ಸಮಾನ ಶಿಕ್ಷಣದಿಂದ ಅಸಮಾನತೆ ನಿವಾರಣೆ
ಹಾವೇರಿ: ಸಮಾನ ಶಿಕ್ಷಣದಿಂದ ಸದೃಢ ಸಮಾಜ ಕಟ್ಟುವುದರ ಜತೆಗೆ ಅಸಮಾನತೆ ನೀಗಿಸಲು ಸಾಧ್ಯ. ಶಿಕ್ಷಣದ ಅಸಮಾನತೆಯಿಂದಾಗಿಯೇ ಸಾಮಾಜಿಕ ಅಸಮಾನತೆ ಉಂಟಾಗಿದೆ ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಜಿಲ್ಲಾ ಗುರುಭವನದಲ್ಲಿ ಜಯ ಕರ್ನಾಟಕ ಸಂಘಟನೆ ಸೋಮವಾರ ಆಯೋಜಿಸಿದ್ದ ಜನಜಾಗೃತಿ ಜನಾಂದೋಲನದ ಸಾನ್ನಿಧ್ಯ ವಹಿಸಿದ್ದ ಅವರು, ರಾಜಕಾರಣಿಗಳಿಗೆ ಶಿಕ್ಷಣದ ನಿಬಂಧನೆ ಇಲ್ಲ. ಕಡಿಮೆ ಓದಿನ ಪರಿಣಾಮದಿಂದ ಸಮಾನ ಶಿಕ್ಷಣ ನೀತಿ ಜಾರಿಗೆ ಅವರು ಮುಂದಾಗುತ್ತಿಲ್ಲ. ಸರ್ಕಾರಿ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳ ಹಾವಳಿಗೆ ಸಿಲುಕಿ ಮುಚ್ಚುವ ಹಂತಕ್ಕೆ ಬಂದಿರುವುದು ಆತಂಕಕಾರಿ ಬೆಳವಣಿಗೆ. ಕನ್ನಡ ಶಾಲೆಗಳು ಉಳಿಯಲು ಹೋರಾಟಗಳು ನಡೆಯಬೇಕು. ನಮ್ಮ ನೆಲದಲ್ಲಿ ಕನ್ನಡ ರಾಜ ಭಾಷೆಯಾಗಬೇಕೆಂದು ಶ್ರೀಗಳು ಅಭಿಪ್ರಾಯಪಟ್ಟರು.
ಸಾನ್ನಿಧ್ಯ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಬಸವಣ್ಣ ಅನುಭವ ಮಂಟಪ ಸ್ಥಾಪಿಸುವ ಮೂಲಕ ಅಕ್ಷರ ದಾಸೋಹಕ್ಕೆ ಚಾಲನೆ ನೀಡಿದ್ದರು. ಶಿಕ್ಷಣ ರಂಗ ಖಾಸಗೀಕರಣಗೊಳ್ಳುತ್ತಿದೆ. ಶಿಕ್ಷಣ ವ್ಯಾಪಾರಿಕರಣವಾಗಿದ್ದು, ಸಾರ್ವತ್ರೀಕರಣವಾಗಬೇಕು ಎಂದು ಪ್ರತಿಪಾದಿಸಿದರು.
ಮಾರಾಟದ ಸರಕು: ಗೊಟಗೋಡಿಯ ಜನಪದ ವಿವಿಯ ಸರ್ಟಿಫಿಕೇಟ್ ಕೋರ್ಸ್ನ ಮುಖ್ಯಸ್ಥ ಪ್ರೊ ಎನ್. ಕೆಂಚವೀರಪ್ಪ ಉಪನ್ಯಾಸ ನೀಡಿ, ಬಂಡವಾಳಶಾಹಿಗಳು ಶಿಕ್ಷಣವನ್ನು ಮಾರಾಟದ ಸರಕಾಗಿಸಿದ್ದಾರೆ. ಸರ್ಕಾರ ಕಠಿಣ ನಿಲುವು ತಾಳಬೇಕು. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಶಿಕ್ಷಣದಲ್ಲಿ ಸಮಾನತೆ ತರಲು ಸಾಧ್ಯವಾಗಿಲ್ಲ. ಹೋರಾಟಗಳು ಪ್ರಚಾರ ಬಯಸದೆ ಪ್ರಾಮಾಣಿಕವಾಗಿ ನಡೆದಾಗ ಜನಪ್ರತಿನಿಧಿಗಳು, ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ ಎಂದರು.
ಪತ್ರಕರ್ತ ಮಾಲತೇಶ ಅಂಗೂರ ಮಾತನಾಡಿ, ಬಡವರ ಮಕ್ಕಳಿಗೆ ಒಂದು ಶಿಕ್ಷಣ, ಉಳ್ಳವರಿಗೆ ಇನ್ನೊಂದು ಬಗೆಯ ಶಿಕ್ಷಣ ಸಿಗುತ್ತಿದೆ. ಅಂಗನಾಡಿ-ಕಾನ್ವೆಂಟ್ ಪರಿಕಲ್ಪನೆ ಮಕ್ಕಳಲ್ಲಿ ಕೀಳರಿಮೆ ಮೂಡಿಸುತ್ತಿದೆ. ಏಕರೂಪ ಶಿಕ್ಷಣ ನೀತಿ ಜಾರಿಯಾದರೆ ಅಸಮಾನತೆ ನಿವಾರಣೆ ಸಾಧ್ಯ ಎಂದರು.
ಏಕರೂಪದ ಶಿಕ್ಷಣ: ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ವೀರಣ್ಣ ಕೊರಳ್ಳಿ ಮಾತನಾಡಿ, ಏಕರೂಪ ಶಿಕ್ಷಣ ನೀತಿ ಜಾರಿಗಾಗಿ ಪ್ರಾಣದ ಹಂಗು ತೊರೆದು ಹೋರಾಟ ಮಾಡುವುದಾಗಿ ಹೇಳಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ಆನವಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸವರಾಜ ಹೆಡಿಗ್ಗೊಂಡ ಮತ್ತು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ವೀರಣ್ಣ ಕೊರಳ್ಳಿಯವರನ್ನು ಶ್ರೀಗಳು ಸನ್ಮಾನಿಸಿದರು. ನೀಲಮ್ಮ ಪಾಟೀಲ, ಶಿವಣ್ಣ ಹೂಗಾರ, ಸುಭಾಷ ಬೆಂಗಳೂರು, ಸಂಜಯಗಾಂಧಿ ಸಂಜೀವಣ್ಣನವರ, ಶಾಹೀದ ದೇವಿಹೊಸುರ, ಸತೀಶ ಮಡಿವಾಳರ, ರಾಮು ಯಳ್ಳೂರ, ಹರೀಶ ಕಲಾಲ, ಲಕ್ಷ್ಮಣ ಕನವಳ್ಳಿ, ಈಶಪ್ಪ ನಾಯ್ಕರ, ಅಣ್ಣಪ್ಪ ಓಲೇಕಾರ, ಸದಾನಂದ ಶೆಟ್ಟಿ ಇದ್ದರು.
ಸಮಾನ ಶಿಕ್ಷಣಕ್ಕಾಗಿ ರ್ಯಾಲಿ
ಹಾವೇರಿ: ಸಾಮಾಜಿಕ ಸಮಾನತೆಗಾಗಿ ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ತರುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಹಮ್ಮಿಕೊಂಡ ಜಾಗೃತಿ ಜನಾಂದೋಲನ ರ್ಯಾಲಿಯ ರಥಕ್ಕೆ ಪುರಸಿದ್ದೇಶ್ವರ ದೇವಸ್ಥಾನದ ಬಳಿ ಪತ್ರಕರ್ತ ಮಾಲತೇಶ ಅಂಗೂರ ಹಾಗೂ ಹೊಸಮಠದ ಬಸವಶಾಂತ ಸ್ವಾಮೀಜಿ ಸೋಮವಾರ ಚಾಲನೆ ನೀಡಿದರು. ರ್ಯಾಲಿ ಎಂ.ಜಿ. ರಸ್ತೆ, ಗಾಂಧಿ ವೃತ್ತ, ಪಿ.ಬಿ. ರಸ್ತೆ ಮೂಲಕ ಸಾಗಿ, ಗುರುಭವನದಲ್ಲಿ ಸಮಾವೇಶಗೊಂಡಿತು. ಸಂಘಟನೆ ರಾಜ್ಯಾಧ್ಯಕ್ಷ ವೀರಣ್ಣ ಕೋರಳ್ಳಿ, ಜಿಲ್ಲಾಧ್ಯಕ್ಷ ಸುಭಾಷ ಬೆಂಗಳೂರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

