ಕನ್ನಡ ಸಾಹಿತ್ಯಕ್ಕೆ ಕನಕರ ಕೊಡುಗೆ ಅಪಾರ
ಶಿಗ್ಗಾಂವಿ: ಕನಕದಾಸರು ಜನಪದ ಸಾಹಿತ್ಯದ ಲಯಗಳನ್ನು ತಮ್ಮ ಕೀರ್ತನ ಸಾಹಿತ್ಯದಲ್ಲಿ ಸಮರ್ಥವಾಗಿ ಬಳಸಿಕೊಂಡು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ ಶ್ರೇಷ್ಠ ದಾರ್ಶನಿಕ ಕವಿ ಎಂದು ಪ್ರಾಧ್ಯಾಪಕ ಡಾ. ಸಿದ್ದಣ್ಣ ಎಫ್. ಜಕಬಾಳ ಹೇಳಿದರು.
ತಾಲೂಕಿನ ಗೋಟಗೊಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಜನಪದ ಹಾಡುಗಳ ವಿಶಿಷ್ಟವಾದ ಲಯಗಳನ್ನು ಕೀರ್ತನೆಗಳಲ್ಲಿ ಪ್ರಯೋಗ ಮಾಡಿದ ಕನಕದಾಸರು, ಜನಸಾಮಾನ್ಯರ ಪರವಾದ ಸಾಹಿತ್ಯ ರಚಿಸುವ ಮೂಲಕ ಜನಪದ ಕವಿಯೂ, ಪಂಡಿತ ಕವಿಯೂ ಆಗಿದ್ದಾರೆ ಎಂದು ಅವರು ಪ್ರತಿಪಾದಿಸಿದರು.
ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಡಿ.ಬಿ. ನಾಯಕ ಮಾತನಾಡಿ, ಚರಿತ್ರೆ ಎಂದರೆ ಸಮಾಜದ ಸಂಘರ್ಷ. ಸಮಾಜಕ್ಕೆ ಅಂಟಿದ ಜಾತಿ, ಮತ, ಪಂಥಗಳ ಜಾಡ್ಯವನ್ನು ತೊಲಗಿಸುವ ಸಲುವಾಗಿ ತಮ್ಮ ಸಾಹಿತ್ಯದ ಮೂಲಕ ಜನಸಾಮಾನ್ಯರನ್ನು ಜಾಗೃತಿಗೊಳಿಸಿದ ಕನ್ನಡದ ಮಹಾಕವಿ ಕನಕದಾಸರು ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾನತೆಯ ಸಮಪಾತಳಿಯ ಮೇಲೆ ಸಮಾಜ ನಿರ್ಮಾಣದ ಕನಸನ್ನು ಕಂಡು ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ಕನಕದಾಸರು, ಜನಪದರ ಆಶಯದಂತೆ ಬಾಳಿ, ಬರೆದು, ಬದುಕಿದ ಮಹಾ ದಾರ್ಶನಿಕ ದಾಸಶ್ರೇಷ್ಠರು ಎಂದು ಪ್ರತಿಪಾದಿಸಿದರು.
ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಸ.ಚಿ. ರಮೇಶ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ವಿಜಯಲಕ್ಷ್ಮೀ ಗೇಟಿಯವರ ಕಾರ್ಯಕ್ರಮ ನಿರೂಪಿಸಿದರು. ಕುಮಾರ ಮಾರುತಿ ಕರ್ಜಗಿ ವಂದಿಸಿದರು. ಎಂಬಿಎ ವಿಭಾಗದ ಮುಖ್ಯಸ್ಥ ಹಾಗೂ ಡೀನ್ ಪ್ರೊ. ಎಂ. ಚಂದ್ರ ಪೂಜಾರಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಎನ್. ಚಂದು, ಸವಣೂರು ಎಪಿಎಂಸಿ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ಗದಗೇಶ ಕುಲಕುರ್ಣಿ, ತಾಪಂ ಸದಸ್ಯ ಮಾಲತೇಶ ಬಿಜ್ಜೂರು, ಬಸುಗೌಡ್ರ ಕೊಪ್ಪದ ಇದ್ದರು.
---
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

