40 ವರ್ಷವಾದ್ರೂ ನೀರಿಲ್ಲ, ಕರೆಂಟೂ ಕೊಟ್ಟಿಲ್ಲ
ಕನ್ನಡಪ್ರಭ ವಾರ್ತೆ, ಹಾವೇರಿ, ನ. 21
ಇವರಿಗೆ ಜಾನುವಾರು ಸಾಕಾಣೆ, ಹೈನುಗಾರಿಕೆ ಬಿಟ್ಟರೆ ಮತ್ತೇನೂ ಗೊತ್ತಿಲ್ಲ. ನಾಗರಿಕ ಸಮಾಜದ ಯಾವ ಕುರುಹೂ ಇಲ್ಲಿ ಕಾಣುವುದಿಲ್ಲ. ಸರ್ಕಾರಕ್ಕೂ ಈ ಪಶುಪಾಲಕರು ಕಂಡಿಲ್ಲ. ಆದ್ದರಿಂದ 40 ವರ್ಷಗಳ ಹಿಂದೆ ಬಂದು ಅರಣ್ಯದ ಮಧ್ಯೆ ನೆಲೆಸಿದವರು ಇಂದೂ ಅದೇ ಸ್ಥಿತಿಯಲ್ಲಿದ್ದಾರೆ. ನಾಗರಿಕ ಸೌಲಭ್ಯ ಇವರತ್ತ ಇಣುಕಿಯೂ ನೋಡಿಲ್ಲ.
ಹೌದು... ಜಗತ್ತೇ ತಂತ್ರಜ್ಞಾನದ ಯುಗದಲ್ಲಿದ್ದರೆ ಇವರಿನ್ನೂ ಕತ್ತಲೆಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಶಿಗ್ಗಾಂವಿ ತಾಲೂಕಿನ ಗೌಳಿ ದೊಡ್ಡಿಯ ಸುಮಾರು 20 ಕುಟುಂಬಗಳು ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿರುವ ಹಾಗೂ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವವರ ಕತೆಯಿದು.
40 ವರ್ಷಗಳಿಂದ ವಾಸಿಸುತ್ತಿದ್ದರೂ ಇವರ ಗುಡಿಸಲುಗಳಿಗೆ ಬೆಳಕಿನ ಭಾಗ್ಯ ಇಲ್ಲ. 100ಕ್ಕೂ ಹೆಚ್ಚು ಜನರಿಗೆ ಒಂದೇ ಕೊಳವೆ ಬಾವಿಯಿದ್ದು, ಅದು ಕೈಕೊಟ್ಟಾಗ ಕಣ್ಣೀರೇ ಗತಿ. ಸರ್ಕಾರದ ವಸತಿ ಯೋಜನೆಗಳೂ ಇವರತ್ತ ಸುಳಿದಿಲ್ಲ. ಅರಣ್ಯದಲ್ಲಿ ಜಾನುವಾರು ಮೇಯಿಸಿಕೊಂಡು, ಹಾಲು ಮಾರಾಟ ಮಾಡಿಕೊಂಡೇ ಜೀವನ ಸಾಗಿಸುವ ಇವರ ಗೋಳು ಯಾರಿಗೂ ಕಾಣುತ್ತಲೇ ಇಲ್ಲ.
40 ವರ್ಷದ ಹಿಂದೆ ಬಂದವರು: ಬೆಳಗಾವಿ ಜಿಲ್ಲೆ ಸಾವಂತವಾಡಿಯಿಂದ ಸುಮಾರು 40 ವರ್ಷಗಳ ಹಿಂದೆ ಜಾನುವಾರುಗಳೊಂದಿಗೆ ಬಂದ ಮೂರ್ನಾಲ್ಕು ಕುಟುಂಬ ಬೆಳೆದು ಈಗ 20 ಕುಟುಂಬಗಳಾಗಿವೆ. ಪ್ರತಿ ಕುಟುಂಬದಲ್ಲೂ 6-8 ಜನರಿದ್ದಾರೆ. ಈ ಗೌಳಿ ದೊಡ್ಡಿಯಲ್ಲೇ 20ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಆದರೆ, ಈ ಮಕ್ಕಳಿಗೆ ಶಾಲೆಯೂ ದೂರವಾಗಿದೆ. ಸುಮಾರು 3 ಕಿಮೀ ದೂರದ ನ್ಯಾಸರ್ಗಿ ಶಾಲೆಗೆ ಹೋಗಿ ಕಲಿಯಬೇಕು. ದೊಡ್ಡಿ ಮಧ್ಯೆಯೇ ವಿದ್ಯುತ್ ಕಂಬಗಳು ಸಾಗಿದರೂ ಇವರ ಗುಡಿಸಲುಗಳಿಗೆ ವಿದ್ಯುತ್ ಸೌಲಭ್ಯ ನೀಡಿಲ್ಲ. ಇದರಿಂದ ರೇಡಿಯೋ, ಟಿವಿ ಸೇರಿದಂತೆ ಆಧುನಿಕ ಸಮಾಜದ ಸೌಲಭ್ಯಗಳು ದೊಡ್ಡಿ ಪ್ರವೇಶವನ್ನೇ ಮಾಡಿಲ್ಲ. ಹೀಗಾಗಿ, ಇವರಿಗೆ ಸಮಾಜದ ಆಗುಹೋಗು ತಿಳಿಯುತ್ತಿಲ್ಲ. ದನ ಕಾಯುವುದು, ಹಾಲು ಮಾರುವುದಷ್ಟೇ ಇವರ ಕಾಯಕವಾಗಿದೆ.
ಒಕ್ಕಲೆಬ್ಬಿಸುವ ಯತ್ನ: ಗೌಳಿ ದೊಡ್ಡ ನಿವಾಸಿಗಳಿಗೆ ಸಿಕ್ಕ ಅತಿದೊಡ್ಡ ಸೌಲತ್ತು ಎಂದರೆ ಮತದಾರರ ಗುರುತಿನ ಚೀಟಿ ಹಾಗೂ ರೇಶನ್ ಕಾರ್ಡ್. ಮತ ಕೇಳಲು ಮಾತ್ರ ಬರುವ ಜನಪ್ರತಿನಿಧಿಗಳು ನಂತರ ಇವರ ಕಷ್ಟಸುಖ ಕೇಳಲು ತಿರುಗಿ ಬಂದಿಲ್ಲ. ಅರಣ್ಯ ಭೂಮಿಯಲ್ಲೇ ಕೆಲವರು ಸಾಗುವಳಿ ಮಾಡುತ್ತಿದ್ದರು. ಆದರೆ, ಈಚೆಗೆ ಅರಣ್ಯ ಇಲಾಖೆಯವರು ಸಾಗುವಳಿ ಜಮೀನನ್ನು ವಶಪಡಿಸಿಕೊಂಡಿದ್ದಾರೆ. ಮುರಿದುಬೀಳುವ ಹಂತದಲ್ಲಿರುವ ಗುಡಿಸಲುಗಳು ಮಾತ್ರ ಈಗ ಇವರ ಇರುವಿಕೆಗೆ ಸಾಕ್ಷಿಯಾಗಿ ಕಾಡಿನ ಮಧ್ಯೆ ನಿಂತಿವೆ.
ಆಸ್ಪತ್ರೆಯೂ ದೂರ: ಗೌಳಿ ದೊಡ್ಡಿ ಶಿಗ್ಗಾಂವಿಯಿಂದ 25 ಕಿಮೀ ದೂರದಲ್ಲಿದೆ. ಆದರೆ, ಮುಂಡಗೋಡ ಕೇವಲ 5 ಕಿಮೀ ಅಂತರದಲ್ಲಿದೆ. ಆದ್ದರಿಂದ ಇವರು ಹಾಲುತ್ಪನ್ನ ಮಾರಲು ಮುಂಡಗೋಡಕ್ಕೆ ಹೋಗುತ್ತಾರೆ. ಹೆರಿಗೆ ಮುಂತಾದ ತುರ್ತು ಸಂದರ್ಭ ಮುಂಡಗೋಡಕ್ಕೆ ಹೋದರೆ ಅಲ್ಲಿನ ಆಸ್ಪತ್ರೆಗಳಲ್ಲಿ ಶಿಗ್ಗಾಂವಿಗೆ ಹೋಗಿ ಎಂಬ ಉತ್ತರ ಸಿಗುತ್ತದೆ. ಶಿಗ್ಗಾಂವಿಗೆ ಹೋಗಲು ಇವರಿಗೆ ಸರಿಯಾದ ರಸ್ತೆ, ಸಾರಿಗೆ ಸಂಪರ್ಕವಿಲ್ಲ.
ತತ್ತರಿಸಿರುವ ಗೌಳಿಗಳು: ಕೆಲ ತಿಂಗಳ ಹಿಂದೆ ಕಾಲುಬಾಯಿ ರೋಗ ಕಾಣಿಸಿಕೊಂಡು ಗೌಳಿ ದೊಡ್ಡಿಯಲ್ಲಿನ 25ಕ್ಕೂ ಹೆಚ್ಚು ದನಕರಗಳು ಮೃತಪಟ್ಟಿವೆ. ಇದರಿಂದ ಗೌಳಿಗಳು ಅಕ್ಷರಶಃ ನಲುಗಿದ್ದಾರೆ. ಯಾವ ಪರಿಹಾರವೂ ಇವರಿಗೆ ಸಿಕ್ಕಿಲ್ಲ. ವರ್ಷದ ಹಿಂದಿನ ವರೆಗೂ ಹೈನುಗಾರಿಕೆ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ, ಈಗ ಮೇವಿನ ಕೊರತೆ, ಕಾಲುಬಾಯಿ ರೋಗದಿಂದ ಹಾಲು ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಇದು ಗೌಳಿಗಳನ್ನು ಅಧೀರರನ್ನಾಗಿಸಿದೆ.
- ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

