕಲ್ಮನಿ, ಇನ್ನಿತರರಿದ್ದರು.
ದುರಸ್ತಿಗೆ ಹಣ ನೀಡಿ
ತಾಲೂಕು ಆಸ್ಪತ್ರೆ ಕಟ್ಟಡ ಸಂಪೂರ್ಣ ದುಸ್ಥಿತಿಯಲ್ಲಿದೆ. ಮಳೆಗಾಲ ಸಮಯ ಎಲ್ಲೆಂದರಲ್ಲಿ ಸೋರುತ್ತಿದ್ದು, ಸಿಬ್ಬಂದಿ, ರೋಗಿಗಳೂ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅಲ್ಪಸ್ವಲ್ಪ ರಿಪೇರಿಗೂ ಅನುದಾನ ನೀಡುತ್ತಿಲ್ಲ. ಪ್ರಸಕ್ತ ಮಳೆಗಾಲ ನಿಭಾಯಿಸಲು ದುರಸ್ತಿಗೆ ಅನುದಾನ ಅವಶ್ಯವಾಗಿದೆ.
ಡಾ ಪುಟ್ಟರಾಜ,
ತಾಲೂಕು ಆರೋಗ್ಯಾಧಿಕಾರಿ
ಸೇವಾ ಮನೋಭಾವವಿರಲಿ
ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ಹೋಗುವ ಬಡ ರೋಗಿಗಳ ಬಗ್ಗೆ ನಿರ್ಲಕ್ಷಿಸುವುದನ್ನು ಸಹಿಸಲು ಸಾಧ್ಯವಿಲ್ಲ. ರೋಗಿಗಳಿಗೆ ಕುಂಟು ನೆಪಗಳನ್ನು ಹೇಳದೇ ಸಮರ್ಪಕ ಚಿಕಿತ್ಸೆ ನೀಡಿರಿ. ವೈದ್ಯಕೀಯ ಸೇವೆ ಮಹತ್ವದ್ದು, ಮಾನವೀಯತೆ ಹಿನ್ನೆಲೆಯಲ್ಲಿ ಉಪಚರಿಸಿ, ಸೇವಾಮನೋಭಾವನೆ ತೋರುವುದು ಅಗತ್ಯ.
ಬಸವರಾಜ ಶಿವಣ್ಣನವರ,
ಶಾಸಕರು, ಬ್ಯಾಡಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

