ಜನವಿರೋಧಿ ಆಡಳಿತ: ಕೆಜೆಪಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ನ. 12
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವೈಜ್ಞಾನಿಕ ಯೋಜನೆ ಜಾರಿಗೊಳಿಸುತ್ತ ಜನವಿರೋಧಿ ಆಡಳಿತ ನಡೆಸುತ್ತಿವೆ. ಕರ್ನಾಟಕದಲ್ಲಿ ಶಾದಿಭಾಗ್ಯ ಯೋಜನೆಯನ್ನು ಎಲ್ಲ ವರ್ಗದ ಜನತೆಗೆ ವಿಸ್ತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಜನತಾ ಪಕ್ಷದ ತಾಲೂಕು ಘಟಕದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಪಟ್ಟಣದ ಸರ್ವಜ್ಞ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿದ ಕೆಜೆಪಿ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಬಳಿ ಸಭೆ ನಡೆಸಿದರು.
ಶಾಸಕ ಯು.ಬಿ. ಬಣಕಾರ ಮಾತನಾಡಿ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಜನಪರ ಯೋಜನೆ ರೂಪಿಸಿ, ಎಲ್ಲ ವರ್ಗಗಳ ಜನತೆಗೂ ತಲುಪುವಂತೆ ಜಾರಿಗೊಳಿಸಿದರು. ಆದರೆ ಕಾಂಗ್ರೆಸ್ ಸರ್ಕಾರ ಅವುಗಳನ್ನು ಮೊಟಕುಗೊಳಿಸಿ, ವೋಟ್ ಬ್ಯಾಂಕ್ ಭದ್ರತೆಗಾಗಿ ಅಲ್ಪಸಂಖ್ಯಾತರಿಗಾಗಿ ಶಾದಿಭಾಗ್ಯ ಯೋಜನೆ ಜಾರಿಗೊಳಿಸಿದ್ದು ನ್ಯಾಯವಲ್ಲ. ರಾಜ್ಯದ ಎಲ್ಲ ಬಡವರಿಗೂ ಅನುಕೂಲವಾಗುವಂತೆ ಶಾದಿಭಾಗ್ಯ ಯೋಜನೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಸೌಜನ್ಯ ಮರೆತ ಸಿಎಂ
ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೌಜನ್ಯಕ್ಕಾದರೂ ಭೇಟಿಯಾಗಬೇಕಿತ್ತು. ಆದರೆ, ಅವರು ಸೌಜನ್ಯ ಮರೆತು, ನಿರ್ಲಕ್ಷ್ಯಿಸಿದ್ದಾರೆ. ಮದ್ಯ ಮಾರಾಟಕ್ಕೆ ವಿನಾಯತಿ ನೀಡುವ ಮೂಲಕ ಬಡ ಜನತೆಗೆ ಕಡಿಮೆ ದರದಲ್ಲಿ ಅಕ್ಕಿ ವಿತರಿಸುತ್ತಿರುವುದು ಸರಿಯಲ್ಲ ಎಂದೂ ಬಣಕಾರ ಹೇಳಿದರು.
ಕೆಜೆಪಿ ಅಧ್ಯಕ್ಷ ಮಹೇಶ ಗುಬ್ಬಿ ಮಾತನಾಡಿ, ಡೀಸೆಲ್ ಬೆಲೆ ಏರಿಕೆ ಆಗಿದೆ. ಬತ್ತ, ಮೆಕ್ಕೆಜೋಳ ಮತ್ತು ಹತ್ತಿಗೆ ಹೆಚ್ಚು ದರ ನಿಗದಿಪಡಿಸಬೇಕು. ಬೆಳೆವಿಮೆ ಹಣವನ್ನು ತಕ್ಷಣವೇ ರೈತರ ಖಾತೆಗೆ ಜಮಾ ಮಾಡಬೇಕು. ಎಪಿಎಲ್ ಪಡಿತರ ಚೀಟಿದಾರರಿಗೆ ರು. 10ರ ದರದಲ್ಲಿ 10 ಕೆಜಿ ಅಕ್ಕಿ ವಿತರಿಸಬೇಕು. ಪ್ರೌಢಶಾಲಾ ಮಕ್ಕಳಿಗೆ ಸೈಕಲ್ ವಿತರಿಸಬೇಕು. ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಶಕುಂತಲಾ ಚೌಗುಲೆ ಅವರಿಗೆ ಮನವಿ ಅರ್ಪಿಸಲಾಯಿತು. ಜಿಪಂ ಸದಸ್ಯೆ ಶಾಂತವ್ವ ಹಾದಿಮನಿ, ಪಾರ್ವತಿ ಬೋಗಾವಿ, ಸುಜಾತಾ ಕೊಟಗಿಮನಿ, ತಾಪಂ ಅಧ್ಯಕ್ಷೆ ರೇಣುಕಾ ಚಲುವಾದಿ, ಮಾಜಿ ಅಧ್ಯಕ್ಷ ಶಿವಣ್ಣ ಗಡಿಯಮ್ಣನವರ, ದತ್ತು ರಾಯ್ಕರ, ಶಿದ್ದನಗೌಡ ನರೇಗೌಡ್ರ, ಲಿಂಗರಾಜ ಚಪ್ಪರದಳ್ಳಿ, ಮಹೇಂದ್ರ ಬಡಳ್ಳಿ, ಗೀತಾ ದಂಡಗಿಹಳ್ಳಿ, ರವಿ ಪುಟ್ಟಪ್ಪಗೌಡ್ರ, ಶಿವು ತಿಪ್ಪಶೆಟ್ಟಿ, ರಘು ಮಾಳಮ್ಮನವರ, ಪ್ರಭಾವತಿ ಕುಲಕರ್ಣಿ, ರೂಪಾ ಆಡೂರು, ಬಸನಗೌಡ ಕಳ್ಳೇರ, ಚಂದ್ರು ಅಣ್ಣಪ್ಪನವರ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

