ಶತಮಾನೋತ್ಸವಕ್ಕೆ ನೂರೆಂಟು ವಿಘ್ನ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 20
ಶಿಕ್ಷಣವೆಂದರೆ ಏನು ಎಂದು ಕೇಳುವಷ್ಟರ ಮಟ್ಟಿಗೆ ಮೌಢ್ಯ ಹರಡಿದ್ದ ದಿನಗಳಲ್ಲಿ ಅಕ್ಷರ ದಾಸೋಹದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಬೆಳಗಿಸಿದ ಇಲ್ಲಿನ ಶ್ರೀ ಜಯದೇದ ಜಗದ್ಗುರು ಮುರುಘ ರಾಜೇಂದ್ರ (ಎಸ್‌ಜೆಜೆಎಂ) ಪ್ರೌಢಶಾಲೆ ಶತಮಾನೋತ್ಸವ ಆಚರಣೆಗೆ ನೂರೆಂಟು ವಿಘ್ನಗಳು ಎದುರಾಗಿವೆ.
ಪ್ರೌಢಶಾಲೆ ಆರಂಭವಾಗಿ ಪ್ರಾರಂಭವಾಗಿ 111 ವರ್ಷ ಗತಿಸಿವೆ. ಧಾರ್ಮಿಕ ತಾಣವಾಗಿದ್ದ ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಅಂದಿನ ಶ್ರೀಗಳು ತಮ್ಮ ನಿಲುವಿನಲ್ಲಿ ಕೊಂಚ ಮಾರ್ಪಾಟು ಮಾಡಿಕೊಂಡು ಶೈಕ್ಷಣಿಕ ಪ್ರಗತಿಯಿಂದಲೇ ದೇಶದ ಅಭಿವೃದ್ಧಿ ಎಂಬುದನ್ನು ಮನಗಂಡರು. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಲಭಿಸುವುದಕ್ಕೂ ಬಹಳ ಮೊದಲೇ 1903ರಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವ ಉದ್ದೇಶದಿಂದ ಎಸ್‌ಜೆಜೆಎಂ ಪ್ರೌಢಶಾಲೆ ಸ್ಥಾಪಿಸಿದರು. ಆಮೇಲೆ ಶಾಲೆಗೆ ಬೇಕಾದ ಕಟ್ಟಡ, ಮೈದಾನ, ವಸತಿ ನಿಲಯ ಮುಂತಾದ ಸೌಕರ್ಯಗಳನ್ನು ಒದಗಿಸಿ, ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕಾರಣರಾದರು. ಅಸಂಖ್ಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ಸಂಸ್ಥೆ ಇದು.
ಸರ್ಕಾರಕ್ಕೆ ಹಸ್ತಾಂತರ: ಮುಂದೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಶ್ರೀಗಳಿಗೆ ಸಂಸ್ಥೆಯ ನಿರ್ವಹಣೆ ಕಷ್ಟವೆನಿಸಿತು. ಹೀಗಾಗಿ, ಪ್ರೌಢಶಾಲೆಯನ್ನು ಸರ್ಕಾರಕ್ಕೆ (ಪುರಸಭೆ) ಹಸ್ತಾಂತರ ಮಾಡಿದರು. ಇಂದಿಗೂ ಅದನ್ನು ಮುನ್ಸಿಪಲ್ ಹೈಸ್ಕೂಲ್ ಎಂದೇ ಕರೆಯುವುದು ಇದೇ ಕಾರಣಕ್ಕೆ. ಈಗ ಪ್ರಾಥಮಿಕ, ಪ್ರೌಢಶಾಲೆ ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಕಾಲೇಜುಗಳು ಇಲ್ಲಿ ಜ್ಞಾನಧಾರೆ ಎರೆಯುತ್ತಿವೆ.
ಇಚ್ಛಾಶಕ್ತಿ ಕೊರತೆ: ಯಾವುದೇ ಒಂದು ಸಂಸ್ಥೆ ರಜತ ಮಹೋತ್ಸವ, ಸುವರ್ಣ ಮಹೋತ್ಸವ, ವಜ್ರ ಮಹೋತ್ಸವ, ಅಮೃತ ಮಹೋತ್ಸವ, ಶತಮಾನೋತ್ಸವಗಳನ್ನು ಆಚರಿಸುವುದು, ಅದ್ಧೂರಿ ಕಾರ್ಯಕ್ರಮ ರೂಪಿಸುವುದು, ಸ್ಮರಣ ಸಂಚಿಕೆ ಹೊರತರುವುದು ಆ ಸಂಸ್ಥೆಯ ಹಿರಿಮೆಯನ್ನು ದಾಖಲಿಸುವ ಪ್ರಯತ್ನ. ಇಲ್ಲಿ ಒಡನಾಡಿದವರೆಲ್ಲ ಸೇರಿ ಸಂಭ್ರಮಿಸುತ್ತಾರೆ. ಸಂಸ್ಥೆ ನಡೆದು ಬಂದ ದಾರಿಯನ್ನು ಮೆಲುಕು ಹಾಕುತ್ತಾರೆ. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ವೈಯಕ್ತಿಕ ಪ್ರತಿಷ್ಠೆಯಿಂದಾಗಿ ಎಸ್‌ಜೆಜೆಎಂ ಪ್ರೌಢಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಆಗಲೇ ಇಲ್ಲ.
ಆರಂಭ ಶೂರತ್ವ: 2003ರಲ್ಲಿ ನೂರು ವಸಂತ ಪೂರೈಸಿದ ಎಸ್‌ಜೆಜೆಎಂ ಪ್ರೌಢಶಾಲೆಯ ಶತಮಾನೋತ್ಸವ ಆಚರಣೆಗೆ ಎರಡು ವರ್ಷಗಳ ಬಳಿಕ (2005) ಚಾಲನೆ ದೊರೆಯಿತು. ಪ್ರಶ್ನಾತೀತ ವ್ಯಕ್ತಿಗಳಿಂದ ಕೂಡಿದ ಸಮಿತಿ ರಚಿಸಲಾಯಿತು. ಪ್ರತ್ಯೇಕ ಶತಮಾನೋತ್ಸವ ಕಚೇರಿ, ದೂರವಾಣಿ, ಪೀಠೋಪಕರಣ ಒದಗಿಸಿದ್ದಲ್ಲದೆ, ವಂತಿಗೆ ಹಣ ಸಂಗ್ರಹಿಸಲು ರಶೀದಿ ಪುಸ್ತಕ ಮುದ್ರಿಸಲಾಯಿತು. ಮೂರು-ನಾಲ್ಕು ಪೂರ್ವಸಿದ್ಧತಾ ಸಭೆಗಳೂ ಜರುಗಿದವು.
ವಿಘ್ನ ಆರಂಭ: ಇನ್ನೇನು ಕಾರ್ಯಕ್ರಮ ನಡದೇ ಹೋಯಿತು ಎನ್ನುವಷ್ಟರಲ್ಲಿ ವಕ್ಕರಿಸಿದ ರಾಜಕೀಯ ಭಿನ್ನಾಭಿಪ್ರಾಯಗಳು ಶತಮಾನೋತ್ಸವಕ್ಕೆ ತಡೆಯುಂಟು ಮಾಡಿದವು, ವೈಯಕ್ತಿಕ ಪ್ರತಿಷ್ಠೆಯಿಂದಾಗಿ ಕೆಲ ಮುಖಂಡರು ಇತ್ತ ಸುಳಿಯಲಿಲ್ಲ. ಹೀಗಾಗಿ, ಅಗತ್ಯವಿದ್ದಷ್ಟು ಹಣ ಸಂಗ್ರಹ ಆಗಲಿಲ್ಲ. ಆದರೂ ದಾನಿಗಳಿಂದ ಸಂಗ್ರಹಿಸಿದ ಹಣ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಹೆಸರಿನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಯಲ್ಲೇ ಉಳಿದಿದೆ.
ವಿದ್ಯಾರ್ಥಿಗಳಿಂದ ತಲಾ ರು. 50 ಹಾಗೂ ಸಿಬ್ಬಂದಿಯಿಂದ ತಲಾ ರು. 1 ಸಾವಿರದಂತೆ ಸಂಗ್ರಹಿಸಿದ್ದ ಸುಮಾರು ರು. 1 ಲಕ್ಷ ಹಣ ಈಗ ಬ್ಯಾಂಕಿನಲ್ಲಿದೆ. ಆದರೂ ಶತಮಾನೋತ್ಸವ ಆಚರಣೆ ಕಗ್ಗಂಟಾಗಿಯೇ ಪರಿಣಮಿಸಿದೆ.
- ಶಿವಾನಂದ ಮಲ್ಲನಗೌಡರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

