ಬದುಕು ಕಟ್ಟಿಕೊಡುವ ಶಿಕ್ಷಣ ಬೇಕು
ಹಾನಗಲ್ಲ: ಪದವೀಧರರು ನಿರುದ್ಯೋಗಿಗಳೆಂದು ಗೋಳಾಡುತ್ತಿದ್ದಾರೆ. ಆದರೆ, ಪದವೀಧರರಲ್ಲದ ಗ್ರಾಮೀಣ ಜನಸಾಮಾನ್ಯರು ಬದುಕು ಕಟ್ಟಿಕೊಂಡು ಸಂತೋಷವಾಗಿದ್ದಾರೆ. ಹೀಗಿರುವಾಗ ಬದುಕು ಕಟ್ಟಿಕೊಳ್ಳುವ ಶಿಕ್ಷಣಕ್ಕೆ ಆದ್ಯತೆ ನೀಡಲು ಸಮಾಜ, ಸರ್ಕಾರ ಮುಂದಾಗಬೇಕಿದೆ ಎಂದು ಅಖಿಲ ಕರ್ನಾಟಕ ಪದವೀಧರ ಒಕ್ಕೂಟದ ರಾಜ್ಯಾಧ್ಯಕ್ಷ ಟಿ. ಈಶ್ವರ ಹೇಳಿದರು.
ಹಾನಗಲ್ಲಿನ ಅಂಬೇಡ್ಕರ ಭವನದಲ್ಲಿ ಅಖಿಲ ಕರ್ನಾಟಕ ಪದವೀಧರ ಒಕ್ಕೂಟದ ಹಾನಗಲ್ಲ ತಾಲೂಕು ಘಟಕಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪದವೀಧರರಿಗೆ ನೂರಾರು ಜನರಿಗೆ ಕೆಲಸ ಕೊಡುವ ಶಕ್ತಿ ಇದೆ. ಕೀಳರಿಮೆಯಿಂದಾಗಿ ಮುಂದಾಲೋಚನೆ ಇಲ್ಲದೆ ನಿರುದ್ಯೋಗಿ ಪಟ್ಟ ಕಟ್ಟಿಕೊಂಡು ತೊಳಲಾಡುತ್ತಿರುವುದು ಆತಂಕದ ಸಂಗತಿ. ಪದವಿ ಪಡೆಯುವುದೆಂದರೆ ಅದು ಸರ್ಕಾರಿ ಉದ್ಯೋಗಕ್ಕಾಗಿಯೇ ಎಂಬ ಮನೋಭಾವ ದೂರವಾಗಬೇಕು. ಕ್ರಿಯಾಶೀಲತೆ ಮೈಗೂಡಿಸಿಕೊಂಡರೆ ಪದವಿಯಲ್ಲಿ ಪಡೆದ ಶಿಕ್ಷಣ ಬದುಕಿನ ಸೌಂದರ್ಯಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಡಿಸೆಂಬರ್ನಲ್ಲಿ ಸಮಾವೇಶ: ಪದವೀಧರ ಉದ್ಯೋಗಿ, ನಿರುದ್ಯೋಗಿಗಳು ದೇಶ ಕಟ್ಟಲು ಸಾಮಾಜಿಕ, ಸ್ವಾಸ್ಥ್ಯ ಕಾಪಾಡಲು ಮುಂದಾಗಬೇಕು. ಆದರೆ, ಜಾತಿ, ಪಂಥ, ಮೋಸ, ವಂಚನೆ, ಮೌಢ್ಯಗಳಂತಹ ಚಟುವಟಿಕೆಗಳಲ್ಲಿ ಹಾಗೂ ವಿಧ್ವಂಸಕ ಕೃತ್ಯಗಳಲ್ಲಿ ಪಾಲುದಾರರಾಗುವ ಸುಶಿಕ್ಷಿತರ ಮನೋಭಾವ ಬದಲಾಗಬೇಕು. ತಮ್ಮ ಶಕ್ತಿ ಸಾಮರ್ಥ್ಯವನ್ನು ಸಮಾಜದ ಹಿತಕ್ಕೆ ವಿನಿಯೋಗಿಸಬೇಕು. ಮತಭೇದ ಬಿಟ್ಟು ಪ್ರಬುದ್ಧ ವೈಚಾರಿಕತೆ ಮೂಲಕ ನಾಡನ್ನು ಕಟ್ಟಬೇಕು. ಇದಕ್ಕಾಗಿಯೇ ರಾಜ್ಯಾದ್ಯಂತ ಅಖಿಲ ಕರ್ನಾಟಕ ಪದವೀಧರ ಒಕ್ಕೂಟ ನಿರ್ಮಾಣವಾಗಿದೆ. ನಾಡಿನ ಹಿರಿಯ ಸಾಹಿತಿಗಳು, ವಿಚಾರವಂತರು ಇದರ ಬೆನ್ನೆಲುಬಾಗಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಒಕ್ಕೂಟದಿಂದ ಬೃಹತ್ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ ಮಾತನಾಡಿ, ಪದವೀಧರರು ಶೈಕ್ಷಣಿಕ ಉನ್ನತಿ ಪಡೆದವರು. ಸರ್ಕಾರಗಳಿಗೆ ಮಾರ್ಗದರ್ಶನ ಮಾಡುವಂಥ ಪದವೀಧರ ಪ್ರತಿನಿಧಿಯನ್ನು ಸರ್ಕಾರಕ್ಕೆ ನೀಡುವ ಜವಾಬ್ದಾರಿ ಉಳ್ಳವರು. ಹೀಗಾಗಿ ಬರುವ ಚುನಾವಣೆಯಲ್ಲಿ ಯಾವೊಬ್ಬ ಪದವೀಧರರು ಮತದಾನದಿಂದ ಹೊರಗುಳಿಯದಂತೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ಅಲ್ಲದೇ ರಾಜ್ಯದ ಜನತೆ ಹಾಗೂ ಪದವೀಧರರ ಹಿತ ಕಾಯುವ ಅಭ್ಯರ್ಥಿಗೆ ಮತದಾನ ಮಾಡಬೇಕು ಎಂದರು.
ಸಾಹಿತಿ ಮಾರುತಿ ಶಿಡ್ಲಾಪುರ, ಅಖಿಲ ಕರ್ನಾಟಕ ಪದವೀಧರ ಒಕ್ಕೂಟ ಪಕ್ಷಾತೀತ ಸಂಘಟನೆಯಾಗಿದೆ. ಪದವೀರರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಪದವೀಧರರಿಗಾಗಿ ಸರ್ಕಾರ ನೀಡುವ ಯೋಜನೆಗಳನ್ನು ಮುಟ್ಟಿಸುವ ಹಾಗೂ ಪದವೀಧರರು, ಪದವೀಧರ ಉದ್ಯೋಗಸ್ಥರಿಗೆ ಭದ್ರತೆ, ಭಯಮುಕ್ತ ವಾತಾವರಣ ಕಲ್ಪಿಸುವ ಉದ್ದೇಶ ಒಕ್ಕೂಟದ್ದಾಗಿದೆ. ಒಕ್ಕೂಟದ ಮೂಲಕ ಪದವೀಧರರು ಚುನಾವಣೆಗಾಗಿ ಹೆಸರು ನೋಂದಾಯಿಸುವ ಕಾರ್ಯಕ್ಕೆ ವೇಗದ ಚಾಲನೆ ನೀಡುತ್ತಿದೆ. ಅಶಿಕ್ಷಿತರಿರುವ ಕ್ಷೇತ್ರದಲ್ಲಿ ಶೇಕಡಾವಾರು ಅತೀ ಹೆಚ್ಚು ಮತದಾನ ನಡೆಯುತ್ತದೆ. ಆದರೆ ಸುಶಿಕ್ಷಿತರಿರುವ ಕ್ಷೇತ್ರದಲ್ಲೆ ಮತದಾನ ಕುಂಠಿತವಾಗುತ್ತಿರುವುದು ವಿಪರ್ಯಾಸ. ಸುಶಿಕ್ಷಿತ ಮತದಾರರು ಮತದಾನ ಮಾಡುವ ಮೂಲಕ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಉಪನ್ಯಾಸಕ ಶಶಿಕಾಂತ ರಾಠೋಡ, ಸಿ.ವೈ. ಹಾವೇರಿ, ನಿವೃತ್ತ ಶಿಕ್ಷಕ ಜಿ.ಎಂ. ಕುಲಕರ್ಣಿ, ಬಸವರಾಜ ಬೆಟಗೇರಿ, ಎಂ.ಎಚ್. ಶಿರ್ಸಿ, ಮಲ್ಲನಗೌಡ ಪಾಟೀಲ, ಬಸಪ್ಪ ಚೌಡಣ್ಣನವರ, ಬಸವರಾಜ ಹರ್ಲಾಪುರ. ರಾಜಶೇಖರ ಕಲ್ಲೇರ ಇದ್ದರು.
ಪರಶುರಾಮ ಡೂಗನವರ ಕಾರ್ಯಕ್ರಮ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

