11.50 ಕೋಟಿ ಮಕ್ಕಳಿಗೆ ಬಿಸಿಯೂಟ ಭಾಗ್ಯ: ಖಾಜಿ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ನ. 3
ಮಕ್ಕಳ ಹಾಜರಾತಿ, ಗುಣಾತ್ಮಕ ಶಿಕ್ಷಣಕ್ಕಾಗಿ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಯತ್ತ ಆಕರ್ಷಿಸಲು ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿದ್ದು, ದೇಶಾದ್ಯಂತ 11.50 ಕೋಟಿ ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಅಕ್ಷರ ದಾಸೋಹ ಕಾರ್ಯಕ್ರಮ ಶಿಕ್ಷಣಾಧಿಕಾರಿ ಝಡ್.ಎಂ. ಖಾಜಿ ತಿಳಿಸಿದರು.
ಪಟ್ಟಣದ ಹಿರೇಕೆರೂರು ತಾಲೂಕು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಆಶ್ರಯದಲ್ಲಿ ನಿರ್ಮಿಸಿದ ಬಿಸಿಯೂಟ ದಾಸ್ತಾನು ಮತ್ತು ಅಡುಗೆ ಕೇಂದ್ರಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರು. 2500 ಕೋಟಿ ವೆಚ್ಚದಲ್ಲಿ ಬಿಸಿಯೂಟ, ಕ್ಷೀರಭಾಗ್ಯ ಮುಂತಾದ ಯೋಜನೆಗಳು ಜಾರಿ ಬಂದಿದ್ದು, ಬಡವರ ಮಕ್ಕಳಿಗೆ ಅನುಕೂಲವಾಗಿದೆ. ಬಿಸಿಯೂಟವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವಂತೆ ಸರ್ಕಾರ ಆದೇಶಿಸಿದ್ದರಿಂದ ಊಟಕ್ಕಾಗಿ ಗೋದಿ ವಿತರಿಸಲಾಗುವುದು. ಇದರಲ್ಲಿ ಪಾಯಸ, ಉಪ್ಪಿಟ್ಟು ಮಾಡಿಕೊಡಲಾಗುವುದು. ಯೋಜನೆ ಯಶಸ್ವಿಯಾಗಲು ಶಿಕ್ಷಕರು ಸಹಕರಿಸಬೇಕು. ಜಿಲ್ಲೆಯಲ್ಲಿ 342 ಅಡುಗೆ ಕೊಠಡಿಗಳಿಗೆ ರು. 9.80 ಲಕ್ಷ ಹಣ ಮಂಜೂರಾಗಿದೆ. ಹಿರೇಕೆರೂರಿನ ಸಿಇಎಸ್ ವಿದ್ಯಾಸಂಸ್ಥೆ ಇನ್ನಷ್ಟು ಹಣ ಖರ್ಚು ಮಾಡಿ, ಅಚ್ಚುಕಟ್ಟಾಗಿ ಅಡುಗೆ ಕೊಠಡಿಗಳನ್ನು ನಿರ್ಮಿಸಿದೆ ಎಂದು ಶ್ಲಾಘಿಸಿದರು.
ಅನುದಾನ ಬಳಸದೆ ಅಭಿವೃದ್ಧಿಯಿಲ್ಲ
ವಿಧಾನಸಭೆ ಮಾಜಿ ಅಧ್ಯಕ್ಷ ಬಿ.ಜಿ. ಬಣಕಾರ ಕಾರ್ಯಕ್ರಮ ಉದ್ಘಾಟಿಸಿ, ಸರ್ಕಾರ ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳಿಗಾಗಿ ಲೇಖಾನುದಾನದಂತೆ ರು. 97986 ಕೋಟಿ ವೆಚ್ಚ ಮಾಡಲು ಉದ್ದೇಶಿಸಿದೆ. ಈವರೆಗೆ ಖರ್ಚಾಗಿದ್ದು ರು. 32612 ಕೋಟಿ ಮಾತ್ರ. ನಿಗದಿಪಡಿಸಿದ ಹಣ ವಿನಿಯೋಗ ಮಾಡದೇ ಇರುವುದು ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣ ಎಂದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಪ್ರತಿ ವರ್ಷ ರು. 15 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜತೆಗೆ ಬಿಸಿಯೂಟವನ್ನೂ ನೀಡುತ್ತಿರುವುದು ಹೆಮ್ಮೆಯ ಸಂಗತಿ. ಶಿಕ್ಷಣದ ವ್ಯಾಪಾರೀಕರಣ ತಪ್ಪಿಸಲು ಸಹಕಾರಿ ತತ್ವದಲ್ಲಿ ನಡೆಯುತ್ತಿರುವ ಈ ಸಂಸ್ಥೆ ಉತ್ತಮ ಮಾದರಿಯಾಗಿದೆ ಎಂದರಲ್ಲದೆ, ಬಿಸಿಯೂಟದ ಅಡುಗೆ ಸಿಬ್ಬಂದಿ ವೇತನ ಕೇವಲ ರು. 1000 ಇದ್ದು, ಹೆಚ್ಚಿಸುವಂತೆ ವಿಧಾನಸಭೆಯಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.
ಶಿಕ್ಷಣ ಮಗುವಿನ ಹಕ್ಕು
ತಹಸೀಲ್ದಾರ್ ಶಕುಂತಲಾ ಚೌಗಲೆ ಮಾತನಾಡಿ, ಶಿಕ್ಷಣ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು. 6ರಿಂದ 16 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವುದು ಸರ್ಕಾರದ ಗುರಿ. ಮಹತ್ವಾಕಾಂಕ್ಷಿ ಯೋಜನೆಗಳ ಸದುಪಯೋಗದಲ್ಲಿ ಸಮುದಾಯದ ಪಾತ್ರ ಅಮೋಘವಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಪ್ರಾಸ್ತಾವಿಕ ಮಾತನಾಡಿ, 1952ರಲ್ಲಿ 7 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಸಂಸ್ಥೆಯಲ್ಲಿ ಈಗ 4 ಸಾವಿರ ಮಕ್ಕಳಿದ್ದಾರೆ. ಸ್ನಾತಕ ಪದವಿಯವರೆಗೂ ಶಿಕ್ಷಣ ಸೌಲಭ್ಯವಿದೆ ಎಂದರು.
ಎಸ್.ಬಿ. ತಿಪ್ಪಣ್ಣನವರ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ರೇಣುಕಮ್ಮ ಚಲುವಾದಿ, ಉಪಾಧ್ಯಕ್ಷೆ ಅನ್ನಪೂರ್ಣಾ ಗಾಳಿ, ಪಪಂ ಅಧ್ಯಕ್ಷೆ ಶಿವಲೀಲಾ ರಂಗಕ್ಕನವರ, ತಾಪಂ ಇಒ ಡಿ.ಎಂ. ಜನವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಆನಂದ, ಎಲ್.ಬಿ. ತೆಂಬಗ, ಅಕ್ಷರ ದಾಸೋಹ ಅಧಿಕಾರಿ ಟಿ.ಆರ್. ಮೂಡಿ, ಎಂ.ವಿ. ಹೊಂಬರಡಿ, ಪ್ರಾಚಾರ್ಯ ಎಸ್.ಬಿ. ಚೆನ್ನಗೌಡ್ರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

