ಹಾವೇರಿ

ಕರ ಬಾಕಿ ವಸೂಲಿ: 2 ವಾರದಲ್ಲಿ ಸ್ವಚ್ಛ ನಗರ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ನ. 22
ಆಡಳಿತ ಚುರುಕುಗೊಳಿಸಿ ಆದಾಯ ಹೆಚ್ಚಿಸಲು ಹಾಗೂ ನಗರವನ್ನು ಮಾದರಿಯನ್ನಾಗಿಸಲು ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಕೆಲ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಮನೆ ಮನೆಗೆ ಹೋಗಿ ಬಾಕಿಯಿರುವ ತೆರಿಗೆ ವಸೂಲಿಗೆ ಕ್ರಮ ಕೈಗೊಂಡಿದ್ದಾರೆ. ವಾರದೊಳಗೆ ಎಲ್ಲ 31 ವಾರ್ಡುಗಳಲ್ಲಿನ ಚರಂಡಿ ಸ್ವಚ್ಛಗೊಳಿಸಲು ಯೋಜನೆ ರೂಪಿಸಿದ್ದಾರೆ.
ನಗರಸಭೆ ಅಧ್ಯಕ್ಷ ಐ.ಯು. ಪಠಾಣ ಹಾಗೂ ಪೌರಾಯುಕ್ತ ಶಿವಕುಮಾರಯ್ಯ ಅವರು ಪತ್ರಿಕೆಯೊಂದಿಗೆ ಮಾತನಾಡಿ, ತಾವು ಕೈಗೊಳ್ಳುತ್ತಿರುವ ಯೋಜನೆಗಳ ಬಗ್ಗೆ ವಿವರ ನೀಡಿದರು. ನಗರಸಭೆಗೆ ಬರುವ ತೆರಿಗೆ ಹಣ ಇದುವರೆಗೆ ಸಮರ್ಪಕವಾಗಿ ವಸೂಲಿ ಆಗುತ್ತಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸುಮಾರು ರು. 2 ಕೋಟಿ ನೀರಿನ ತೆರಿಗೆ, ರು. 1.50 ಕೋಟಿ ಕಟ್ಟಡ ತೆರಿಗೆ, ರು. 10 ಲಕ್ಷ ವ್ಯಾಪಾರ ತೆರಿಗೆ, ರು. 40 ಲಕ್ಷದಷ್ಟು ವಾಣಿಜ್ಯ ತೆರಿಗೆ ಸೇರಿದಂತೆ ಸುಮಾರು ರು. 4 ಕೋಟಿಗೂ ಹೆಚ್ಚು ತೆರಿಗೆ ಬಾಕಿಯಿದೆ. ಅದನ್ನು ವಸೂಲಿ ಮಾಡುವುದಕ್ಕೆ ಆದ್ಯತೆ ನೀಡಲಾಗಿದೆ. ಆದ್ದರಿಂದ ಈಗಾಗಲೇ ನಗರಸಭೆ ಸಿಬ್ಬಂದಿಯನ್ನು ಮನೆಮನೆಗೆ ಕಳುಹಿಸಿ ಕರ ವಸೂಲಿ ಮಾಡಲಾಗುತ್ತಿದೆ. ಇದನ್ನು ಆಂದೋಲನದ ರೀತಿ ಕೈಗೊಂಡಿದ್ದು, 1 ತಿಂಗಳವರೆಗೂ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಚರಂಡಿ ಸ್ವಚ್ಛತೆಗೆ ಆದ್ಯತೆ: ಚರಂಡಿ ತುಂಬ ಕಸ, ತ್ಯಾಜ್ಯ ತುಂಬಿ ನಗರದ ವಾತಾವರಣ ಹದಗೆಟ್ಟಿತ್ತು. ಈ ಬಗ್ಗೆ ಸಾರ್ವಜನಿಕರಿಂದಲೂ ದೂರು ಕೇಳಿಬಂದಿತ್ತು. ಆದ್ದರಿಂದ ನಗರದ ಎಲ್ಲ 31 ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದೆ. 10 ಲಕ್ಷ ವೆಚ್ಚದಲ್ಲಿ 15 ದಿನದೊಳಗೆ ಚರಂಡಿ ಸ್ವಚ್ಛತೆ ಕೈಗೊಳ್ಳಲಾಗುವುದು. ಪೌರ ಕಾರ್ಮಿಕರನ್ನು ಪ್ರತಿದಿನ ಒಂದೊಂದು ವಾರ್ಡ್‌ಗಳಿಗೆ ನಿಯೋಜಿಸಿ ಕೆಲಸ ಮಾಡಿಸಲಾಗುವುದು. ಸೋಮವಾರದಿಂದ ಈ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾಮಗಾರಿಗೆ ಕ್ರಿಯಾಯೋಜನೆ: 2011-12, 12-13ನೇ ಸಾಲಿನಲ್ಲಿ ಕೆಲ ಯೋಜನೆಗಳ ಕ್ರಿಯಾಯೋಜನೆಯನ್ನೇ ಸಲ್ಲಿಸದೇ ಅನುದಾನ ಬಳಕೆಯಾಗಿಲ್ಲ. ಆದ್ದರಿಂದ ಈಗ ಹೊಸದಾಗಿ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಎಂಎಸ್‌ಡಿಪಿ ಯೋಜನೆಯಲ್ಲಿ ರು. 15 ಕೋಟಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಪಸಂಖ್ಯಾತ ಕಲ್ಯಾಣಕ್ಕಾಗಿ ಇದನ್ನು ಬಳಸಲಾಗುವುದು. ಎಸ್‌ಎಫ್‌ಸಿ ಯೋಜನೆಯಲ್ಲಿ ರು. 3.95 ಕೋಟಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಇದರಲ್ಲಿ ಪರಿಶಿಷ್ಟ ಜಾತಿ, ಪಂಗಡದ ಓಣಿಗಳಲ್ಲಿ ರಸ್ತೆ, ಮನೆ, ಚರಂಡಿ ಇನ್ನಿತರ ಕಾಮಗಾರಿ ನಿರ್ವಹಿಸಲಾಗುವುದು. ಅಲ್ಲದೇ ಯುವ ಎಸ್ಸೆಸ್‌ಡಿಎಂಟಿ ಯೋಜನೆಯಡಿ ರು. 30 ಕೋಟಿ ಪ್ರಸ್ತಾವನೆಯನ್ನೂ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಎಲ್ಲ ಕಾಮಗಾರಿಗಳನ್ನು ಶೀಘ್ರ ಕೈಗೊಂಡು ನಗರದ ಚಿತ್ರಣ ಬದಲಿಸಲಾಗುವುದು ಎಂದರು.
ಒಳಚರಂಡಿ ಜೋಡಣೆ ಕಾಮಗಾರಿ ಅರ್ಧಮರ್ಧ ಆಗಿದೆ. ಗುತ್ತಿಗೆದಾರರೇ ಕೆಲಸ ಮಾಡಲಾಗದೇ ಹೋಗಿದ್ದಾರೆ. ರಸ್ತೆ ಹಾಗೂ ಚರಂಡಿ ಅಗೆದು ಹಾಕಿದ್ದರಿಂದ ಸಮಸ್ಯೆಯಾಗಿದೆ. ಯುಜಿಡಿ ಕಾಮಗಾರಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರ ಮೇಲೆ ಶಿಸ್ತು ಕ್ರಮಕ್ಕೆ ವರದಿ ಸಲ್ಲಿಸಲಾಗಿದೆ. ಅಲ್ಲದೇ ಅವರಿಗೆ ಬ್ಯಾಂಕ್ ಗ್ಯಾರಂಟಿ ನೀಡಿದ್ದ ಬ್ಯಾಂಕ್ ಅಧಿಕಾರಿ ಮೇಲೂ ಕ್ರಮ ಕೈಗೊಳ್ಳುವಂತೆ ವರದಿ ನೀಡಲಾಗಿದೆ. ಈ ಹಿಂದೆ ಎಂಜಿನಿಯರ್‌ಗಳಿಗೆ ಕಾಮಗಾರಿ ನಿರ್ವಹಣೆಗೆ ಮುಂಗಡವಾಗಿ ಹಣ ನೀಡಲಾಗಿತ್ತು. ಅದನ್ನು ಈಗ ವಸೂಲಿ ಮಾಡಲಾಗುತ್ತಿದೆ. ಇಲ್ಲಿಂದ ಬೇರೆಡೆ ವರ್ಗಾವಣೆಯಾಗಿರುವ ಎಂಜಿನಿಯರ್‌ಗಳಿಂದಲೂ ಹಣ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ.
ಬೀದಿ ದೀಪ ಅಳವಡಿಕೆ, ತ್ಯಾಜ್ಯ ನಿರ್ವಹಣೆ ಸೇರಿದಂತೆ ನಗರದ ಅಭಿವೃದ್ಧಿಗೆ ಅಗತ್ಯ ಯೋಜನೆ ಹಾಕಿಕೊಳ್ಳಲಾಗಿದೆ. ಕುಡಿವ ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು. ನಂತರದ ಹಂತದಲ್ಲಿ ಅತಿಕ್ರಮಣ ತೆರವು, ನಿಯಮ ಬಾಹಿರವಾಗಿ ಈ ಹಿಂದೆ ನಗರಸಭೆಯಿಂದ ಆಗಿರುವ ಲೋಪಗಳ ತನಿಖೆಯನ್ನೂ ಕೈಗೆತ್ತಿಕೊಳ್ಳಲಾಗುವುದು. ಕಚೇರಿಯಲ್ಲೂ ಪಾರದರ್ಶಕ ಆಡಳಿತ ನೀಡಲಾಗುವುದು. ಸಾರ್ವಜನಿಕರ ಕುಂದು-ಕೊರತೆಗಳಿಗೆ ತಕ್ಷಣ ಸ್ಪಂದಿಸುವ ರೀತಿಯಲ್ಲಿ ಆಡಳಿತದಲ್ಲಿ ಚುರಕುತನ ತರಲು ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ನೂತನ ಪೌರಾಯುಕ್ತ ಶಿವಕುಮಾರಯ್ಯ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.