ದೇವಗಿರಿ ರಸ್ತೆಗೆ ದೇವರೇ ದಿಕ್ಕು!
ಕನ್ನಡಪ್ರಭ ವಾರ್ತೆ, ಹಾವೇರಿ, ನ. 4
ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾದಂತೆ ಎಂಬ ನಾಣ್ಣುಡಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುವ ದೇವಗಿರಿ ರಸ್ತೆಗೆ ಹೇಳಿ ಮಾಡಿಸಿದಂತಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ಲಕ್ಕಮಾಪುರ ಕ್ರಾಸ್ದಿಂದ ಅನತಿ ದೂರದಲ್ಲಿರುವ ಈ ರಸ್ತೆ ಅವ್ಯವಸ್ಥೆ ಆಗರವಾಗಿದ್ದರೂ ನಗರಸಭೆ ಅಥವಾ ಲೋಕೋಪಯೋಗಿ ಇಲಾಖೆ ದುರಸ್ತಿ ಕಾರ್ಯಕ್ಕೆ ಮುಂದಾಗದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ರಸ್ತೆ ಮಧ್ಯದಲ್ಲೇ 24 ತಾಸು ಕೊಳಚೆ ನೀರು ಹರಿಯುತ್ತ ಹಂದಿ ಹಾಗೂ ಬಿಡಾಡಿ ನಾಯಿಗಳಿಗೆ ಆಶ್ರಯ ತಾಣವಾಗಿದೆ. ವಿದ್ಯುತ್ ಸಂಪರ್ಕವೂ ಆಗಾಗ ಕಡಿತಗೊಳ್ಳುವ ಹಾವೇರಿ ನಗರ ಪ್ರದೇಶದ ಈ ರಸ್ತೆಯಲ್ಲಿ ರಾತ್ರಿ ಮನೆಗೆ ತೆರಳುವ ಅದೆಷ್ಟೋ ಜನ ದಾರಿ ಕಾಣದೆ ಕೊಳಚೆ ನೀರಿನಲ್ಲಿ ಬಿದ್ದು ಗಾಯಗೊಂಡಿದ್ದಾರೆ.
ಅತಿ ಗಣ್ಯರ ದಾರಿ: ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಲು ಹಾವೇರಿಗೆ ಆಗಮಿಸುವ ಸಚಿವರು, ಶಾಸಕರು ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಿಸಿ ಲಕಮಾಪುರ ಬಳಿಯಿರುವ ತಿರುವಿನಿಂದ ದೇವಗಿರಿ ರಸ್ತೆ ಮೂಲಕ ಡಿಸಿ ಕಚೇರಿಗೆ ತೆರಳುತ್ತಾರೆ.
ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಲು ಹತ್ತಿರದ ದಾರಿಯಾಗಿರುವ ದೇವಗಿರಿ ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದ್ದರೂ ಅದರ ಗಬ್ಬು ವಾಸನೆ ಅಥವಾ ಜನರಿಗೆ ಆಗುತ್ತಿರುವ ತೊಂದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ಬಾರದೇ ಇರುವುದು ನಿಜಕ್ಕೂ ವಿರ್ಪಯಾಸದ ಸಂಗತಿಯೇ ಸರಿ.
ಯಕ್ಷಪ್ರಶ್ನೆ: ಡಿಸಿ ಕಚೇರಿಗೆ ನೇರ ಸಂಪರ್ಕ ಕಲ್ಪಿಸುವ ದೇವಗಿರಿ ರಸ್ತೆ ಯಾರ ಸರಹದ್ದಿಗೆ ಬರುತ್ತಿದೆ ಎಂಬುದೇ ಯಕ್ಷಪ್ರಶ್ನೆ. ನಗರಸಭೆ ಅಧಿಕಾರಿಗಳು ದೇವಗಿರಿ ರಸ್ತೆ ತಮ್ಮ ಸರಹದ್ದಿಗೆ ಬರುವುದಿಲ್ಲ ಎಂದು ಪ್ರತಿಪಾದಿಸುತ್ತಿದ್ದರೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ರಸ್ತೆ ತಮಗೆ ಸೇರಿದ್ದಲ್ಲ ಎಂಬ ವಾದ ಮಂಡಿಸುತ್ತಿದ್ದಾರೆ. ಈ ಎರಡೂ ಇಲಾಖೆಗಳ ಅನಾದರದ ಪರಿಣಾಮ ಶ್ರೀಸಾಮಾನ್ಯರು ಅನುಭವಿಸುವಂತಾಗಿದೆ. ರಸ್ತೆ ಬದಿಯ ಗಟಾರವನ್ನಾದರೂ ದುರಸ್ತಿ ಪಡಿಸುವಂತೆ ಸ್ಥಳೀಯರು ನಗರಸಭೆಗೆ ಹಲವಾರು ಬಾರಿ ವಿನಂತಿಸಿದ್ದರೂ ಪ್ರಯೋಜನವಾಗಿಲ್ಲ.
ಸಾಂಕ್ರಾಮಿಕ ರೋಗ...
ಮಳೆಗಾಲವಿರಲಿ, ಬೇಸಿಗೆಯಿರಲಿ ಈ ರಸ್ತೆಯಲ್ಲಿ ಗಟಾರದ ನೀರು ವರ್ಷಪೂರ್ತಿ ಹರಿಯುತ್ತಲೇ ಇರುತ್ತದೆ. ಮಳೆಗಾಲದ ಸಂದರ್ಭದಲ್ಲಿ ದ್ವಿಚಕ್ರವಾಹನ ಸವಾರರು ರಸ್ತೆ ಮಧ್ಯದಲ್ಲಿ ಚರಂಡಿ ನೀರು ಹರಿಯುತ್ತಿದೆ ಎಂಬುದನ್ನು ತಿಳಿಯದೆ ದೇವಗಿರಿ ರಸ್ತೆಯಲ್ಲಿ ಬಿದ್ದು ಮೂಳೆ ಮುರಿದುಕೊಂಡಿದ್ದಾರೆ. ಆದರೂ ಅಧಿಕಾರಿಗಳು ದುರಸ್ತಿ ಬಗ್ಗೆ ಗಮನ ಹರಿಸುತ್ತಿಲ್ಲ ಎಂದರೆ ಸಾರ್ವಜನಿಕರ ಸುರಕ್ಷತೆ ಬಗ್ಗೆ ಅವರಿಗೆಷ್ಟು ಕಾಳಜಿ ಇದೆ ಎಂದು ಗೊತ್ತಾಗುತ್ತಿದೆ.
ಅಂಕು-ಡೊಂಕು: ಡಿಸಿ ಕಚೇರಿಗೆ ತೆರಳುವ ದೇವಗಿರಿ ರಸ್ತೆಯಲ್ಲಿ ಮೆಟಲಿಂಗ್ ಕೆಲಸ ಮುಗಿದು ವರ್ಷಗಳೇ ಕಳೆದಿವೆ. ಆದರೂ ಡಾಂಬರೀಕರಣ ಏಕೆ ಆಗಿಲ್ಲ ಎಂಬುದು ಗೊತ್ತಿಲ್ಲ. ಚಿಣ್ಣರು, ಮಹಿಳೆಯರು ಹಾಗೂ ವಯೋವೃದ್ಧರು ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ದೇವಗಿರಿ ರಸ್ತೆ ಮೂಲಕ ಪ್ರಯಾಣಿಸುತ್ತಾರೆ. ವಿದ್ಯಾರ್ಥಿಗಳೂ ಈ ಒಳ ಮಾರ್ಗದಿಂದಲೇ ಶಾಲೆಗಳಿಗೆ ತೆರಳುತ್ತಾರೆ. ಇವರೆಲ್ಲ ದೇವಗಿರಿ ಬಳಿ ಹರಿಯುವ ಗಟಾರ ನೀರಿನಲ್ಲಿ ಸಾಗುವಾಗೆಲ್ಲ ಆಡಳಿತ ಯಂತ್ರವನ್ನು ಶಪಿಸುತ್ತಾರೆ.
ಜಿಲ್ಲಾಧಿಕಾರಿಯಾಗಿ ಪಾಂಡುರಂಗ ನಾಯಕ ಜನರ ಸಮಸ್ಯೆಗಳಿಗೆ ಕಿವಿಗೊಡುತ್ತ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಕಚೇರಿಗೆ ತೆರಳುವ ರಸ್ತೆಯ ಈ ದುಸ್ಥಿತಿ ಬಗ್ಗೆ ಗಮನ ಹರಿಸಿ ಸುಧಾರಣೆಗೆ ಕ್ರಮ ಕೈಗೊಳ್ಳುವರೇ ಎಂಬ ನಿರೀಕ್ಷೆ ಜನರಲ್ಲಿದೆ. ರಸ್ತೆ ನಗರಸಭೆಗೆ ಸೇರಿದ್ದೋ ಅಥವಾ ಲೋಕೋಪಯೋಗಿ ಇಲಾಖೆ ಸುಪರ್ದಿಗೆ ಬರುತ್ತದೋ ಎನ್ನುವ ಹಗ್ಗಜಗ್ಗಾಟಕ್ಕಿಂತ ಅದನ್ನು ಸುಧಾರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳು ಮುಂದಾಗಬೇಕಿದೆ.
-ಬಿ.ಕೆ. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

