ಹಾವೇರಿ

ಮೋದಿ ರ್ಯಾಲಿ ಬೆಂಬಲಿಸಿ ನಾಳೆ ಬೈಕ್ ಜಾಥಾ

Published On :

ಬ್ಯಾಡಗಿ: ನರೇಂದ್ರ ಮೋದಿ ರ್ಯಾಲಿಯನ್ನು ಬೆಂಬಲಿಸಿ ಬಿಜೆಪಿ ಯುವ ಮೋರ್ಚಾ ಘಟಕ ನ. 9ರಂದು ಮಧ್ಯಾಹ್ನ 2 ಗಂಟೆಗೆ ಪಟ್ಟಣದಲ್ಲಿ ಬೈಕ್ ರ್ಯಾಲಿ ಹಮ್ಮಿಕೊಂಡಿದೆ. ನರೇಂದ್ರ ಮೋದಿ ಕಾರ್ಯಕ್ರಮಗಳಲ್ಲಿ ಮಾನವ ಬಾಂಬ್‌ಗಳನ್ನು ಸಿಡಿಸುವ ಮೂಲಕ ಸಮಾಜವಿರೋಧಿ ಶಕ್ತಿಗಳು ಭಯದ ವಾತಾವರಣ ಮೂಡಿಸಿದ್ದು, ಅಪ್ರತ್ಯಕ್ಷವಾಗಿ ಮೋದಿ ವರ್ಚಸ್ಸನ್ನು ಕಡಿಮೆಗೊಳಿಸುವ ಹುನ್ನಾರ ನಡೆಸಿವೆ. ನ. 17ರಂದು ಬೆಂಗಳೂರಿನಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಬೈಕ್ ರ್ಯಾಲಿ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಘಟಕ ನಿರ್ಧರಿಸಿದೆ. ತಾಲೂಕಿನ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸ್ವಯಂಪ್ರೇರಣೆಯಿಂದ ಬೈಕ್ ರ್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಅಧ್ಯಕ್ಷ ವಿಜಯಭರತ್ ಬಳ್ಳಾರಿ ಹಾಗೂ ಜಿಲ್ಲಾ ಘಟಕದ ಉಪಾಧ್ಯಕ್ಷ ಸುರೇಶ ಚಲವಾದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಡಿಗರ ವೆಂಕಟೇಶ್‌ಗೆ ಬಸವ ಚೇತನ ಪ್ರಶಸ್ತಿ
ಹಿರೇಕೆರೂರು: ತಾಲೂಕಿನ ಕುಂಚೂರ ಗ್ರಾಮದ ಸರ್ಕಾರಿ ಹಿರಿಯ ಪ್ರೌಢಶಾಲೆಯ ಕಲಾ ಶಿಕ್ಷಕ, ರಂಗ ಕಲಾವಿದ ಈಡಿಗರ ವೆಂಕಟೇಶ್‌ಗೆ ರಾಜ್ಯ ಮಟ್ಟದ ಬಸವ ಚೇತನ ಪ್ರಶಸ್ತಿ ಲಭಿಸಿದೆ. ನಾಟಕ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆ ಪರಿಗಣಿಸಿ ವೆಂಕಟೇಶ್ ಅವರನ್ನು ಬೆಳಗಾವಿ ಜಿಲ್ಲೆ ಅಥಣಿಯ ಚಿನ್ಮಯಿ ಪ್ರಕಾಶನದವರು ಈ ಪ್ರಶಸ್ತಿಗೆ ಅಯ್ಕೆ ಮಾಡಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ವೆಂಕಟೇಶ್ ನಳ ದಮಯಂತಿ, ಬಾಹುಬಲಿ, ಸ್ವಾಭಿಮಾನ, ಚಪ್ಪಲಿ ರಾಜ, ರಂಗಭೂಮಿಯ ರತ್ನ, ಕಪ್ಪು ಹೊಳೆಯ ಕಲರವ, ಮನದಾಳ ಮೊದಲಾದ ನಾಟಕಗಳನ್ನು ರಚಿಸುವ ಜತೆಗೆ, ಅಭಿನಯದಲ್ಲೂ ಎತ್ತಿದ ಕೈ. ಬೆಳಗಾವಿಯ ಅಥಣಿಯಲ್ಲಿ ಶೀಘ್ರದಲ್ಲೇ ಪ್ರಶಸ್ತಿ ಪ್ರಧಾನ ಆಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಎಸ್‌ಡಿಎಂಸಿಗೆ ಆಯ್ಕೆ
ಬ್ಯಾಡಗಿ: ತಾಲೂಕಿನ ಗುಮ್ಮನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ನೂತನ ಅಧ್ಯಕ್ಷರಾಗಿ ಮಲ್ಲೇಶಪ್ಪ ಬಣಕಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಜರುಗಿದ ಪಾಲಕರ ಸಭೆಯಲ್ಲಿ ಸಮಿತಿ ರಚಿಸಲಾಗಿದ್ದು, ಉಪಾಧ್ಯಕ್ಷರಾಗಿ ಮಾಲತೇಶ ನಾಗಣ್ಣನವರ, ಸದಸ್ಯರಾಗಿ ಶೇಖರಯ್ಯ ಹಿರೇಮಠ, ನಿಂಗಪ್ಪ ಬಡಿಗೇರ, ಗುಡ್ಡಪ್ಪ ಬಣಕಾರ, ನಾಗಪ್ಪ ಕಂಬಳಿ, ವೀರಪ್ಪ ಗುಡಗೂರ, ಮಂಜಪ್ಪ ಬಣಕಾರ, ಹನುಮಂತಪ್ಪ ಕಂಬಳಿ, ಪುಟ್ಟವ್ವ ಬೂದಿಹಾಳ, ಸೋಮವ್ವ ದೊಣ್ಣೇರ, ಪುಷ್ಪಾ ಗುಡಗೂರ, ಶಶಿಕಲಾ ಮಡಿವಾಳರ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಶಿಕ್ಷಕಿ ನಿರ್ಮಲಾ ಉದಾಸಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಜೀವ್ ಪಾಟೀಲ್ ಮಂತಗಿ ನಿಧನ
ಹಾನಗಲ್ಲ: ತಾಲೂಕಿನ ಮಂತಗಿ ಗ್ರಾಮದ ನಿವಾಸಿ, ಬೆಂಗಳೂರಿನ ಐಬಿಎಂ ಕಂಪೆನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸಂಜೀವ್ ಎಂ. ಪಾಟೀಲ್ (40) ತುಮಕೂರು ಬಳಿ ಬುಧವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾದರು. ಅವರಿಗೆ ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಸೋದರ-ಸೋದರಿ ಹಾಗೂ ಅಪರಾರ ಬಂಧುಗಳು ಇದ್ದಾರೆ. ಗುರುವಾರ ಬೆಳಗ್ಗೆ ಮಂತಗಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಮಾಜಿ ಸಚಿವ ಸಿ.ಎಂ. ಉದಾಸಿ, ಸಂಸದ ಶಿವಕುಮಾರ ಉದಾಸಿ, ಶ್ರೀಕಾಂತ ಪಾಟೀಲ, ನಾಗರಾಜ ಉದಾಸಿ, ಅಶೋಕ ಹಂಗರಗಿ, ವೀರೇಶ ಗೌಳಿ, ರಾಜೀವ್ ಪಾಟೀಲ, ಸಂಜಯ್ ಜುಗನೀಕರ್, ರಮೇಶ ಡೊಳ್ಳೇಶ್ವರ್, ಗಿರೀಶ ಕಬ್ಬೂರ್, ವಿಶ್ವಾಸ ಕೋಟೇಶ್ವರ, ಪತ್ರಕರ್ತರಾದ ಸುನೀಲ್ ಸಿರಸಂಗಿ, ಸಿದ್ದಯ್ಯ ಹಿರೇಮಠ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇಂದು ದೇಗುಲ ಉದ್ಘಾಟನೆ
ಹಿರೇಕೆರೂರು: ಕಳಗೊಂಡ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥಸ್ವಾಮಿಯ ಗಿರಿಯಲ್ಲಿ ನ. 8ರಂದು ಧಾರ್ಮಿಕ ಕಾರ್ಯಕ್ರಮವಿದೆ. ಶ್ರೀ ರಂಗನಾಥ ಸ್ವಾಮಿ ಸೇವಾ ಸಮಿತಿ ವತಿಯಿಂದ ವೀರಭದ್ರ ದೇವಸ್ಥಾನದ ಕಟ್ಟದ ಉದ್ಘಾಟನೆ, ವೀರಭದ್ರೇಶ್ವರ ಸ್ವಾಮಿ ಮತ್ತು ನವಗ್ರಹಗಳ ಪ್ರಾಣ ಪ್ರತಿಷ್ಠೆಯನ್ನು ರಟ್ಟಿಹಳ್ಳಿ ಕಬ್ಬಿಣ ಕಂಥಿಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸುವರು. ಮೂರ್ತಿ ಶಿಲ್ಪಿ ಮತ್ತು ದಾನಿಗಳನ್ನು ಸನ್ಮಾನಿಸುವುದಾಗಿ ರಂಗನಾಥ ಸ್ವಾಮಿ ಸೇವಾ ಸಮಿತಿ ತಿಳಿಸಿದೆ.
ಹೊಟ್ಟೆನೋವು : ಆತ್ಮಹತ್ಯೆ
ಬ್ಯಾಡಗಿ: ಹೊಟ್ಟೆನೋವು ತಾಳಲಾರದೆ ಬಾಲಕಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಟೇನಹಳ್ಳಿ ಗ್ರಾಮದಲ್ಲಿ ಜರುಗಿದೆ. ಸುಮಾ ಬಸವರಾಜ ಕುಲಕರ್ಣಿ (16) ಎಂಬಾಕೆಗೆ ಪ್ರತಿಬಾರಿ ಋತುಚಕ್ರದ ಸಮಯದಲ್ಲಿ ತೀವ್ರಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಇದನ್ನು ಸಹಿಸಲಾರದೆ ವಿಷ ಸೇವಿಸಿದ್ದಾಳೆ. ಬ್ಯಾಡಗಿ ಠಾಣೆ ಪಿಎಸ್‌ಐ ಬಿ.ಸಿ. ಗಿರೀಶ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಸ್ಪೀಟ್: 8 ಜನರ ಸೆರೆ
ಬ್ಯಾಡಗಿ: ಮೋಟೆಬೆನ್ನೂರ ಗ್ರಾಮದ ದ್ಯಾಮವ್ವದೇವಿ ದೇವಸ್ಥಾನದ ಬಳಿ ಇಸ್ಪೀಟ್ ಆಡುತ್ತಿದ್ದ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ ಬನ್ನಿಹಟ್ಟಿ, ಪುಟ್ಟಪ್ಪ ಬನ್ನಿಹಟ್ಟಿ, ಮಲ್ಲಪ್ಪ ಕುರಗುಂದ, ಸುಭಾಸಪ್ಪ ದಳವಾಯಿ, ಈರಪ್ಪ ಹಾದರಗೇರಿ, ರವಿ ಬೇಗೂರ, ಪ್ರಭು ಹಾದರಗೇರಿ, ಈರಣ್ಣ ಹೊಳಿಕಟ್ಟಿ ದೇವಸ್ಥಾನದ ಬಳಿ ಅಂದರ್-ಬಾಹರ್ ಆಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಿಎಸ್‌ಐ ಗಿರೀಶ್ ಹಾಗೂ ಸಿಬ್ಬಂದಿ, ಆರೋಪಿಗಳನ್ನು ಬಂಧಿಸಿ, ರು. 2880 ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.