ಹಾವೇರಿ

ಬೆಳಕಿನ ಹಬ್ಬಕ್ಕೆ ಬೆಲೆಯೇರಿಕೆ ಬಿಸಿ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ನ. 3
ಬೆಲೆ ಏರಿಕೆ ಬಿಸಿ ದೀಪಾವಳಿ ಸಂಭ್ರಮಾಚರಣೆ ಮೇಲೆ ಬೀರಿದ್ದು, ಸಡಗರ-ಸಂತಸದಿಂದ ದೀಪಗಳ ಹಬ್ಬ ಆಚರಿಸಬೇಕೆಂಬ ಬಯಕೆ ಹೊಂದಿದ್ದ ಜನತೆಯಲ್ಲಿ ನಿರಾಶೆ ಮೂಡಿಸಿದೆ.
ದಿನ ನಿತ್ಯದ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದು ಒಂದೆಡೆಯಾದರೆ, ಮೇಣಬತ್ತಿ ದೀಪ, ಹೂವು, ಬಾಳೆಕಂಬ, ಕಬ್ಬು, ಹಣ್ಣು ಹಂಪಲುಗಳ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿದೆ. ಇದು ಶ್ರೀಸಾಮಾನ್ಯರಲ್ಲಿ ಹಬ್ಬ ಆಚರಣೆ ಉತ್ಸಾಹ ಕಳೆಗುಂದಲು ಪ್ರಮುಖ ಕಾರಣವಾಗಿತ್ತು.
ದೀಪಾವಳಿ ಅಂಗವಾಗಿ ಲಕ್ಷ್ಮಿ ಹಾಗೂ ಸರಸ್ವತಿ ದೇವಿಯರನ್ನು ಮನೆ, ಅಂಗಡಿಗಳಲ್ಲಿ ವಿಶೇಷವಾಗಿ ಸಿಂಗರಿಸಿ ಬಂಧು-ಬಳಗದವರನ್ನು ಪೂಜಾ ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ ಸಿಹಿ ತಿನಿಸುಗಳನ್ನು ವಿತರಿಸುವ ಸಂಪ್ರಾಯವಿದೆ. ಆದರೆ, ಈ ಬಾರಿ ಬಂಧು-ಬಳಗದವರನ್ನು ಆಹ್ವಾನಿಸಲು ಸಂಬಂಧಿಕರು ಹಿಂದೇಟು ಹಾಕುವಂತಹ ಪರಿಸ್ಥಿತಿ ಇದೆ.
ಶಕ್ತ್ಯನುಸಾರ...
ವರ್ಷಕ್ಕೊಮ್ಮೆ ಬರುವ ದೀಪಾವಳಿಯನ್ನು ಅದ್ಧೂರಿಯಾಗಿ ಅಲ್ಲದಿದ್ದರೂ ಶಕ್ತ್ಯನುಸಾರ ಆಚರಿಸಲೇಬೇಕೆಂದು ಶ್ರೀಸಾಮಾನ್ಯರು ನಿರ್ಧರಿಸಿದ್ದಾರೆ. ಹಬ್ಬದ ಖರೀದಿಗಾಗಿ ಮಾರುಕಟ್ಟೆಗೆ ಆಗಮಿಸಿದ್ದ ಸೈಕಲ್ ಶಾಪೊಂದರ ಮಾಲೀಕ ಬಸವರಾಜ ಗರಡಿಮನಿ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಬೆಲೆಗಳು ಅಷ್ಟೇ ಏರಿದರೂ ದೀಪಾವಳಿ ಹಬ್ಬ ಆಚರಿಸಲೇಬೇಕು. ಶ್ರೀಮಂತರು ಕೆಜಿಗಟ್ಟಲೆ ಹಣ್ಣು ಖರೀದಿಸಿ ದೇವಿಯ ಪೂಜೆ ಮಾಡುತ್ತಾರೆ. ಅದು ನಮ್ಮಿಂದ ಸಾಧ್ಯವೇ? ಐದು ಹಣ್ಣುಗಳನ್ನು ಇಟ್ಟಾದರೂ ಪೂಜೆ ಮಾಡಿ ದೇವಿ ಕೃಪೆಗೆ ಪಾತ್ರರಾಗಲು ಸಿದ್ಧರಾಗಿದ್ದೇವೆ ಎಂದರು.
ಬೆಲೆ ಭಾರಿ ಏರಿಕೆ
ತೋರಣ, ಬಾಳೆಕಂಬ, ಸೇವಂತಿಗೆ ಹಾಗೂ ಚಂಡು ಹೂವುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದರೆ, ಕಬ್ಬಿನ ಧಾರಣೆಯೂ ಗ್ರಾಹಕರಿಗೆ ಕಹಿ ಅನುಭವ ನೀಡುವಂತಿತ್ತು. ಬಾಳೆಕಂಬ ಜೋಡಿಗೆ ರು. 25-50ಕ್ಕೆ ಮಾರಾಟವಾಗುತ್ತಿದ್ದರೆ, ಸೇವಂತಿಗೆ ಹಾಗೂ ಚಂಡೆ ಹೂವುಗಳ ಧಾರಣೆ ಕೆಜಿಗೆ ರು. 150-200 ಇತ್ತು. ಹೂವುಗಳ ಸಹವಾಸವೇ ಬೇಡ, ಆಲಂಕಾರಿಕ ವಸ್ತುಗಳನ್ನು ಕೊಳ್ಳೋಣ ಎಂದರೆ, ಅವುಗಳ ಬೆಲೆಯೂ ದುಪ್ಪಟ್ಟಾಗಿತ್ತು.
ಮಧ್ಯವರ್ತಿಗಳೇ...
ಹಣ್ಣು, ಹೂವು, ಬಾಳೆಕಂಬ ಹಾಗೂ ಕಬ್ಬನ್ನು ನೇರವಾಗಿ ರೈತರೇ ಮಾರುಕಟ್ಟೆಗೆ ತಂದು ಮಾರಾಟಕ್ಕೆ ಮುಂದಾಗಿದ್ದರೆ ಬೆಲೆ ಕೊಂಚ ಕಮ್ಮಿ ಮಾಡಿ ಮಾರಾಟ ಮಾಡುತ್ತಿದ್ದರು. ಆದರೆ, ಈ ಬಾರಿ ಮಧ್ಯವರ್ತಿಗಳೇ ಈ ಎಲ್ಲ ವಸ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದರಿಂದ ಬೆಲೆ ಮತ್ತಷ್ಟು ಹೆಚ್ಚಳವಾಗಲು ಕಾರಣವಾಗಿತ್ತು.
ಜನಸಂದಣಿ ಹೆಚ್ಚು
ದೀಪಾವಳಿ ಹಬ್ಬದ ವ್ಯವಹಾರದ ಕುರಿತು ಮಾತನಾಡಿದ ಕಿರುಕುಳ ವ್ಯಾಪಾರಸ್ಥ ಎಂ.ಎನ್. ಮೇವುಂಡಿ, ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ ಕಂಡು ಬರುತ್ತಿದೆ. ಆದರೆ, ವ್ಯವಹಾರ ಮಾತ್ರ ಕಳೆದ ಬಾರಿಗಿಂತಲೂ ತೀರಾ ಕಮ್ಮಿಯಾಗಿದೆ. ಬೆಲೆ ಹೆಚ್ಚಳದ ಪರಿಣಾಮ ಗ್ರಾಹಕರು ವಸ್ತುಗಳನ್ನು ಖರೀದಿಸುವ ಮೊದಲು ಹತ್ತು ಬಾರಿ ಯೋಚಿಸುತ್ತಿದ್ದಾರೆ. ಕೆಲ ಗ್ರಾಹಕರಂತೂ 15 ದಿನಗಳ ಹಿಂದೆ ಇದ್ದ ಬೆಲೆ ಏಕಾಏಕಿ ಹೇಗೆ ಹೆಚ್ಚಾಗುತ್ತದೆ ಎಂದು ವ್ಯಾಪಾರಸ್ಥರೊಂದಿಗೆ ಮಾತಿನ ಚಕಮಕಿಗೆ ಇಳಿಯುತ್ತಿದ್ದಾರೆ. ಈ ಎಲ್ಲ ಸಂಗತಿಗಳು ವ್ಯಾಪಾರದ ಮೇಲೆ ಪರಿಣಾಮ ಬೀರಿವೆ ಎಂದು ಹೇಳಿದರು.
ರಸ್ತೆಯೇ ಮಾರುಕಟ್ಟೆ
ಹಾವೇರಿ ನಗರದ ಜನನಿಬಿಡ ಪ್ರದೇಶಗಳು ದೀಪಾವಳಿ ಹಬ್ಬದ ಅಂಗವಾಗಿ ಮಾರುಕಟ್ಟೆಗಳಾಗಿ ಪರಿಣಮಿಸಿದ್ದವು. ಇದು ವಾಹನ ಸಂಚಾರಕ್ಕೆ ಕಿರಿಕಿರಿಯನ್ನುಂಟು ಮಾಡಿತ್ತು. ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಲು ಪೊಲೀಸರು ಹೆಣಗಾಡುತ್ತಿರುವುದು ಕಂಡು ಬಂದಿತು.
ಗಾಂಧಿ ಮಾರುಕಟ್ಟೆ, ಜೆ.ಪಿ. ವೃತ್ತ, ಸಿದ್ದಪ್ಪನ ವೃತ್ತದಲ್ಲಿ ಹಬ್ಬದ ಅಂಗವಾಗಿ ಬಾಳೆಕಂಬ, ಕಬ್ಬು, ತೋರಣ ಹಾಗೂ ಹೂವುಗಳನ್ನು ಮಾರಾಟ ಮಾಡುವವರು ಅಕ್ರಮಿಸಿದ್ದರಿಂದ ಪಾದಚಾರಿಗಳಿಗೂ ಸಾಕಷ್ಟು ಕಿರಿಕಿರಿ ಮಾಡಿತು.


-ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.