ಕಳಪೆ ಅಡುಗೆ: ಸಂಸ್ಥೆ ವಿರುದ್ಧ ಕ್ರಮ ಜರುಗಿಸಿ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ನ. 21
ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣವರ ಹಾಗೂ ಸಿಇಒ ಅಂಜನಪ್ಪ ತಾಲೂಕಿನ ಖಾಸಗಿ ಅನುದಾನಿತ ಶಾಲೆಗಳಿಗೆ ಪೂರೈಸುತ್ತಿರುವ ಬಿಸಿಯೂಟ ಕಳಪೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಸುವರ್ಣಸೌಧದಲ್ಲಿ ಗುರುವಾರ ಮುಖ್ಯ ಶಿಕ್ಷಕರ ಸಭೆ ನಡೆಸಿದರು.
ಶಿಕ್ಷಕರ ಪರ ಜಿಪಂ ಸದಸ್ಯ ವಿರೂಪಾಕ್ಷಪ್ಪ ಬಳ್ಳಾರಿ ಪ್ಲಾಸ್ಟಿಕ್ ಬಾಟಲೊಂದರಲ್ಲಿ ಸಂಗ್ರಹಿಸಿದ್ದ ಕಳಪೆ ಸಾಂಬಾ ರನ್ನು ಅಧಿಕಾರಿಗಳಿಗೆ ತೋರಿಸಿದರು. ಬಳಿಕ ಮಾತನಾಡಿ, ಹೊರಗುತ್ತಿಗೆ ನೀಡಿರುವ ಆದರ್ಶ ಏಜ್ಯುಕೇಶನ್ ರೂರಲ್ ಸೊಸೈಟಿ 18 ಶಾಲೆಗಳಿಂದ ಸುಮಾರು 4 ಸಾವಿರಕ್ಕೂ ಪೂರೈಕೆ ಮಾಡುತ್ತಿರುವ ಆಹಾರ ಕಳಪೆ ಗುಣಮಟ್ಟದ್ದಾಗಿದೆ. ಈ ಕುರಿತು ಮನವಿ ಸಲ್ಲಿಸಿದರೂ ಪರಿಗಣಿಸದಿರುವ ಹಿರಿಯ ಅಧಿಕಾರಿಗಳು ಗುಣಮಟ್ಟ ಪರೀಕ್ಷಿಸದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಆದರ್ಶ ಸೊಸೈಟಿಗೆ ಗುತ್ತಿಗೆ ನೀಡಿದ್ದಾರೆ ಎಂದು ಆರೋಪಿಸಿದರು.
ಬಿಸಿಯೂಟ ಕುರಿತಂತೆ ನಿಯಂತ್ರಣಕ್ಕೆ ಬಾರದ ಗುತ್ತಿಗೆದಾರ ಶಿಕ್ಷಣ ಸಂಸ್ಥೆಗಳು ಯಾವುದೇ ಸೂಚನೆಗೆ ಕಿಮ್ಮತ್ತು ನೀಡಿರುವುದಿಲ್ಲ. ಹೀಗಾಗಿ ಕೇವಲ 2 ಸಾವಿರಕ್ಕಿಂತ ಕಡಿಮೆ ಮಕ್ಕಳು ಬಿಸಿಯೂಟ ಮಾಡುತ್ತಿದ್ದಾರೆ. ಗುತ್ತಿಗೆದಾರನ ತಪ್ಪಿನಿಂದಾಗಿ ಸರ್ಕಾರದ ಯೋಜನೆ ಬಡ ಮಕ್ಕಳಿಗೆ ತಲುಪದಂತಾಗಿದೆ ಎಂದರು.
ನ. 19ರಂದು ಪಾಲಕರು ಹಾಗೂ ವಿದ್ಯಾರ್ಥಿಗಳು ಸೊಸೈಟಿ ವಿರುದ್ಧ ರಸ್ತೆಗಿಳಿದು ಪಟ್ಟಣದಲ್ಲಿ ನಡೆಸಿದ ಪ್ರತಿಭಟನೆಯಿಂದಾಗಿ ಖಾಸಗಿ ಶಾಲೆಗಳ ಬಗ್ಗೆ ಪಾಲಕರು ಅನುಮಾನಾಸ್ಪದವಾಗಿ ನೋಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಶಾಲೆಗಳಿಗೆ ಅಡುಗೆ ಕೋಣೆ ನಿರ್ಮಾಣಕ್ಕೆ ಬೇಕಾದ ಅನುದಾನ ಪೂರ್ಣ ಪ್ರಮಾಣದಲ್ಲಿ ಬಿಡುಗಡೆಗೊಳಿಸುವ ಮೂಲಕ ಖುದ್ದಾಗಿ ಬಿಸಿಯೂಟ ತಯಾರಿಕೆಗೆ ಸಹಕರಿಸುವಂತೆ ಆಗ್ರಹಿಸಿದರು.
ರದ್ದುಪಡಿಸಲು ಸಾಧ್ಯವಿಲ್ಲ: ಜಿಪಂ ಅಧ್ಯಕ್ಷ ರಾಜೇಂದ್ರ ಹಾವೇರಣ್ಣವರ ಬಿಸಿಯೂಟ ಗುತ್ತಿಗೆ ಏಕಾಏಕಿ ಪೂರೈಕೆ ಸ್ಥಗಿತಗೊಳಿಸಲು ಬರುವದಿಲ್ಲ. ಅದಕ್ಕೆ ಕಾಲಾವಕಾಶಬೇಕಾಗುತ್ತದೆ. ಇದೇ ಸಂಸ್ಥೆ ಜಿಲ್ಲಾದ್ಯಂತ ಪೂರೈಕೆ ಮಾಡುತ್ತಿದೆ. ಕೇವಲ ಬ್ಯಾಡಗಿ ತಾಲೂಕಿನಲ್ಲಿ ಸಮಸ್ಯೆ ಉದ್ಭವವಾಗಿದೆ. ಮಕ್ಕಳಿಗೆ ನೀಡುವ ಮುನ್ನ ಶಿಕ್ಷಕರು ಬಿಸಿಯೂಟ ಪರೀಕ್ಷಿಸಬೇಕೆಂದು ಸೂಚಿಸಿದರು.
ಸಭೆಯಿಂದ ಹೊರನಡೆದರು: ಅಧ್ಯಕ್ಷರ ಉತ್ತರದಿಂದ ಅಸಂತೃಪ್ತಗೊಂಡ ಬಿಸಿಯೂಟದಲ್ಲಿ ರಾಜಕೀಯ ಬೇಡ ಪಕ್ಷಾತೀತವಾಗಿ ಎಲ್ಲರೂ ಖಂಡಿಸಲೇಬೇಕಾಗುತ್ತದೆ. ಏಕಪಕ್ಷೀಯ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದಿದ್ದೇ ತಡ ಸಭೆಯಿಂದ ಹೊರನಡೆದರು. ಈ ಸಂದರ್ಭ ಜಿಪಂ ಸದಸ್ಯ ಶಂಕ್ರಣ್ಣ ಮಾತನವರ ಕುಪಿತರಾಗಿದ್ದ ಬಳ್ಳಾರಿ ಅವರನ್ನು ಸಮಾಧಾನಪಡಿಸಿ ವಾಪಸು ಕರೆ ತಂದರು.
25ರಂದು ಚರ್ಚಿಸಿ ನಿರ್ಧಾರ: ನ. 25ರಂದು ಜಿಪಂ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು. ಕಳಪೆ ಎಂದು ತಿಳಿದಿದ್ದರೂ ಅಧಿಕಾರಿಗಳು ನಮಗಾಗಲಿ ಅಥವಾ ಜಿಪಂ ಸಿಇಒ ಅವರಿಗಾಗಲಿ ಲಿಖಿತವಾಗಿ ತಿಳಿಸಿರುವುದಿಲ್ಲ. ಹೀಗಾಗಿ ಗುತ್ತಿಗೆದಾರನ ಮೇಲೆ ಕ್ರಮಕ್ಕೆ ಸಾಧ್ಯವಾಗಿಲ್ಲ. ಅಲ್ಲಿಯವರೆಗೂ ಸಂಧಾನದಿಂದ ಎಲ್ಲರೂ ವರ್ತಿಸುವಂತೆ ಮನವಿ ಮಾಡಿದರು. ಬಳಿಕ ಖಾಸಗಿ ಶಾಲೆಗಳ ಮುಖ್ಯ ಶಿಕ್ಷಕರು ಗುತ್ತಿಗೆ ರದ್ದುಪಡಿಸುವಂತೆ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ ಅವರಿಗೆ ಮನವಿ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

