ಹಾವೇರಿ

ಕಳಪೆ ಆಹಾರ: ಟೈರ್‌ಗೆ ಬೆಂಕಿ

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 19
ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕಳಪೆ ಆಹಾರ ಪೂರೈಸುತ್ತಿರುವ ಆದರ್ಶ ರೂರಲ್ ಎಜ್ಯುಕೇಶನ್ ಸೊಸೈಟಿ ಕ್ರಮ ಖಂಡಿಸಿ ಪಾಲಕರು ಹಾಗೂ ವಿದ್ಯಾರ್ಥಿಗಳು ಮಂಗಳವಾರ ಟೈರ್‌ಗಳಿಗೆ ಬೆಂಕಿ ಹಚ್ಚಿ 4 ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಹಠಾತ್ ಪ್ರತಿಭಟನೆ ನಡೆಸಿದರು.
ಆಗಿದ್ದೇನು..
ಸ್ಥಳೀಯ ಎಸ್‌ಎಸ್‌ಪಿಎನ್ ಶಾಲೆ ಸೇರಿದಂತೆ ತಾಲೂಕಿನ ಖಾಸಗಿ ಅನುದಾನಿತ ಶಾಲೆಗಳಿಗೆ ಹರಿಹರದ ಆದರ್ಶ ರೂರಲ್ ಎಜ್ಯುಕೇಶನ್ ಸೊಸೈಟಿ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿದೆ. ಆದರೆ, ನ. 18ರಂದು ಪೂರೈಸಿದ ಕಳೆಪೆಯಾದ ಹಿನ್ನೆಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು ಇದನ್ನೇ ನೆಪವಾಗಿಟ್ಟುಕೊಂಡ ಪಾಲಕರು ಹಾಗೂ ವಿದ್ಯಾರ್ಥಿಗಳು ಮಂಗಳವಾರ ಎಸ್‌ಎಸ್‌ಪಿಎನ್ ಶಾಲೆ ಆವರಣದಲ್ಲಿ ಪ್ರತಿಭಟನೆ ನಡೆಸಲಾರಂಭಿಸಿದರು.
ಸಭೆ ವಿಫಲ: ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಶಿವಶಂಕರ ನಾಯಕ್, ಬಿಇಒ ಪ್ರಸನ್ನಕುಮಾರ, ಬಿಸಿಯೂಟ ಜಿಲ್ಲಾ ನಿರ್ದೇಶಕ ಖಾಜಿ ತಾಲೂಕು ಸಹಾಯಕ ನಿರ್ದೇಶಕ ಪೀರಜಾದೆ ಪಾಲಕರ ಸಭೆ ನಡೆಸಿ ಆಗಿರುವ ತಪ್ಪು ಸರಿಪಡಿಸುವ ಭರವಸೆ ನೀಡಿದರಲ್ಲದೇ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.
ನಿಮ್ಮ ಮಕ್ಕಳಿಗೊಮ್ಮೆ ತಿನ್ನಿಸಿ: ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಈಗ ಪೂರೈಸಿರುವ ಆಹಾರವನ್ನು ಜಾನುವಾರು ಕೂಡ ತಿನ್ನಲು ಸಾಧ್ಯವಿಲ್ಲ. ಅದಾಗ್ಯೂ ಇಂಥ ಊಟವನ್ನು ಮಕ್ಕಳಿಗೆ ನೀಡುತ್ತಿದ್ದೀರಿ. ಮಕ್ಕಳ ಆರೋಗ್ಯ ಏರುಪೇರಾಗಿದ್ದಕ್ಕೆ ಯಾರು ಹೊಣೆ? ಶಿಕ್ಷಕರು ಹಾಗೂ ಅಧಿಕಾರಿಗಳೇ ನಿಮ್ಮ ಮಕ್ಕಳಿಗೊಮ್ಮೆ ತಿನ್ನಿಸಿ ಬಳಿಕ ಸಭೆ ನಡೆಸುವಂತೆ ಆಗ್ರಹಿಸಿದರಲ್ಲದೇ ಯಾವುದೇ ಕಾರಣಕ್ಕೂ ಗುತ್ತಿಗೆ ರದ್ದಾಗುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲವೆಂದರು.
ಜಿಪಂ ಸಿಇಒ ಊಟ ಮಾಡಲಿ: ಮಹ್ಮದ್‌ಲಿ ಜಿನ್ನಾ ಹಲಗೇರಿ ಮಾತನಾಡಿ, ಆದರ್ಶ ರೂರಲ್ ಎಜ್ಯುಕೇಶನ್ ಸೊಸೈಟಿ ಮುಖ್ಯಸ್ಥ ಹಾಗೂ ಗುತ್ತಿಗೆ ನೀಡಿರುವ ಜಿಪಂ ಸಿಇಒ, ಡಿಡಿಪಿಐ, ಅವರನ್ನು ಸ್ಥಳಕ್ಕೆ ಕರೆಸಿ ಅವರು ಊಟ ಮಾಡಿದ ಬಳಿಕ ಗುತ್ತಿಗೆ ರದ್ದುಪಡಿಸದ ಹೊರತು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.
ರಸ್ತೆ ತಡೆ ಟೈರ್‌ಗೆ ಬೆಂಕಿ: ಎರಡು ತಾಸು ಗತಿಸಿದರೂ ಸ್ಥಳಕ್ಕಾಗಮಿಸದ ಜಿಪಂ ಸಿಇಒ ಹಾಗೂ ಡಿಡಿಪಿಐ ವರ್ತನೆಯಿಂದ ಬೇಸತ್ತುಪ್ರತಿಭಟನೆ ತೀವ್ರಗೊಳಿಸಿದ ವಿದ್ಯಾರ್ಥಿಗಳು ರಸ್ತೆ ಮಧ್ಯೆ ಕುಳಿತು ಸಂಚಾರಕ್ಕೆ ವ್ಯತ್ಯಯಪಡಿಸಿದರಲ್ಲದೇ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಇದರಿಂದ ಸುಮಾರು 4 ತಾಸಿಗೂ ಹೆಚ್ಚು ಕಾಲ ಸುಭಾಸ ವೃತ್ತದ ಬಳಿ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಯಿತು.
ಪಿಎಸ್‌ಐ ಜತೆ ವಾಗ್ವಾದ: ಸಂಚಾರಕ್ಕೆ ವ್ಯತ್ಯಯವಾಗಿದ್ದರಿಂದ ತಲೆಬಿಸಿ ಮಾಡಿಕೊಂಡ ಪಿಎಸ್‌ಐ ಗಿರೀಶ್ ರಸ್ತೆ ತೆರವುಗೊಳಿಸಲು ಮುಂದಾದರು. ಈ ಸಮಯ ಕೆಲಕಾಲ ಪ್ರತಿಭಟನಾಕಾರರ ಜತೆ ವಾಗ್ವಾದ ನಡೆಯಿತು.
ಈ ಸಂದರ್ಭ ಮಾತನಾಡಿದ ಬಾಬು ಬಡಿಗೇರ, ಅಜೀಜ್ ಬಿಜಾಪುರಿ, ಸುರೇಶ್ ಚಲವಾದಿ, ಸುರೇಶ್ ಅಸಾದಿ, ಪ್ರತಿಭಟನೆ ಯಾವುದೇ ಸ್ವಹಿತಕ್ಕೆ ನಡೆಸುತ್ತಿಲ್ಲ. ಬಿಸಿಯೂಟ ಮಾಡಿದ ಮಕ್ಕಳು ಹಾಸಿಗೆ ಹಿಡಿದಿದ್ದಾರೆ. ನಮಗೂ ಕಾನೂನು ಗೊತ್ತಿದೆ. ನಮ್ಮನ್ನು ಮುಟ್ಟಿ ತೊಂದರೆ ಮಾಡಿಕೊಳ್ಳದಿರುವಂತೆ ಎಚ್ಚರಿಸಿದರು. ನಮ್ಮ ಹಕ್ಕು ಕಸಿದುಕೊಳ್ಳಲು ನೀವ್ಯಾರು? ಎಂದು ಪ್ರಶ್ನಿಸಿದರು.
ಮುಖಂಡರ ಮಧ್ಯಸ್ಥಿಕೆ: ಪ್ರತಿಭಟನೆ ವಿಕೋಪಕ್ಕೆ ಹೋಗುವುದನ್ನು ಅರಿತ ಜಿಪಂ ಸದಸ್ಯರಾದ ವೀರೂಪಾಕ್ಷಪ್ಪ ಬಳ್ಳಾರಿ, ಶಂಕ್ರಣ್ಣ ಮಾತನವರ, ರೈತ ಮುಖಂಡ ಗಂಗಣ್ಣ ಎಲಿ, ಡಿಡಿಪಿಐ ಎಸ್.ಬಿ. ಕೊಡ್ಲಿ, ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರಲ್ಲದೇ, ಆದರ್ಶ ರೂರಲ್ ಎಜ್ಯುಕೇಶನ್ ಸೊಸೈಟಿ ಗುತ್ತಿಗೆ ರದ್ದುಪಡಿಸುವ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯಿಂದ ಹಿಂದೆ ಸರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.