ಹಣ ದುರುಪಯೋಗ: ಮುಖ್ಯ ಶಿಕ್ಷಕನಿಗೆ ದಿಗ್ಭಂದನ
ಬ್ಯಾಡಗಿ: ಆರೂವರೆ ಲಕ್ಷ ಹಣ ದುರ್ಬಳಕೆ ಮಾಡಿದ ಆರೋಪದ ಮೇಲೆ ಮುಖ್ಯಶಿಕ್ಷಕನೊಬ್ಬನಿಗೆ 3 ತಾಸುಗಳಿಗೂ ಹೆಚ್ಚು ಕಾಲ ಪಾಲಕರು ಹಾಗೂ ಗ್ರಾಪಂ ಸದಸ್ಯರು ದಿಗ್ಭಂಧನ ವಿಧಿಸಿ ಪ್ರತಿಭಟಿಸಿದ ಘಟನೆ ತಾಲೂಕಿನ ಖುರ್ದಕೋಡಿಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ (ಎಸ್ಡಿಎಂಸಿ) ಅವಧಿ ಮುಗಿದಿದ್ದರೂ ಪ್ರಭಾರಿ ಮುಖ್ಯಶಿಕ್ಷಕ ಎ.ಎನ್. ಬಳ್ಳಾರಿ ಹಾಗೂ ಮಾಜಿ ಅಧ್ಯಕ್ಷ ಪಡಿಯಪ್ಪ ಕುಸುಗಲ್ಲ ಇವರಿಬ್ಬರೂ ಸೇರಿ ಆರೂವರೆ ಲಕ್ಷಕ್ಕೂ ಹೆಚ್ಚು ಹಣವನ್ನು ಇಲಾಖಾ ಅಧಿಕಾರಿಗಳ ಅನುಮತಿಯಿಲ್ಲದೇ ಬ್ಯಾಂಕ್ನಿಂದ ತೆಗೆದಿದ್ದಾರೆ. ಈ ಬಗ್ಗೆ ಅನುಮಾನ ಮೂಡಿದ ಹಿನ್ನೆಲೆಯಲ್ಲಿ ಪಾಲಕರು ಹಾಗೂ ಗ್ರಾಮಸ್ಥರು ದಿಗ್ಭಂಧನ ವಿಧಿಸಿದರು.
ಬ್ಯಾಂಕ್ನಿಂದ ರು. 6.50 ಲಕ್ಷ ಡ್ರಾ: ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಪ್ರಕಾಶ ಕಾಟೇನಹಳ್ಳಿ ಮಾತನಾಡಿ, ಕಳೆದ ಸೆ. 4ರಂದೇ ಎಸ್ಡಿಎಂಸಿ ಅವಧಿ ಮುಗಿದಿದೆ. ಆದರೆ, ಇಂದಿಗೂ ಹೊಸ ಸಮಿತಿ ರಚನೆ ಮಾಡದೆ ಎಸ್ಡಿಎಂಸಿ ಅಧ್ಯಕ್ಷರ ಜೊತೆ ಶಾಮೀಲಾಗಿ ಸೆ. 11ರಂದು ರು. 1.50 ಲಕ್ಷ, ಸೆ. 29ರಂದು ರು. 50 ಸಾವಿರ, ಸೆ. 27ರಂದು ರು. 75 ಸಾವಿರ, ಅ. 10ರಂದು ರು. 1 ಲಕ್ಷ, ಅ. 25ರಂದು ರು. 50 ಸಾವಿರ, ನ. 8ರಂದು ರು. 26.800, ನ. 14ರಂದು ರು. 2 ಲಕ್ಷ ಬ್ಯಾಂಕ್ನಿಂದ ಚೆಕ್ ಮೂಲಕ ಡ್ರಾ ಮಾಡಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಲೆಕ್ಕ ಕೊಡಿ: ಹಣ ಬಿಡುಗಡೆ ಮಾಡುವ ಸಂದರ್ಭದಲ್ಲಿ ಇಲಾಖೆಯ ಮುಖ್ಯಸ್ಥರಾಗಲಿ, ಸಿಆರ್ಪಿ, ಬಿಆರ್ಪಿ, ಸಮನ್ವಯಾಧಿಕಾರಿ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಾರದೇ ಹಣ ಡ್ರಾ ಮಾಡಿಕೊಳ್ಳಲಾಗಿದೆ. ಎಸ್ಡಿಎಂಸಿ ಠರಾವುಗಳಿಲ್ಲದೆ ಬಳಕೆ ಮಾಡಿರುವ ಹಣಕ್ಕೆ ಲೆಕ್ಕ ನೀಡುವಂತೆ ಪಟ್ಟು ಹಿಡಿದರು.
ಸರ್ಕಾರದ ಹಣ ದುರುಪಯೋಗ: ಶಿವಪ್ಪ ಹರಮಗಟ್ಟಿ ಮಾತನಾಡಿ, ಎಸ್ಎಂಸಿ ಖಾತೆಯಲ್ಲಿರುವ ಹಣ ಸರ್ಕಾರದ್ದು. ಅದನ್ನು ಬಳಕೆ ಮಾಡಲು ಎಸ್ಡಿಎಂಸಿ ಹಾಗೂ ಇಲಾಖಾಧಿಕಾರಿಗಳ ಪೂರ್ವಾನುಮತಿ ಕಡ್ಡಾಯ. ಆದರೆ, ಮುಖ್ಯ ಶಿಕ್ಷಕ ಬಳ್ಳಾರಿ ಸ್ವಂತಕ್ಕೆ ಚೆಕ್ ಬರೆದುಕೊಂಡಿದ್ದು, ಹಣ ದುರ್ಬಳಕೆಯಾಗಿರಿರುವುದಕ್ಕೆ ನಿದರ್ಶನವಾಗಿದೆ ಎಂದರು.
ಅಧಿಕಾರಿಗಳ ಭೇಟಿ: ದಿಗ್ಭಂದನ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ, ಸಮನ್ವಯಾಧಿಕಾರಿ ಜಿ. ಸುಮಾ, ದೈಹಿಕ ಶಿಕ್ಷಕ ಪರಿವೀಕ್ಷಕ ಬಿಎಚ್ಎನ್ ರಾವಳ ಸೇರಿದಂತೆ ಇನ್ನಿತರ ಅಧಿಕಾರಿಗಳು ಆಕ್ರೋಶ ಭರಿತ ಪಾಲಕರನ್ನು ಸಮಾಧಾನ ಪಡಿಸಿದರು.
ಬಳಿಕ ಮುಖ್ಯಶಿಕ್ಷಕನನ್ನು ವಿಚಾರಣೆಗೊಳಪಡಿಸಲಾಯಿತು. ಆದರೆ, ಹಣದ ಖರ್ಚಿನ ವಿವರಗಳ ಮಾಹಿತಿ ಲಭ್ಯವಾಗಲಿಲ್ಲ.
ನೋಟಿಸ್ ಜಾರಿ: ಎಸ್ಡಿಎಂಸಿ ಅವಧಿ ಮುಗಿದಿದ್ದರೂ ಬ್ಯಾಂಕ್ನಿಂದ ಹಣಬಿಡುಗಡೆ ಮಾಡಿ ಕರ್ತವ್ಯಲೋಪ ಎಸಗಿದ ಮುಖ್ಯಶಿಕ್ಷಕ ಎ.ಎನ್. ಬಳ್ಳಾರಿ ಅವರಿಗೆ ಸಮನ್ವಯಾಧಿಕಾರಿ ಜಿ. ಸುಮಾ ಮತ್ತು ದೈಹಿಕ ಶಿಕ್ಷಕ ಪರಿವೀಕ್ಷಕ ಬಿ.ಎಚ್.ಎನ್. ರಾವಳ ಸ್ಥಳದಲ್ಲೇ ನೋಟಿಸ್ ಜಾರಿ ಮಾಡಿದರು.
ಖಾಸಗಿ ದೂರು: ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಪಂ ಸದಸ್ಯ ಪ್ರಕಾಶ ಕಾಟೇನಹಳ್ಳಿ ಸರ್ಕಾರದ ಹಣ ದುರುಪಯೋಗ ಮಾಡಿದ ಹಿನ್ನೆಲೆಯಲ್ಲಿ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಖಾಸಗಿ ದೂರು ಸಲ್ಲಿಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ರಾಮಣ್ಣ ಮಾತನವರ, ಶಿವಪುತ್ರಪ್ಪ ಗುಬ್ಬಿ, ಗುಂಡಪ್ಪ ಹೊಸಳ್ಳಿ, ಭರಮಪ್ಪ ಕಜ್ಜರಿ, ಚನ್ನಪ್ಪ ವರ್ದಿ, ಬಸವರಾಜ ಕಜ್ಜರಿ ಇನ್ನಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

