ಹಾವೇರಿ

ಮೋದಿ ಪ್ರಧಾನಿಯಾಗುವುದು ತಪ್ಪಿಸಲು ಅಸಾಧ್ಯ

Published On :

ರಾಣಿಬೆನ್ನೂರು: ಪಟ್ಟಭದ್ರ ಹಿತಾಸಕ್ತಿಗಳ ಯಾವುದೇ ಬೆದರಿಕೆಗಳು ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಿರಣಕುಮಾರ ಎಂ. ಅಂಗಡಿ ಹೇಳಿದರು.
ನ. 17ರಂದು ಬೆಂಗಳೂರಿನಲ್ಲಿ ನರೇಂದ್ರ ಮೋದಿಯವರ ರ್ಯಾಲಿ ಬೆಂಬಲಿಸಿ ಜಿಲ್ಲಾ ಹಾಗೂ ತಾಲೂಕು ಬಿಜೆಪಿ ಯುವ ಮೋರ್ಚಾ ಘಟಕಗಳು ಭಾನುವಾರ ನಗರದಲ್ಲಿ ನಡೆಸಿದ ಬೈಕ್‌ರ್ಯಾಲಿ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನರೇಂದ್ರ ಮೋದಿಯವರನ್ನು ದೇಶದ ಬಿಜೆಪಿ ಅಧಿಕೃತ ಪ್ರಧಾನಿ ಅಭ್ಯರ್ಥಿ ಎಂದು ಆಯ್ಕೆ ಮಾಡಿದ ಸುದ್ದಿ ತಿಳಿದಾಗಿನಿಂದ ದೇಶಾದ್ಯಂತ ಯುವ ಜನತೆ ನರೇಂದ್ರ ಮೋದಿಯವರ ಹೆಸರಿನಲ್ಲಿ ಸಂಭ್ರಮಿಸುತ್ತಿರುವುದನ್ನು ನೋಡಿದರೆ ಪಟ್ಟಭದ್ರ ಹಿತಾಸಕ್ತಿಗಳ ಯಾವುದೇ ಗೊಡ್ಡು ಬೆದರಿಕೆಗಳು ನರೇಂದ್ರ ಮೋದಿಯವರು ಪ್ರಧಾನಿಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎನ್ನುವುದು ಖಚಿತವಾಗಿದೆ. ದೇಶದ ಯುವ ಜನತೆ ಮತ್ತು ಎಲ್ಲ ಜಾತಿ ಜನಾಂಗದ ಬಾಂಧವರು ಮಾನಸಿಕವಾಗಿ ಸಿದ್ದರಿದ್ದೇವೆಂದು ಮಾಧ್ಯಮಗಳ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.
10 ಸಾವಿರ ಕಾರ್ಯಕರ್ತರು: ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರದೀಪ್ ಮಳ್ಳೂರು ಮಾತನಾಡಿ, ಬೆಂಗಳೂರಿನಲ್ಲಿ ನ. 17ರಂದು ನಡೆಯುವ ಕಾರ್ಯಕ್ರಮ ಬೆಂಬಲಿಸಿ ಜಿಲ್ಲಾದ್ಯಂತ ನಡೆಯುತ್ತಿರುವ ನರೇಂದ್ರ ಮೋದಿ ರ್ಯಾಲಿಗೆ ಬಿಜೆಪಿ ಚುನಾಯಿತ ಸದಸ್ಯರು ಹಾಗೂ ಸಾವಿರಾರು ಯುವ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಬೆಂಬಲಿಸಿ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜಿಲ್ಲೆಯಿಂದ ಸುಮಾರು 10 ಸಾವಿರ ಕಾರ್ಯಕರ್ತರು ತೆರಳುವ ಸಾಧ್ಯತೆ ಇದೆ ಎಂದರು.
ತಾಲೂಕು ಯುವ ಮೋರ್ಚಾ ಘಟಕದ ಉಪಾಧ್ಯಕ್ಷರಾದ ತಿಮ್ಮನಗೌಡ ಪಾಟೀಲ, ಮಲ್ಲಣ್ಣ ಅಂಗಡಿ, ಮುತ್ತು ಕಾಕೂಳ, ಮಂಜನಾಥ ಲಿಂಗನಗೌಡ್ರ, ಮಹೇಶ ಪಾಟೀಲ, ಗಣೇಶ ಸಿದ್ದಾಳಿ, ರಾಜೇಂದ್ರ ಬಾಕಳೆ, ಎನ್. ದೇವರಾಜ ಮಾತನಾಡಿ, ನರೇಂದ್ರ ಮೋದಿ ದೇಶದ ಪ್ರಧಾನಿಯಾಗುವುದರಲ್ಲಿ ಸಂದೇಹವಿಲ್ಲವೆಂದು ಘೋಷಣೆಗಳನ್ನು ಕೂಗಿದರು.
ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಜಂಬಗಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೀರಣ್ಣ ಅಂಗಡಿ, ನಗರಸಭಾ ಮಾಜಿ ಸದಸ್ಯರ ಉಮೇಶ ಹೊನ್ನಾಳಿ, ಎಪಿಎಂಸಿ ಸದಸ್ಯ ಜಿ.ಜಿ. ಹೊಟ್ಟಿಗೌಡ್ರ, ಕೆ.ಎನ್. ಕೂದಾನ್ಯಮಠ ಸೇರಿದಂತೆ ನೂರಾರು ಜನ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ನಗರದ ಸಿದ್ದೇಶ್ವರ ದೇವಸ್ಥಾನದಿಂದ ಹೊರಟ ಬೈಕ್ ರ್ಯಾಲಿಯು ಪಿಬಿ ರಸ್ತೆಯಲ್ಲಿ ಸಾಗಿ ಕುರುಬಗೇರಿ ಕ್ರಾಸ್ ಮುಖಾಂತರ ಎಂಜಿ ರಸ್ತೆ, ತಳವಾರ ಗಲ್ಲಿ, ದೊಡ್ಡಪೇಟೆ, ಸುಭಾಸ್ ಚೌಕ್, ಸಂಗಮ್ ಸರ್ಕಲ್, ಪೋಸ್ಟ್ ಸರ್ಕಲ್, ಮೇಡ್ಲೆರಿ ಸರ್ಕಲ್ ಮಾರ್ಗವಾಗಿ ಸಾಗಿ ನಗರದ ಬಸ್ ನಿಲ್ದಾಣ ಎದುರು ಅಂತ್ಯಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.