ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಚಾಲನೆ
ಕನ್ನಡಪ್ರಭ ವಾರ್ತೆ, ಹಾವೇರಿ, ನ.15
ಕನಕದಾಸರ ಜಯಂತ್ಯುತ್ಸವದ ಅಂಗವಾಗಿ ಬ್ಯಾಡಗಿ ತಾಲೂಕಿನ ಕಾಗಿನೆಲೆಯಿಂದ ಉಡುಪಿವರೆಗೆ ಹಮ್ಮಿಕೊಂಡಿರುವ ಕನಕ ಸದ್ಭಾವನಾ ಜ್ಯೋತಿ ರಥಯಾತ್ರೆಗೆ ಶುಕ್ರವಾರ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಚಾಲನೆ ನೀಡಿದರು.
ಕರ್ನಾಟಕ ಪ್ರದೇಶ ಕುರುಬ ಸಂಘ ಹಾಗೂ ಕನಕ ಸದ್ಭಾವನಾ ಜ್ಯೋತಿ ಸಮಿತಿಯಿಂದ ಹಮ್ಮಿಕೊಂಡಿರುವ ಈ ಜ್ಯೋತಿ ರಥಯಾತ್ರೆಗೆ ಕಾಗಿನೆಲೆಯಲ್ಲಿ ಕನಕದಾಸರ ಗದ್ದುಗೆಗೆ ಪೂಜೆ ಸಲ್ಲಿಸಿ, ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ಬಾಜಾ ಭಜಂತ್ರಿ, ವಾದ್ಯ, ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ಸಾಗಿದ ನೂರಾರು ಜನರು ಅದ್ಧೂರಿ ಜ್ಯೋತಿ ರಥಯಾತ್ರೆ ಬೀಳ್ಕೊಟ್ಟರು. ವಿಶೇಷವಾಗಿ ಅಲಂಕೃತಗೊಂಡಿರುವ ರಥವು 6 ದಿನಗಳ ಕಾಲ ವಿವಿಧ ಜಿಲ್ಲೆಗಳ ಮೂಲಕ ಹಾದು ನ. 20ರಂದು ಉಡುಪಿಗೆ ತೆರಳಲಿದೆ. ಅಲ್ಲಿ ಅಂದು ಕನಕದಾಸರ 526ನೇ ಜಯಂತ್ಯುತ್ಸವ ಆಚರಿಸಲು ನಿರ್ಧರಿಸಲಾಗಿದೆ.
ಶ್ರೀಗಳು ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಾರಿರುವ ತತ್ವ, ಸಿದ್ಧಾಂತಗಳನ್ನು, ಜೀವನದಲ್ಲಿ ಮೈಗೂಡಿಸಿಕೊಂಡಿದ್ದ ಆದರ್ಶ, ಸಮಾನತೆಗಾಗಿ ಹೋರಾಡಿದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಸದ್ಭಾವನಾ ಜ್ಯೋತಿ ಯಾತ್ರೆ ಆರಂಭಿಸಲಾಗಿದೆ. ನಾಡಿನ ಸಮಸ್ತ ಜನತೆಗೆ ಸಾಮರಸ್ಯದ ಸಂಕೇತವಾಗಿ ಕನಕ ಜ್ಯೋತಿಯನ್ನು ಉಡುಪಿಗೆ ಒಯ್ಯಲಾಗುತ್ತಿದೆ ಎಂದು ಹೇಳಿದರು.
ಆರು ದಿನಗಳ ಈ ಯಾತ್ರೆ ಕಾಗಿನೆಲೆಯಿಂದ ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಹೊನ್ನಾಳಿ, ಶಿವಮೊಗ್ಗ, ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ಚನ್ನರಾಯಪಟ್ಟಣ, ಹೊಳೇನರಸೀಪುರ, ಹಾಸನ, ಸಕಲೇಶಪುರ, ಮಂಗಳೂರು ಮಾರ್ಗವಾಗಿ ನ. 20ಕ್ಕೆ ಉಡುಪಿ ತಲುಪಲಿದೆ ಎಂದು ಅವರು ತಿಳಿಸಿದರು.
ಶಾಸಕ ಬಸವರಾಜ ಶಿವಣ್ಣನವರ್, ಜ್ಯೋತಿ ಸಮಿತಿ ಕಾರ್ಯದರ್ಶಿ ಕೆ.ಆರ್. ಪ್ರಭಾವತಿ, ಸಂಚಾಲಕ ಎಂ. ಕೃಷ್ಣಮೂರ್ತಿ, ಎನ್.ಪಿ. ಅಮೃತೇಶ, ದೇವರಾಜ, ಚಂದ್ರಶೇಖರ ಮುದುಕಣ್ಣನವರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

