ಹಾನಗಲ್ಲನಲ್ಲಿ ವಿಶೇಷ ಮೆಗಾ ಲೋಕ ಅದಾಲತ್
ಹಾನಗಲ್ಲ: ತ್ವರಿತ ನ್ಯಾಯದಾನ ಹಾಗೂ ರಾಜಿ ಸಂಧಾನದ ಮೂಲಕ ನ್ಯಾಯಾಲಯದಲ್ಲಿ ನಡೆಯುತ್ತಿರುವ ಹಲವು ಪ್ರಕರಣಗಳ ಇತ್ಯರ್ಥಕ್ಕಾಗಿ ಮೆಗಾ ಲೋಕ ಅದಾಲತ್ ನ. 23ರ ವರೆಗೆ ನಡೆಯಲಿದೆ ಎಂದು ನ್ಯಾಯಾಧೀಶ ಎಂ. ರಾಮಚಂದ್ರ ಹಾಗೂ ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶ ಮದ್ವೇಶ ಡಬೇರ ಹೇಳಿದರು.
ಶನಿವಾರ ಈ ಕುರಿತು ಮಾಹಿತಿ ನೀಡಿದ ಅವರು, ಹಾನಗಲ್ಲ ನ್ಯಾಯಾಲಯದಲ್ಲಿ ಇತ್ಯರ್ಥವಾಗದೇ ಬಾಕಿ ಇರುವ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಗೊಳಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದರು.
ದೇಶದಲ್ಲಿ ಸಂಧಾನ ಪ್ರಕ್ರಿಯೆ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ಕರ್ನಾಟಕ ರಾಜ್ಯ ಮಾದರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನತಾ ನ್ಯಾಯಾಲಯದ ಮೂಲಕ ರಾಜೀ ಸಂಧಾನದ ಆಧಾರದ ಮೇಲೆ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳಲು ನ. 23ರ ವರೆಗೆ ಮತ್ತೊಂದು ಅವಕಾಶ ನೀಡಲಾಗಿದೆ. ಈಗ ಮೆಗಾ ಲೋಕ್ ಅದಾಲತ್ ಮೂಲಕ ಶೀಘ್ರ ನ್ಯಾಯದಾನಕ್ಕೆ ಅವಕಾಶವಿದೆ. ನ. 23ರ ವರೆಗೆ ಈ ನಿಯಮದಡಿ ರಾಜೀ ಮೂಲಕ ನ್ಯಾಯ ಪಡೆಯಲು ಅವಕಾಶವಿದೆ ಎಂದು ತಿಳಿಸಿದ ಅವರು, ಪ್ರತಿ ತಿಂಗಳೂ ನಿಗದಿತ ಅವಧಿಯಲ್ಲಿ ಜನತಾ ನ್ಯಾಯಾಲಯದ ಮೂಲಕ ರಾಜಿ ಸಂಧಾನಕ್ಕೆ ಅವಕಾಶವಿದೆ. ಮೆಗಾ ಲೋಕ ಅದಾಲತ್ ಮೂಲಕ ನೀಡಿರುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಸಲಹೆ ಮಾಡಿದರು.
ಈ ರೀತಿಯ ನ್ಯಾಯದಾನದಡಿ ಈಗಾಗಲೇ ಚೆಕ್ ಬೌನ್ಸ್, ಆಸ್ತಿ ಹಿಸ್ಸೆ ದಾವಾ, ವಾಹನ ಅಪಘಾತ ಪರಿಹಾರದಂತಹ ಹಲವು ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ. ಈಗಿರುವ ಕಾಲಾವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಅವಕಾಶವಿದೆ. ಇದರಿಂದಾಗಿ ಪಕ್ಷಗಾರರ ಸಮಯ, ಹಣ ಉಳಿಯುತ್ತದೆ. ಪಕ್ಷಗಾರರಲ್ಲಿ ಉಂಟಾಗಿರುವ ದ್ವೇಷ ದೂರವಾಗಲೂ ಸಾಧ್ಯ. ರಾಜಿ ಸಂಧಾನದಿಂದ ಸಾರ್ವಜನಿಕ ಹಿತವೂ ಅಡಗಿದೆ. ಹೆಚ್ಚು ಜನ ಇದರ ಲಾಭ ಪಡೆಯುವುದು ಅಗತ್ಯವಿದೆ ಎಂದರು.
ಈ ಪ್ರಕರಣಗಳಲ್ಲಿ ನ್ಯಾಯವಾದಿಗಳ ಅಗತ್ಯವಿಲ್ಲದೆಯೂ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತದೆ. ಜನತಾ ನ್ಯಾಯಾಲಯದಲ್ಲಿ ವ್ಯಾಜ್ಯಪೂರ್ವ ಪ್ರಕರಣಗಳನ್ನೂ ಕೂಡ ರಾಜೀ ಸಂಧಾನದ ಮೂಲಕವಾಗಿ ಇತ್ಯರ್ಥ ಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೆ, ರಾಜೀ ಮೂಲಕ ಪ್ರಕರಣಗಳು ಇತ್ಯರ್ಥವಾದಲ್ಲಿ ಪಕ್ಷಗಾರರು ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ಕೂಡ ಪೂರ್ಣವಾಗಿ ಮರುಪಾವತಿ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಪಕ್ಷಗಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ತಿಂಗಳೂ ಕೊನೆ ವಾರ ಈ ಪ್ರಕ್ರಿಯೆ ನಡೆಯುತ್ತದೆ ಎಂದು ಅವರು ವಿವರಿಸಿದರು.
ನ್ಯಾಯವಾದಿಗಳಾದ ಜಿ.ವಿ. ಕಂಬಾಳಿಮಠ, ಎನ್.ಎಸ್. ದೊಡ್ಡಮನಿ, ಎಸ್.ಟಿ. ಕಾಮನಹಳ್ಳಿ, ಮಾರುತಿ ಪೇಟಕರ, ಎಸ್.ಬಿ. ಶೇಷಗಿರಿ, ಬಸವರಾಜ ದೊಡ್ಡಮನಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

